ಬೆಂಗಳೂರು: ‘ನಮ್ಮ ಹೊಲಗಳಿಗೆ ನಾವೇ ಒಡೆಯರು. ಅಲ್ಲಿ ದಿನವೂ ದುಡಿದು ಹೊಟ್ಟೆ ತುಂಬ ತಿನ್ನುತ್ತಿದ್ದೇವೆ. ನೆಮ್ಮದಿಯಿಂದ ಇದ್ದೇವೆ. ನಮ್ಮ ಭೂಮಿಯನ್ನು ಕಿತ್ತುಕೊಂಡು, ಬೇರೆಯವರ ಬಳಿ ಕೂಲಿಗೆ ಹೋಗುವಂತೆ ಮಾಡಬೇಡಿ...’

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪೋಲನಹಳ್ಳಿಯ ಯುವರೈತ ಪ್ರಮೋದ್ ಅವರ ಮಾತಿದು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆಯೇ ವೈಮಾನಿಕ ಮತ್ತು ರಕ್ಷಣಾ ಪಾರ್ಕ್ ನಿರ್ಮಾಣಕ್ಕಾಗಿ, ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಒಟ್ಟು 1,777 ಎಕರೆ ಭೂಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಮುಂದಾಗಿದೆ.

ಇದರಲ್ಲಿ 1,289 ಎಕರೆ ಭೂಸ್ವಾಧೀನಕ್ಕೆ ಮಂಡಳಿಯು ಈಚೆಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. 2022ರಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗಿನಿಂದಲೂ ಭೂಸ್ವಾಧೀನವನ್ನು ವಿರೋಧಿಸಿ ಇಲ್ಲಿನ ರೈತರು ನಡೆಸುತ್ತಿರುವ ಧರಣಿ, ಮಂಗಳವಾರ 1,184ನೇ ದಿನ ಪೂರೈಸಿದೆ. ಈ ಹೋರಾಟದಲ್ಲಿ ನಿರತರಾದ ರೈತರನ್ನು ಎದುರುಗೊಂಡಾಗ, ಅವರ ಮಾತು ಪ್ರಮೋದ್ ಅವರ ಮನದಾಳಕ್ಕಿಂತ ಭಿನ್ನವಾಗೇನೂ ಇರಲಿಲ್ಲ.

‘ನಮ್ಮದು ಫಲವತ್ತಾದ ಭೂಮಿ. ವಿಧವಿಧದ ತರಕಾರಿಗಳು, ಹೂವು, ದಾಳಿಂಬೆ–ದ್ರಾಕ್ಷಿ, ಸೊಪ್ಪು ಬೆಳೆಯುತ್ತೇವೆ. ಅವುಗಳ ಪೈಕಿ ಬಹುತೇಕ ರಫ್ತಾಗುತ್ತದೆ. ನಮ್ಮ ಬದುಕಿಗೆ ಚಿನ್ನ ನೀಡುತ್ತಿರುವ ಈ ಭೂಮಿಯನ್ನು ಕಸಿದುಕೊಂಡರೆ, ನಾವು ಹೋಗುವುದಾದರೂ ಎಲ್ಲಿಗೆ’ ಎಂಬುದು ಪೋಲನಹಳ್ಳಿಯ ವೀರಣ್ಣ ಅವರ ಪ್ರಶ್ನೆ.

ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಚೀಮಾಚನಹಳ್ಳಿಯ ರೈತಮುಖಂಡ ರಮೇಶ್, ‘ವೈಮಾನಿಕ ಪಾರ್ಕ್ಗೆ ಮೊದಲ ಹಂತದಲ್ಲಿ 1,282 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆಗ ಭೂಮಿ ಕಳೆದುಕೊಂಡವರಲ್ಲಿ ಹಲವರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇದನ್ನೆಲ್ಲಾ ರೈತರು ನೋಡಿದ್ದಾರೆ. ಭೂಸ್ವಾಧೀನವನ್ನು ವಿರೋಧಿಸಲು ಇದೂ ಒಂದು ಕಾರಣ’ ಎಂದರು.

‘ಸ್ವಾಮಿ ನಮಗಿರೋದೇ 24 ಗುಂಟೆ ಭೂಮಿ. ಅದನ್ನೂ ಕಿತ್ತುಕೊಂಡುಬಿಟ್ಟರೆ, ನಮ್ಮನ್ನು ಮಣ್ಣುಮಾಡಲೂ ಜಾಗ ಇರೋದಿಲ್ಲ. ನಾವು ಧರಣಿ ನಡೆಸುತ್ತಿದ್ದಾಗ ಇದೇ ಸಿದ್ದರಾಮಯ್ಯ ಬಂದು, ನಿಮ್ಮ ಭೂಮಿ ಮುಟ್ಟುವುದಿಲ್ಲ ಎಂದಿದ್ದರು. ಈಗ ಅದೇ ಮನುಷ್ಯ ನಮ್ಮ ಭೂಮಿಗೆ ಕೈಹಾಕಿದ್ದಾರೆ. ಅವರು ನಮ್ಮ ಭೂಮಿ ಮುಟ್ಟಿದರೆ, ನಾವು ಅವರ ಸರ್ಕಾರ ಮುಟ್ಟುತ್ತೇವೆ’ ಎಂಬುದು ಮುಟ್ಟಬಾರ್ಲುವಿನ ಪಾರ್ವತಮ್ಮನವರ ಎಚ್ಚರಿಕೆ.

ಪೋಲನಹಳ್ಳಿಯ ಕೃಷಿ ಕಾರ್ಮಿಕ ಜಗದೀಶ, ‘ನಮ್ಮದೂ ನಾಲ್ಕು ಎಕರೆ ಜಮೀನು ಇತ್ತು. ಅಣ್ಣತಮ್ಮಂದಿರು ಸೇರಿ 25 ಜನರ ಕುಟುಂಬ ಅದನ್ನೇ ನಂಬಿಕೊಂಡು ಬದುಕುತ್ತಿದ್ದೆವು. 10–12 ಜನಕ್ಕೆ ಕೆಲಸವನ್ನೂ ಕೊಟ್ಟಿದ್ದೆವು. 2018ರಲ್ಲಿ ನಮ್ಮ 2 ಎಕರೆ ಹೋಯಿತು’ ಎಂದು ಮಾತಿಗಿಳಿದರು.

‘ಚಾಣಕ್ಯ ವಿಶ್ವವಿದ್ಯಾಲಯದ ಜಾಗದಲ್ಲೇ ನಮ್ಮ ಜಮೀನಿತ್ತು, ಅಲ್ಲಿ ಕೊಳವೆ ಬಾವಿಯೂ ಇತ್ತು. ಆ ಭೂಮಿಯೂ ಹೋಯಿತು. ಉಳಿದ ಜಮೀನಿನಲ್ಲಿ ನೀರಿಲ್ಲ. 25 ಜನರ ಕುಟುಂಬ ಸಲಹಲೂ ಆಗುವುದಿಲ್ಲ. ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಕೆಲಸ ಕೇಳಲು ಹೋದರೆ, ‘ಶೌಚಾಲಯ ತೊಳೆಯಿರಿ. ಓದಿದ್ದವರಿಗಷ್ಟೇ ಬೇರೆ ಕೆಲಸ’ ಎನ್ನುತ್ತಾರೆ. ದ್ರಾಕ್ಷಿ ಬಳ್ಳಿ ಕಟ್ಟುವುದು, ತೋಟ ನಿರ್ವಹಿಸುವುದರಲ್ಲೇ ನಮ್ಮವರ ಕೈಪಳಗಿತ್ತು. ಮೊದಲು ನಮ್ಮ ತೋಟದಲ್ಲಿ ಬಳ್ಳಿ ಕಟ್ಟುತ್ತಿದ್ದವನು, ಈಗ ಬೇರೆಯವರ ತೋಟದಲ್ಲಿ ಕೂಲಿ ಹಣ ಪಡೆದು ಬಳ್ಳಿ ಹಬ್ಬಿಸುತ್ತಿದ್ದೇನೆ. ಈಗ ಉಳಿದಿರುವ ಭೂಮಿಗೂ ಸರ್ಕಾರ ಕಣ್ಣುಹಾಕಿದೆ. ಜೀವಬಿಟ್ಟರೂ, ಭೂಮಿ ಬಿಡುವುದಿಲ್ಲ’ ಎಂದು ನುಡಿದರು.

‘ಕೊಟ್ಟು ಕಿತ್ತುಕೊಳ್ಳುವುದು ನ್ಯಾಯವೇ’

‘ನಮಗೆ ಜಮೀನೇ ಇರಲಿಲ್ಲ. ಕೂಲಿ ಮಾಡಿಕೊಂಡು ಬದುಕುತ್ತಿದ್ದೆವು. ದೇವರಾಜು ಅರಸು ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ಭೂಮಿ ಕೊಟ್ಟಿತು. ಅದೂ ನಮ್ಮ ಹೆಸರಿಗಾಗಿದ್ದು 20 ವರ್ಷಗಳ ಹೋರಾಟದ ನಂತರ. ಕಾಂಗ್ರೆಸ್ ಸರ್ಕಾರವೇ ಕೊಟ್ಟಿದ್ದ ಜಮೀನನ್ನು ಈಗ ಕಾಂಗ್ರೆಸ್ ಸರ್ಕಾರವೇ ಕಿತ್ತುಕೊಳ್ಳುತ್ತಿದೆ. ಇದು ಯಾವ ನ್ಯಾಯ’ ಎಂಬುದು ಚನ್ನರಾಯಪಟ್ಟಣದ 75ರ ವಯಸ್ಸಿನ ಪಿಳ್ಳಪ್ಪ ಅವರ ಪ್ರಶ್ನೆ. ‘ಆ ಜಮೀನು ನನ್ನ ಹೆಸರಿಗೆ ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿ ಎದುರಿಗೆ ತಿಂಗಳುಗಟ್ಟಲೆ ಧರಣಿ ನಡೆಸಿದ್ದೆ. ದನ–ಕುರಿ ಮಾರಾಟ ಮಾಡಿ ಹಣ ಹೊಂದಿಸಿ ಜಮೀನು ಮಾಡಿಸಿಕೊಂಡೆ. ಇದೇ ಊರಿನ ಉಳ್ಳವರ ಬೆದರಿಕೆಗೆ ಜಗ್ಗದೆ ಇಲ್ಲಿಯೇ ತಳವೂರಿದೆ. ನನ್ನ ನೆಲದಲ್ಲೇ ಜೀವ ಬಿಡಬೇಕು ಎಂದು ಆಸೆಪಡುವ ಹೊತ್ತಿನಲ್ಲಿ ಸರ್ಕಾರ ಅದಕ್ಕೂ ಕಲ್ಲು ಹಾಕುತ್ತಿದೆ’ ಎಂದು ಬೇಸರಿಸಿದರು. ‘ನಮ್ಮೂರಿನಲ್ಲೇ 30 ದಲಿತ ಕುಟುಂಬಗಳಿಗೆ ತಲಾ 2 ಎಕರೆ ಜಮೀನು ಮಂಜೂರಾಗಿತ್ತು. ಈಗ ಅಷ್ಟೂ ಜಮೀನನ್ನು ಕಸಿದುಕೊಳ್ಳಲಾಗುತ್ತಿದೆ. ಸುತ್ತ ಮುತ್ತ ಹಳ್ಳಿಗಳಲ್ಲಿ ಅಂತಹ 500 ಎಕರೆಯಷ್ಟು ಜಮೀನಿದೆ. ಆ ಎಲ್ಲರೂ ಮತ್ತೆ ಭೂರಹಿತರಾಗುವುದಕ್ಕೆ ನಾವು ಅವಕಾಶಕೊಡುವುದಿಲ್ಲ’ ಎಂಬುದು ಅದೇ ಊರಿನ ಸೌಮ್ಯ ಅವರ ದೃಢಮಾತು.

‘ಭೂಸ್ವಾಧೀನ ಕೈಬಿಡಲು ಸರ್ಕಾರಕ್ಕೆ ತಿಳಿಸಿ’

ಬೆಂಗಳೂರು: ದೇವನಹಳ್ಳಿಯಲ್ಲಿ ಕೃಷಿ ಭೂಮಿ ಸ್ವಾಧೀನಪಡಿಸಿ ಕೊಳ್ಳುವುದನ್ನು ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಇತಿಹಾಸಕಾರ ರಾಮಚಂದ್ರ ಗುಹಾ ಸೇರಿ, 30 ಮಂದಿ, ವಿಜ್ಞಾನಿಗಳು, ವಿವಿಧ ಕ್ಷೇತ್ರಗಳ ತಜ್ಞರು, ನೀತಿ ನಿರೂಪಕರು ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರದ ಮುಖಂಡರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ನಗರಕ್ಕೆ ತರಕಾರಿ, ಹಾಲು, ಹಣ್ಣುಗಳನ್ನು ಪೂರೈಸುತ್ತಿರುವ ಕೃಷಿ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ವಿರೋಧಿಸಿ ‘ಕೈಗಾರಿಕೆಗಾಗಿ ನಮ್ಮ ಭೂಮಿ ಕಸಿದುಕೊಳ್ಳಬೇಡಿ’ ಎಂದು ಆಗ್ರಹಿಸಿ ಅನ್ನದಾತರು ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

‘ಕೆಐಎಡಿಬಿ ಈಗಾಗಲೇ ರೈತರಿಂದ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿದೆ. ಆದರೆ, ಅವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಮಂಡಳಿಯ ಸಮೀಕ್ಷೆ ಪ್ರಕಾರ ಶೇಕಡ 80ಕ್ಕೂ ಅಧಿಕ ರೈತರು ಇಲ್ಲಿ ಭೂಮಿ ಕೊಡಲು ಒಪ್ಪಿಲ್ಲ. ಈ ರೈತರಲ್ಲಿ ಹಲವು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ್ದಾರೆ. ಅವರಿಂದ ಭೂಮಿ ಪಡೆಯುವುದು ಭೂ ಕಾಯ್ದೆಯ ಉಲ್ಲಂಘನೆಯಾಗುತ್ತದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ತಜ್ಞರ ಅನುಮೋದನೆಯೊಂದಿಗೆ ಬಹಿರಂಗ ಪತ್ರವನ್ನು ಕರ್ನಾಟಕದ ಉದ್ದಿಮೆ ಕೈಗಾರಿಕೆ ಹಾಗೂ ತಂತ್ರಜ್ಞಾನ ಮುಖಂಡರಿಗೆ ಮತ್ತು ಸಂಬಂಧಿಸಿದ ಸಂಸ್ಥೆಗಳಿಗೆ ಬಿಡುಗಡೆ ಮಾಡಿರುವುದಾಗಿ ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮತ್ತು ಸಂಶೋಧಕರಾದ ಎ.ಆರ್ ವಾಸವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.