ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Bandh | ರಸ್ತೆ ತಡೆಗೆ ಯತ್ನಿಸಿದವರು ಪೊಲೀಸ್ ವಶಕ್ಕೆ

Published 29 ಸೆಪ್ಟೆಂಬರ್ 2023, 23:44 IST
Last Updated 29 ಸೆಪ್ಟೆಂಬರ್ 2023, 23:44 IST
ಅಕ್ಷರ ಗಾತ್ರ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ದೊರಕಿತು.

ಮಂಡ್ಯ ಜಿಲ್ಲೆಯ ಬೆಂಗಳೂರು– ಮೈಸೂರು ಹೆದ್ದಾರಿ, ರೈಲು ತಡೆಯಲೆತ್ನಿಸಿದ ನೂರಾರು ಕಾರ್ಯ
ಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಶ್ರೀರಂಗಪಟ್ಟಣ ತಾಲ್ಲೂಕು ಗರುಡನ ಉಕ್ಕಡ ಬಳಿ ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಹೆದ್ದಾರಿ ಸರ್ವೀಸ್‌ ರಸ್ತೆಯಲ್ಲಿ ಸಭೆ ನಡೆಸುತ್ತಿರುವಾಗಲೇ 500ಕ್ಕೂ ಹೆಚ್ಚು ಕಾರ್ಯಕರ್ತರು ಹೆದ್ದಾರಿಗೆ ನುಗ್ಗಿದರು. ಕಾದು ಕುಳಿತಿದ್ದ ಪೊಲೀಸರು ಅವರನ್ನು ಎಳೆದೊಯ್ದು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಕೂರಿಸಿದರು. ಜಾನುವಾರುಗಳನ್ನು ಹೆದ್ದಾರಿಗೆ ನುಗ್ಗಿಸಲು ಯತ್ನಿಸಿದವರನ್ನೂ ಎಳೆದು ಹಾಕಿದರು. ಪೊಲೀಸರು–ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ‘ಸರ್ಕಾರ ಪೊಲೀಸರ ಮೂಲಕ ಹೋರಾಟವನ್ನು ಹತ್ತಿಕ್ಕುತ್ತಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ 250ಕ್ಕೂ ಹೆಚ್ಚು ಕಾರ್ಯಕರ್ತರನ್ನು
ವಶಕ್ಕೆ ಪಡೆದ ಪೊಲೀಸರು, ಶ್ರೀರಂಗನಾಥ ಕಲ್ಯಾಣ ಮಂಟಪಕ್ಕೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ದಕ್ಷಿಣ ವಲಯ ಐಜಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ರೈಲುತಡೆಗೆ ಯತ್ನ: ಮದ್ದೂರಿನ ಗೆಜ್ಜಲಗೆರೆ ಬಳಿ ವಂದೇ ಭಾರತ್, ಭಾಗಮತಿ ಎಕ್ಸ್‌ಪ್ರೆಸ್‌ ರೈಲು ತಡೆಯಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ರೈಲ್ವೆ ಗೇಟ್‌ಬಳಿ ರೈಲು ತಡೆಯಲು ಪ್ರತಿಭಟನಕಾರರು ಸಿದ್ಧವಾಗಿದ್ದರು. ಆದರೆ ಪೊಲೀಸರು ಗೇಟ್‌ನ ಎರಡೂ ಕಡೆ ಬ್ಯಾರಿಕೇಡ್‌ ಹಾಕಿ ಬಂದೋಬಸ್ತ್‌ ಮಾಡಿದ್ದರು. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ
ಪ್ರತಿಭಟನಕಾರರು ರೈಲು ಹಳಿ ಮೇಲೆ ಓಡಿದರು. ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. 

ಮಣ್ಣು ತಿಂದು, ಸಗಣಿ ನೀರು ಸುರಿದುಕೊಂಡು ಗಮನ ಸೆಳೆದಿದ್ದ ಬಿಜೆಪಿ ಕಾರ್ಯಕರ್ತ ಶಿವಕುಮಾರ್‌ ಆರಾಧ್ಯ ಶುಕ್ರವಾರ
ಹಸಿಮೆಣಸಿನಕಾಯಿ ತಿಂದರು. ಕೆ.ಆರ್.ಪೇಟೆಯಲ್ಲಿ ಸಂಘಟನೆಗಳು ಕೈಗೊಂಡ ನಿರ್ಧಾರದಂತೆ ಬಂದ್‌ ಸಾಂಕೇತಿಕವಾಗಿ ನಡೆಯಿತು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಚಿತ್ರ ನಿರ್ದೇಶಕ ಪ್ರೇಮ್‌, ಚಕ್ರವರ್ತಿ ಸೂಲಿಬೆಲೆ, ಮಂಗಳಮುಖಿಯರು ಬೆಂಬಲ ಸೂಚಿಸಿದರು.

ಸ್ಟಾಲಿನ್‌ ಚಿತ್ರಕ್ಕೆ ರಕ್ತ...

ಕಸ್ತೂರಿ ಜನಪರ ವೇದಿಕೆ ಸದಸ್ಯರು ಮಂಡ್ಯದ ಜೆ.ಸಿ.ವೃತ್ತದಲ್ಲಿ ಕೈ ರಕ್ತನಾಳವನ್ನು ಕೊಯ್ದುಕೊಂಡು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಭಾವಚಿತ್ರದ ಮೇಲೆ ಹರಿಸಿದರು. ‘ರಕ್ತ ಬಿಜಾಸುರ ಸ್ಟಾಲಿನ್‌ಗೆ ರಕ್ತ ಕೊಡುತ್ತೇವೆ, ನೀರು ಕೊಡುವುದಿಲ್ಲ’ ಎಂದು ಘೋಷಣೆ ಕೂಗಿದರು.

ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಕಾರ್ಯಕರ್ತರ ಕೈಗಳಿಗೆ ಬ್ಯಾಂಡ್‌ ಸುತ್ತಿ ಉಪಚರಿಸಿದರು. ಇದೇ ವೇಳೆ, ಪ್ರತಿಭಟನಕಾರರು ಸ್ಟಾಲಿನ್‌ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದರು. ಪೊಲೀಸರು ಅದನ್ನು ತಡೆದರು. ಮಳವಳ್ಳಿಯಲ್ಲಿ ಪ್ರತಿಭಟನಕಾರರು ಸ್ಟಾಲಿನ್‌ ಭಾವಚಿತ್ರಕ್ಕೆ ಬೆಂಕಿ ಹಚ್ಚಿದರು.

ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಪ್ರತಿಭಟನಕಾರರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸಂಸದರು, ಕೇಂದ್ರ, ರಾಜ್ಯ ಸರ್ಕಾರಗಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಸಿ. ಎಂ ನಿಲುವಿಗೆ ಒತ್ತಾಯ

‘ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಬೇಕು’ ಎಂದು ಪುನರುಚ್ಚಾರ ಮಾಡಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಆರ್‌ಎ) ಆದೇಶ ಹೊರಬರುತ್ತಿದ್ದಂತೆಯೇಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರು ಮಂಡ್ಯದಲ್ಲಿ ಹೆದ್ದಾರಿ ತಡೆ ಮಾಡಿದರು. ‘ಕರ್ನಾಟಕದ ವಿರುದ್ಧ ನಿಲುವು ತಾಳುತ್ತಿರುವ ಪ್ರಾಧಿಕಾರವನ್ನು ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.

‘ಪ್ರಾಧಿಕಾರದ ಆದೇಶದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ತಮ್ಮ ನಿಲುವು ಪ್ರಕಟಿಸಬೇಕು. ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಲಿದೆ’ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಎಚ್ಚರಿಸಿದರು.

ಕಾಡಾ ಕಚೇರಿ, ಕಬಿನಿಗೆ ಮುತ್ತಿಗೆ ಯತ್ನ...

ಮೈಸೂರಿನಲ್ಲಿ ಹಲವು ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಬಂದ್‌, ಪ್ರತಿಭಟನೆಯಲ್ಲಿ
ಪ್ರತ್ಯೇಕವಾಗಿ ಪಾಲ್ಗೊಂಡರು. ಬೆಳಿಗ್ಗೆಯಿಂದ ಸಂಜೆವರೆಗೂ ಬಂದ್‌ ಸಂಪೂರ್ಣವಾಗಿತ್ತು.
ಮೈಸೂರಿನಲ್ಲಿ ಕಾಡಾ ಕಚೇರಿಗೆ, ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

‘ಜನಪ್ರತಿನಿಧಿಗಳಿಗೆ ಬುದ್ಧಿ ಕೊಡಬೇಕು’ ಎಂದು ಕೋರಿ ಪ್ರಜ್ಞಾವಂತ ನಾಗರಿಕರ ವೇದಿಕೆ ಸದಸ್ಯರು ಅಗ್ರಹಾರದ ನೂರೊಂದು ಗಣಪತಿ ಗುಡಿಯಲ್ಲಿ ಪೂಜೆ ಮಾಡಿದರು.

ಚಾಮರಾಜನಗರದಲ್ಲಿ ರೈತನ ಬಾಯಿಗೆ ಹನಿ ನೀರು ಬಿಟ್ಟು ಪ್ರತಿಭಟಿಸಲಾಯಿತು. ಕುಣಿದಾಡಿ, ರಸ್ತೆಯಲ್ಲಿ ಉರುಳಾಡಿಯೂ ಹಲವರು ಪ್ರತಿಭಟಿಸಿದರು. ಟೈರ್‌ಗೆ ಬೆಂಕಿ ಹಚ್ಚಲು ಬಿಡಲಿಲ್ಲವೆಂದು ಪೆಟ್ರೋಲ್‌ ಬಾಟಲ್‌ ಹಿಡಿದು ಓಡಿದ ರೈತರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದರು. ಹಾಸನದಲ್ಲಿ ಬಸ್‌ ತಡೆಯಲು ಮುಂದಾದವರನ್ನೂ ವಶಕ್ಕೆ ಪಡೆದರು.

ಬಂದ್‌ ನಡುವೆಯೂ, ಮೈಸೂರಿನ ಅರಮನೆಯಲ್ಲಿ ದಸರಾ ಅಂಗವಾಗಿ ಬೀಡುಬಿಟ್ಟಿರುವ ಮಾವುತರು ಮತ್ತು ಕಾವಾಡಿಗಳ ಕುಟುಂಬದವರಿಗೆ ಹೋಳಿಗೆ ಉಪಾಹಾರ ಬಡಿಸುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಏರ್ಪಡಿಸಿತ್ತು.

‘ಯುವ’ ಚಿತ್ರೀಕರಣ ತಡೆಯಲು ಯತ್ನ

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಟ ಯುವ ರಾಜ್‌ಕುಮಾರ್‌ ಅಭಿನಯದ ‘ಯುವ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಧಾವಿಸಿದ ಹೋರಾಟಗಾರರು ಚಿತ್ರೀಕರಣ ನಿಲ್ಲಿಸುವಂತೆ ಒತ್ತಾಯಿಸಿದರು. ‘ನಿಮ್ಮ ತಾತಾ ಡಾ.ರಾಜಕುಮಾರ್‌ ಗೋಕಾಕ್‌ ಚಳವಳಿಯಲ್ಲಿ ಪಾಲ್ಗೊಂಡಿದ್ದವರು. ಅವರ ಮೊಮ್ಮಗನಾಗಿ ನೀವು ಬಂದ್‌ ವೇಳೆ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಅದಕ್ಕೆ ಪ್ರತಿಕ್ರಿಯಿಸಿ ನಟ, ‘ಗುರುವಾರದಿಂದ ಚಿತ್ರೀಕರಣ ಆರಂಭಿಸಲಾಗಿದೆ. ಇಂದು ಬಂದ್‌ ಬೆಂಬಲಿಸಿ ಸ್ಥಗಿತಗೊಳಿಸಿದ್ದೇವೆ. ಲೈಟ್‌ ರಿಪೇರಿ ಇದ್ದ ಕಾರಣ ಬಂದಿದ್ದೇವೆ. ಹೋರಾಟಕ್ಕೆ ಬೆಂಬಲವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT