ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ vs ಡಿ.ಕೆ. ಸುರೇಶ್? ಚರ್ಚೆ

ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ಅವರ ರಾಜೀನಾಮೆಯಿಂದ ತೆರವಾಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ
Published 5 ಜೂನ್ 2024, 16:22 IST
Last Updated 5 ಜೂನ್ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ಸಂಸದರಾಗಿ ಆಯ್ಕೆಯಾದ ಬೆನ್ನಲ್ಲೇ ಅವರ ರಾಜೀನಾಮೆಯಿಂದ ತೆರವಾಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಜೆಡಿಎಸ್‌ನಲ್ಲಿ ಚರ್ಚೆ ಆರಂಭವಾಗಿದೆ. ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಜೆಡಿಎಸ್‌ ವರಿಷ್ಠರ ಕುಟುಂಬ ಒಲವು ತೋರಿದೆ.

ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಚುನಾವಣಾ ಆಯೋಗವು ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಘೋಷಿಸಲಿದೆ. ಆದರೆ, ಕಾಂಗ್ರೆಸ್‌ ಪಕ್ಷವು ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಭಾರಿ ಪ್ರಯತ್ನ ನಡೆಸುವ ಸಾಧ್ಯತೆ ಇರುವುದರಿಂದ ಆದಷ್ಟು ಬೇಗ ಅಭ್ಯರ್ಥಿ ಘೋಷಿಸಬೇಕೆಂಬ ಚರ್ಚೆ ಜೆಡಿಎಸ್‌ನಲ್ಲಿ ನಡೆದಿದೆ.

‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಅನಿತಾ ಕುಮಾರಸ್ವಾಮಿ ಸಕ್ರಿಯ ರಾಜಕಾರಣದಲ್ಲಿರಲು ಹೆಚ್ಚು ಆಸಕ್ತಿ ಹೊಂದಿಲ್ಲ. ನಿಖಿಲ್‌ ಅವರನ್ನೇ ಕಣಕ್ಕಿಳಿಸಬೇಕೆಂಬ ಸಲಹೆಯನ್ನು ಪಕ್ಷದ ಕೆಲವು ಮುಖಂಡರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮುಂದಿಟ್ಟಿದ್ದಾರೆ’ ಎಂದು ಜೆಡಿಎಸ್‌ನ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ಷೇತ್ರ ಉಳಿಸಿಕೊಳ್ಳಲು ಆಗ್ರಹ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಬಿಜೆಪಿ–ಜೆಡಿಎಸ್‌ ಮೈತ್ರಿ ಇರುತ್ತದೆ. ಅಲ್ಲಿ ಸ್ಪರ್ಧೆಗೆ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಕೂಡ ಉತ್ಸುಕರಾಗಿದ್ದಾರೆ. ಆದರೆ, ಜೆಡಿಎಸ್‌ ಶಾಸಕರಿದ್ದ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ ವಿಧಾನಸಭೆಯಲ್ಲಿ ಪಕ್ಷದ ಬಲ ಕುಸಿಯುತ್ತದೆ. ಆ ಕಾರಣದಿಂದ ಜೆಡಿಎಸ್‌ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಒತ್ತಾಯವನ್ನು ಜೆಡಿಎಸ್‌ ರಾಜ್ಯ ‍ಪ‍್ರಮುಖರ ಸಮಿತಿಯ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಹಲವರು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಕುರಿತು ಈ ತಿಂಗಳ ಅಂತ್ಯದೊಳಗೆ ಪಕ್ಷದ ವರಿಷ್ಠರು ತೀರ್ಮಾನಕ್ಕೆ ಬರಲಿದ್ದಾರೆ. ರಾಮನಗರ ಜಿಲ್ಲೆಯ ಜೆಡಿಎಸ್‌ ಮುಖಂಡರ ಜತೆ ಚರ್ಚಿಸಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಜೆಡಿಎಸ್‌ ವರಿಷ್ಠರ ಕುಟುಂಬಕ್ಕೆ ನಿಕಟರಾಗಿರುವ ಮುಖಂಡರೊಬ್ಬರು ಹೇಳಿದರು.

ಸುರೇಶ್‌ ನಡೆಯತ್ತ ಕುತೂಹಲ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌. ಮಂಜುನಾಥ್‌ ಎದುರು ಸೋಲು ಕಂಡಿರುವ ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಬಗ್ಗೆ ಜೆಡಿಎಸ್‌ ನಾಯಕರು ಕುತೂಹಲ ಹೊಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಹೋದರ ಸುರೇಶ್‌ ಅವರನ್ನು ಚನ್ನಪಟ್ಟಣದಲ್ಲಿ ಕಣಕ್ಕಿಳಿಸಿ, ವಿಧಾನಸಭೆಗೆ ಕರೆತರಲು ಯತ್ನಿಸಬಹುದು. ಅಂತಹ ಸಂದರ್ಭ ಎದುರಾದರೆ ಸ್ಪರ್ಧೆ ಎದುರಿಸಲು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಈ ಕಾರಣದಿಂದಾಗಿ ಈಗಿನಿಂದಲೇ ಚುನಾವಣಾ ಸಿದ್ಧತೆಗೆ ಜೆಡಿಎಸ್‌ ವರಿಷ್ಠರು ಮುಂದಾಗಿದ್ದಾರೆ ಎನ್ನುತ್ತಾರೆ ಪಕ್ಷದ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT