ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಬಹಿರಂಗ: ಪಿಐಎಲ್‌ ವಜಾ ಕೋರಿ ಹೈಕೋರ್ಟ್‌ಗೆ ಅರ್ಜಿ

Published 2 ಜನವರಿ 2024, 15:09 IST
Last Updated 2 ಜನವರಿ 2024, 15:09 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಎಚ್‌.ಕಾಂತರಾಜು ತಮ್ಮ ಅವಧಿಯಲ್ಲಿ ನಡೆಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗಗೊಳಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಜಾಗೊಳಿಸಬೇಕು‘ ಎಂದು ಕೋರಿ ವಕೀಲರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತಂತೆ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಓದನಹಳ್ಳಿಯ ವಕೀಲ ಓ.ಕೆ.ರಘು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು, ‘ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು‘ ಎಂದು ರಘು ಪರ ವಕೀಲ ಅಭಿಷೇಕ್‌ ಕುಮಾರ್ ಅವರು, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಮಂಗಳವಾರ ಮನವಿ ಮಾಡಿದರು.

‘ವರದಿಯನ್ನು ಬಹಿರಂಗಗೊಳಿಸಿ ಸಾರ್ವಜನಿಕ ಅವಗಾಹನೆಗೆ ತರಬೇಕು ಮತ್ತು ಆಯೋಗವು ಇದನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ದೇಶಿಸಬೇಕು ಎಂದು ಕೋರಿ, ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಗೌರವಾಧ್ಯಕ್ಷರೂ ಆದ ಚಲನಚಿತ್ರ ನಟ ’ಮುಖ್ಯಮಂತ್ರಿ‘ ಚಂದ್ರು ಸೇರಿದಂತೆ ಒಟ್ಟು 13 ವಿವಿಧ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ರಾಜಕೀಯ ದುರುದ್ದೇಶದಿಂದ ಕೂಡಿದೆ‘ ಎಂದು ಅಭಿಷೇಕ್‌ ನ್ಯಾಯಪೀಠಕ್ಕೆ ವಿವರಿಸಿದರು.

‘ಈ ವರದಿ ಕಾನೂನು ಬದ್ಧವಾಗಿಲ್ಲ. ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ. ಕರ್ನಾಟಕ ಹೈಕೋರ್ಟ್ ನಿಯಮಾವಳಿ 11 ಮತ್ತು 12ರ ಅನುಸಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಅರ್ಜಿದಾರ ತನ್ನ ಪೂರ್ವಾಪರವನ್ನು ಹೈಕೋರ್ಟ್‌ಗೆ ಪ್ರಸ್ತುಪಡಿಸಬೇಕು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ಪೂರ್ವಾಪರಗಳನ್ನೇ ಬಹಿರಂಗಗೊಳಿಸಿಲ್ಲ. ವರದಿ ಬಹಿರಂಗಗೊಳ್ಳುವಂತೆ ಹೈಕೋರ್ಟ್‌ನಿಂದ ನ್ಯಾಯಾಂಗದ ಆದೇಶ ಪಡೆದು ಅದರಿಂದ ರಾಜಕೀಯ ಲಾಭ ಪಡೆಯುವುದು ಅರ್ಜಿದಾರರ ಹುನ್ನಾರ‘ ಎಂದು ಆರೋಪಿಸಿದರು.

‘ಎಂಟು ವರ್ಷಗಳ ಹಿಂದೆ ತಯಾರಿಸಲಾಗಿರುವ ಈ ವರದಿ ಹಲವು ಕಾರಣಗಳಿಂದಾಗಿ ಇನ್ನೂ ಬೆಳಕಿಗೆ ಬಂದಿಲ್ಲ. ಆಯೋಗದ ಬಳಿ ಮೂಲ ವರದಿಯೇ ಇಲ್ಲ. ಒಂದೆಡೆ ಮೂಲ ವರದಿ ಕಳುವಾಗಿದೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದೆಡೆ, ಆಯೋಗದ ಸದಸ್ಯ ಕಾರ್ಯದರ್ಶಿ ಈ ವರದಿಗೆ ಸಹಿ ಮಾಡಿಲ್ಲ ಎಂಬ ಅಂಶವನ್ನೂ ಕೋರ್ಟ್‌ ಗಮನಿಸಬೇಕಿದೆ. ವರದಿಯಲ್ಲಿರುವ ಪ್ರಮುಖ ಅಂಶಗಳೆಲ್ಲವೂ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಈ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಕೋರಲಾದ ಅರ್ಜಿಗೆ ಉತ್ತರಿಸಿರುವ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು, ಮಾಹಿತಿಯು ಗೋಪ್ಯ ಸ್ವರೂಪದ್ದಾಗಿದೆ ಎಂಬ ಉತ್ತರ ನೀಡಿದ್ದು ಇವೆಲ್ಲವೂ ಸಾಕಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ‘ ಎಂದು ಅಭಿಷೇಕ್‌ ನ್ಯಾಯಪೀಠಕ್ಕೆ ತಿಳಿಸಿದರು.

‘ಆಯೋಗವು ವರದಿಯ ದಸ್ತಾವೇಜಿನ ಅಸ್ತಿತ್ವವನ್ನು ಅಲ್ಲಗಳೆಯುತ್ತಿಲ್ಲ. ಆದರೆ, ಕೋರಿದ ಮಾಹಿತಿಯನ್ನು ಅರ್ಜಿದಾರರಿಗೆ ನಿಖರವಾಗಿ ಒಪ್ಪಿಸದೆ ಸುತ್ತುಬಳಸಿನ ಉತ್ತರ ನೀಡಿದೆ. ಮತ್ತೂ ಆಶ್ಚರ್ಯಕರ ಸಂಗತಿ ಎಂದರೆ ವರದಿಯ ಬಗ್ಗೆ ಈಗಾಗಲೇ ಸಾರ್ವಜನಿಕ ವಲಯದಲ್ಲಿ, ವಿವಿಧ ಮಾಧ್ಯಮಗಳ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆ ನಡೆಸಲಾಗಿದೆ, ಆದ್ದರಿಂದ, ಮುಖ್ಯಮಂತ್ರಿ ಚಂದ್ರು ಮತ್ತಿತರು ಸಲ್ಲಿಸಿರುವ ಅರ್ಜಿಯನ್ನು ಯಾವೆಲ್ಲಾ ಕಾರಣಗಳಿಗೆ ವಜಾಗೊಳಿಸಬಹುದು ಎಂಬುದನ್ನು ಅಲಿಸಲು ನ್ಯಾಯಪೀಠವು ಮಧ್ಯಂತರ ಅರ್ಜಿದಾರರ ವಾದವನ್ನೂ ಮನ್ನಿಸಬೇಕು‘ ಎಂದು ಕೋರಿದರು.

ಇದಕ್ಕೆ ನ್ಯಾಯಪೀಠವು, ‘ಮುಖ್ಯಮಂತ್ರಿ ಚಂದ್ರು ಮತ್ತಿತರರು ಸಲ್ಲಿಸಿರುವ ಅರ್ಜಿಯಲ್ಲಿ ಮಧ್ಯಂತರ ಆದೇಶ ನೀಡಲಾಗಿಲ್ಲ. ಹೀಗಾಗಿ, ನಿಮ್ಮ ಮಧ್ಯಂತರ ಅರ್ಜಿ ಸೇರ್ಪಡೆ ವಿಚಾರವನ್ನು ಮೂಲ ಅರ್ಜಿಯ ಮುಂದಿನ ವಿಚಾರಣೆಯಲ್ಲಿ ಪರಿಶೀಲಿಸೋಣ‘ ಎಂದು ಪ್ರತಿಕ್ರಿಯಿಸಿತು.

ಮುಖ್ಯಮಂತ್ರಿ ಚಂದ್ರು ಸಲ್ಲಿಸಿರುವ ಪಿಐಎಲ್‌ನಲ್ಲಿ (ಡಬ್ಲ್ಯೂ.ಪಿ.13803/2021) ತಿಗಳ ಕ್ಷತ್ರಿಯ ಮಹಾಸಭಾ, ಕರ್ನಾಟಕ ಪ್ರದೇಶ ಕುರುಬರ ಸಂಘ, ಕರ್ನಾಟಕ ರಾಜ್ಯ ಮಡಿವಾಳರ ಸಂಘ, ಸೂರ್ಯವಂಶ ಆರ್ಯ ಕ್ಷತ್ರಿಯ ಸಮಾಜ, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘ, ಕರ್ನಾಟಕ ರಾಜ್ಯ ದೇವಾಂಗ ಸಂಘ, ಕರ್ನಾಟಕ ರಾಜ್ಯ ಕ್ಷತ್ರಿಯ ಸಂಘ, ಕರ್ನಾಟಕ ರಾಜ್ಯ ಸುಡುಗಾಡು ಸಿದ್ದ ಮಹಾ ಸಂಘ ಮತ್ತು ಅಲೆಮಾರಿ ಬುಡಕಟ್ಟು ಮಹಾಸಭಾಗಳೂ ಅರ್ಜಿದಾರರಾಗಿವೆ.

ಅಂತೆಯೇ, ಈ ಪಿಐಎಲ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಸ್.ನಟರಾಜ್ ಹಾಗೂ ಒಕ್ಕಲಿಗರ ಮುಖಂಡ ಹಾಸನದ ಉದ್ಯಮಿ ಕೃಷ್ಣೇಗೌಡ ಸಲ್ಲಿಸಿರುವ ಮಧ್ಯಂತರ ಅರ್ಜಿಗಳೂ ವಿಚಾರಣೆಗೆ ಬಾಕಿ ಇವೆ. ‘ಸಂವಿಧಾನದ 7ನೇ ಪರಿಚ್ಛೇದದ ಸೂಚಿತ ಪಟ್ಟಿ 1ರ 69ನೇ ಪ್ರವೇಶದ ಅನುಸಾರ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸುವ ಅಧಿಕಾರವಿಲ್ಲ. ಇದರ ಅಧಿಕಾರ ಏನಿದ್ದರೂ ಕೇಂದ್ರ ವ್ಯಾಪ್ತಿಗೆ ಒಳಪಟ್ಟಿದೆ’ ಎಂದು ಬಿ.ಎಸ್‌.ನಟರಾಜ್‌ ಮತ್ತು ಕೃಷ್ಣೇಗೌಡ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

2015ರಲ್ಲಿ ನಡೆಸಲಾಗಿರುವ ಜಾತಿ ಗಣತಿಯನ್ನು ಪ್ರಶ್ನಿಸಿ ಬೀದರ್‌ನ ಶಿವರಾಜ್‌ ಕಣಶೆಟ್ಟಿ, ನರಗುಂದದ ಚಂದ್ರಶೇಖರ ಸಾಂಬ್ರಾಣಿ, ಹುನಗುಂದದ ಬಸವರಾಜ ದಿಂಡೂರ ಮತ್ತು ಬೆಂಗಳೂರಿನ ಎಂ.ಎಸ್.ನಟರಾಜ್‌ ಸಲ್ಲಿಸಿರುವ ಮತ್ತೊಂದು ಪಿಐಎಲ್‌ (ಡಬ್ಲ್ಯೂ.ಪಿ.9258/2015) ಇದೇ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ಮುಂದೆ ಸದ್ಯ ವಿಚಾರಣೆಯ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT