ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದ ಹೊರದಬ್ಬಿದ ಮಗ: ಜನತಾ ದರ್ಶನದಲ್ಲಿ ನೆರವಿಗೆ ಸಿಎಂಗೆ ತಾಯಿ ಮೊರೆ

Published 27 ನವೆಂಬರ್ 2023, 22:00 IST
Last Updated 27 ನವೆಂಬರ್ 2023, 22:00 IST
ಅಕ್ಷರ ಗಾತ್ರ

ಬೆಂಗಳೂರು:‌‘ಎಲ್ಲ ಆಸ್ತಿ ತನ್ನ ಹೆಸರಿಗೆ ಬರೆಸಿಕೊಂಡು ಮಗ ನನ್ನನ್ನು ಹೊರ ಹಾಕಿದ್ದಾನೆ. ಎಸಿ‌ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಹದೇವಮ್ಮ ಅಳಲು ತೋಡಿಕೊಂಡರು. ಆಗ ಅವರ ಕಣ್ಣುಗಳು ತೇವಗೊಂಡಿದ್ದವು.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸೋಮವಾರ ನಡೆದ ‘ಜನ ಸ್ಪಂದನ’ದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಮಹದೇವಮ್ಮ, ‘ವಿಭಾಗ ಪತ್ರ‌ ಕೊಡಿಸಿ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು. ತಕ್ಷಣವೇ ತುಮಕೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಮುಖ್ಯಮಂತ್ರಿ, ಮಹದೇವಪ್ಪ ಅವರಿಗೆ ನ್ಯಾಯ ಕೊಡಿಸುವಂತೆ ಸೂಚಿಸಿದರು.

‘ರಾಮನಗರದ ಸುಗ್ಗನಹಳ್ಳಿಯ ರಾಜಮ್ಮ ಎಂಬವರು ತಮ್ಮ ಜಮೀನು ಒತ್ತುವರಿ ಮಾಡಲಾಗಿದೆ’ ಎಂದು ನೀಡಿದ ದೂರಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಒತ್ತುವರಿ ತೆರವು ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕಿನವರು ಮನೆ ಜಪ್ತಿಗೆ ಬಂದಿದ್ದಾರೆ. ನಾವು ಈ ಮನೆಗೆ ಲೀಸ್‌ಗೆ ಬಂದಿದ್ದೇವೆ. ಮನೆಯ ಮೇಲೆ ಮಾಲೀಕರು ಸಾಲ ಪಡೆದು, ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಹಾಕಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಮಕ್ಕಳೊಂದಿಗೆ ಬೀದಿಗೆ ಬರುವ ಸ್ಥಿತಿ ಇದೆ’ ಎಂದು ಮೈಸೂರು ರಸ್ತೆಯ ಬ್ಯಾಟರಾಯನಪುರದ ರಾಜೇಶ್ವರಿ ಮಲ್ಲೇಶ್ ಎಂಬುವರು ಗೋಳು ತೋಡಿಕೊಂಡರು. ತಕ್ಷಣ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಕರೆದ ಮುಖ್ಯಮಂತ್ರಿ, ಪ್ರಕರಣ ಪರಿಶೀಲಿಸುವಂತೆ ಸೂಚಿಸಿದರು.

ಹೀಗೆ ನೂರಾರು ಮನವಿ, ಬೇಡಿಕೆ, ಕುಂದುಕೊರತೆ, ಅಹವಾಲುಗಳಿಗೆ ಧ್ವನಿಯಾದ ಮುಖ್ಯಮಂತ್ರಿ, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು.

ಬೀದಿ ವ್ಯಾಪಾರಿಗಳಿಗೆ ಕಿರುಕುಳ:

‘ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರಿಗೆ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ನಿಂಗಮ್ಮ ಎಂಬವರು ದೂರಿದಾಗ, ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಕರೆಸಿದ ಮುಖ್ಯಮಂತ್ರಿ, ಕಿರುಕುಳ ನೀಡದಂತೆ ತಿಳಿಸಿದರು. 

‘ಮನೆ ಕಂದಾಯ ಕಟ್ಟಿದ್ದರೂ ದುಪ್ಪಟ್ಟು ದಂಡ ಹಾಕಿದ್ದಾರೆ. ಕಂದಾಯ ಕಟ್ಟಿದ ರಶೀದಿ ಇಟ್ಟುಕೊಂಡು ಬಿಬಿಎಂಪಿಗೆ ಹೋದರೆ, ನಮಗೆ ಗೊತ್ತಿಲ್ಲ. ಸರ್ಕಾರಕ್ಕೆ ಕೇಳಿ’ ಎಂದು ಸಿಬ್ಬಂದಿ ದರ್ಪ ತೋರಿಸುತ್ತಾರೆ ಎಂಬ ವೃದ್ದೆಯೊಬ್ಬರ ದೂರಿಗೆ ಗರಂ ಆದ ಮುಖ್ಯಮಂತ್ರಿ, ಬಿಬಿಎಂಪಿ ಅಧಿಕಾರಿಯನ್ನು ಕರೆದು ಪ್ರಕರಣ ಇತ್ಯರ್ಥಪಡಿಸಿ ವರದಿ ನೀಡುವಂತೆ ತಿಳಿಸಿದರು.

ಹುಣಸೂರಿನ‌ ಕಲ್ಲಹಳ್ಳಿ ಪಂಚಾಯಿತಿಯ ಲಕ್ಷ್ಮೀಬಾಯಿ ಎನ್ನುವವರು ಅಲೆಮಾರಿ ಡೋಂಗ್ರಿ ಗೆರೆಸಿಯಾ ಸಮುದಾಯದವರಿಗೆ 40 ಮನೆಗಳು ಮಂಜೂರಾಗಿದ್ದು, ಮನೆ ಕಟ್ಟಲು ಅನುಮತಿ ನೀಡುವಂತೆ ಮನವಿ ಮಾಡಿದರು. ತಕ್ಷಣ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಸಿ, ಅರ್ಜಿಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಸೂಚಿಸಿದರು.

ರಾಣೆಬೆನ್ನೂರಿನ ಜೀವ ಬೆಳಕು ಅಂಧ ಮಕ್ಕಳ ಶಾಲೆಗೆ ಸಿ.ಎ. ನಿವೇಶನ ಮಂಜೂರಾಗಿದ್ದು, ಇದಕ್ಕಾಗಿ ₹ 9 ಲಕ್ಷ ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ಪಾವತಿಸಲು ಶಕ್ತರಿಲ್ಲದ ಕಾರಣ ಹಣ ಪಾವತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು. ಹಾವೇರಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ ಮುಖ್ಯಮಂತ್ರಿ, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದರು.

ಜಮೀನು ಬಿಡಿಸಿಕೊಡಿ:

‘ನನ್ನ ಜಮೀನನ್ನು ಮೈದುನ ಒತ್ತುವರಿ ಮಾಡಿಕೊಂಡಿದ್ದು, ಬಾವಿಯನ್ನೂ ಮುಚ್ಚಿದ್ದಾರೆ. ನನಗೆ ಗಂಡು ಮಕ್ಕಳಿಲ್ಲ. ಹೆಣ್ಣು ಮಕ್ಕಳು ಮದುವೆಯಾಗಿ, ಗಂಡನ ಮನೆಯಲ್ಲಿದ್ದಾರೆ. ಒಬ್ಬರೇ ಇರುವ ನನಗೆ ಜಮೀನು ಬಿಡಿಸಿಕೊಡಬೇಕು’ ಎಂದು ರಾಮನಗರ ಜಿಲ್ಲೆಯ ರಾಜಮ್ಮ ಎಂಬ ವೃದ್ಧೆ ಮುಖ್ಯಮಂತ್ರಿಗೆ ಮನವಿ ಮಾಡಿದರು. ರಾಮನಗರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ ಮುಖ್ಯಮಂತ್ರಿ ಸ್ಥಳ ಪರಿಶೀಲಿಸಿ, ರಾಜಮ್ಮ ಅವರ ಜಮೀನು ಬಿಡಿಸಿಕೊಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

‘ನಾಗಮಂಗಲದಿಂದ ತಾಳವಾಡಿಯ ಮಾರ್ಗ ಮಧ್ಯೆ ಇರುವ ವ್ಯವಸಾಯ ಮಾಡುವ ನನ್ನ ಜಮೀನನ್ನು ಬೈಪಾಸಿಗೆ ಒತ್ತುವರಿ ಮಾಡಿಕೊಳ್ಳಲಾಗಿದೆ’ ಎಂದು ಮಂಡ್ಯ ಜಿಲ್ಲೆಯ 96 ವರ್ಷದ ಪರಂಧಾಮಯ್ಯ ದೂರು ನೀಡಿದರು. ಮಂಡ್ಯ ಜಿಲ್ಲಾಧಿಕಾರಿಗೆ ತಕ್ಷಣ ಮಾತನಾಡಿದ ಮುಖ್ಯಮಂತ್ರಿ, ಕ್ರಮ ವಹಿಸುವಂತೆ ಸೂಚಿಸಿದರು.

‘ನನ್ನ ತಂದೆ ಜಲ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಮೃತಪಟ್ಟಿದ್ದು, ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ಮೊದಲಿಗೆ ಹುದ್ದೆಗಳು ಖಾಲಿ ಇಲ್ಲವೆಂದು ತಿಳಿಸಲಾಗಿತ್ತು. ನಂತರ ಅಪ್ರಾಪ್ತರಾದ್ದರಿಂದ ಉದ್ಯೋಗ ನೀಡಲು ಅವಕಾಶವಿಲ್ಲ ಎಂದು ತಿಳಿಸಲಾಗಿತ್ತು. ನಿಯಮಾನುಸಾರ ವಯಸ್ಕರಾದ ನಂತರ ಎರಡು ವರ್ಷಗಳೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ನನಗೆ ಉದ್ಯೋಗ ದೊರಕಿಸಬೇಕು’ ಬೆಳಗಾವಿಯ ಉಜ್ಮಾ ಬಾನು ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಂಡಳಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬನವತಿ ಗ್ರಾಮದಲ್ಲಿ 20 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಖಾತೆ ಮಾಡಿಕೊಟ್ಟಿಲ್ಲ’ ಎಂದು ನರಸಿಂಹಮೂರ್ತಿ ಎಂಬವರು ಮನವಿ ಸಲ್ಲಿಸಿದರು. ಕೂಡಲೇ ಕ್ರಮ ವಹಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು. ಚನ್ನಪಟ್ಟಣ ತಾಲ್ಲೂಕು ಮಳೂರು ಗ್ರಾಮದಲ್ಲಿ ಜಮೀನಿಗೆ ಗಾಡಿ ಹೊಡೆಯಲು ರಸ್ತೆ ನಿರ್ಮಾಣ ಕಾರ್ಯವನ್ನು ಗ್ರಾಮ ಪಂಚಾಯಿತಿಯವರು ಅರ್ಧಕ್ಕೆ ಸ್ಥಗಿತಗೊಳಿಸಿರುವುದರಿಂದ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಹವಾಲುಗಳನ್ನು ನೋಂದಣಿ ಮಾಡಿಸಲು ನೂಕುನುಗ್ಗಲು
ಅಹವಾಲುಗಳನ್ನು ನೋಂದಣಿ ಮಾಡಿಸಲು ನೂಕುನುಗ್ಗಲು

ಸ್ವ– ಉದ್ಯೋಗಕ್ಕೆ ಸಾಲ ಕೊಡಿಸಿ:

‘ಮಗ ವೀರೇಶ್‌ಗೆ ಕೆಎಂಎಫ್‌ನಲ್ಲಿ ಕೆಲಸ ಕಾಯಂ ಆಗಬೇಕು ಮತ್ತು ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್‌ನಿಂದ ಸಾಲ ಒದಗಿಸಿಕೊಡಬೇಕು’ ಎಂದು ರಾಮನಗರದ ಅಂಧ ವೃದ್ಧ ಷಣ್ಮುಖಪ್ಪ ಬೇಡಿಕೆ ಮುಂದಿಟ್ಟರು. ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ಅವರನ್ನು ಕರೆದು ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಮಾಡಲು ಇರುವ ಮಾರ್ಗಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸೂಚಿಸಿದರು. ಪುತ್ರನ ಕೆಲಸ ಕಾಯಂಗೂ ಸೂಚಿಸುವುದಾಗಿ ತಿಳಿಸಿದರು.

‘40 ವರ್ಷಗಳಿಂದ ಬಗರ್‌ ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದು, ಸಾಗುವಳಿ ಚೀಟಿ ಒದಗಿಸಬೇಕು’ ಎಂದು ಚಿಕ್ಕಮಗಳೂರು ಜಿಲ್ಲೆ ಕರ್ಕಿಪೇಟೆಯ ದಿನೇಶ್‌ ಎಂಬವವರ ಮನವಿಗೆ, ಸ್ಪಂದಿಸಿದ ಮುಖ್ಯಮಂತ್ರಿ, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಜನ ಸ್ಪಂದನ’ಕ್ಕೆ ಬಂದ ಅಂಗವಿಕಲರಿಗೆ ಪೊಲೀಸರು ನೆರವಾದರು ಪ್ರಜಾವಾಣಿ ಚಿತ್ರ
‘ಜನ ಸ್ಪಂದನ’ಕ್ಕೆ ಬಂದ ಅಂಗವಿಕಲರಿಗೆ ಪೊಲೀಸರು ನೆರವಾದರು ಪ್ರಜಾವಾಣಿ ಚಿತ್ರ

ಹೃದ್ರೋಗ ಚಿಕಿತ್ಸೆಗಾಗಿ ನೆರವು ನೀಡುವಂತೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪುಟ್ಟಸ್ವಾಮಿ ಮನವಿ ಮಾಡಿದರು. ಪುಟ್ಟಸ್ವಾಮಿಗೆ ನೆರವು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಮುಖ್ಯಮಂತ್ರಿ ಸೂಚಿಸಿದರು. ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲ್ಲೂಕಿನ ಮುಷ್ತಾಕ್‌ ಅವರು ತಮಗೆ ಮಂಜೂರಾಗಿರುವ ನಿವೇಶನವನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಬಿಡಿಸಿಕೊಡುವಂತೆ ಮನವಿ ಮಾಡಿದರು.

ಅಹವಾಲು ಸಲ್ಲಿಸಲು ಸರದಿ ಸಾಲಿನಲ್ಲಿ.....    ಪ್ರಜಾವಾಣೀ ಚಿತ್ರ
ಅಹವಾಲು ಸಲ್ಲಿಸಲು ಸರದಿ ಸಾಲಿನಲ್ಲಿ.....    ಪ್ರಜಾವಾಣೀ ಚಿತ್ರ

- ‘ಶಿಕ್ಷಕರ ಹುದ್ದೆ: ನ್ಯಾಯ ಕೊಡಿ’

‘ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ತಂದೆಯ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಸಿದ ಕಾರಣಕ್ಕೆ ಸುಮಾರು 1800 ವಿವಾಹಿತ ಮಹಿಳಾ ಅಭ್ಯರ್ಥಿಗಳು ಉದ್ಯೋಗ ವಂಚಿತರಾಗಿದ್ದೇವೆ. ನಮಗೆ ನ್ಯಾಯ ಒದಗಿಸಬೇಕು’ ಎಂದು ಮುಖ್ಯಮಂತ್ರಿಗೆ ಕೆಲವು ಅಭ್ಯರ್ಥಿಗಳು ಮನವಿ ಮಾಡಿದರು. ‘ನೇಮಕಾತಿ ಅಧಿಸೂಚನೆ ಅನ್ವಯ ಮಾಹಿತಿ ಭರ್ತಿ ಮಾಡಿದ್ದೇವೆ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಮ್ಮನ್ನು ಮೀಸಲಾತಿಯಿಂದ ಹೊರಗಿಟ್ಟು ಸಾಮಾನ್ಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದನ್ನು ಸರಿಪಡಿಸಬೇಕು’ ಎಂದೂ ಮನವಿ ಸಲ್ಲಿಸಿದರು. ಈ ಸಮಸ್ಯೆಯನ್ನು ಆದ್ಯತೆಯಲ್ಲಿ ಪರಿಶೀಲಿಸಿ ಬಗೆಹರಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು.

‘ಮಧ್ಯರಾತ್ರಿ ಬೆದರಿಸಿದ ಆಸ್ಪತ್ರೆ ಸಿಬ್ಬಂದಿ’

‘ಆರೋಗ್ಯ ಹದಗೆಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಅ. 20 ರಂದು ಹೋಗಿದ್ದೆ. ರಾತ್ರಿಯಿಡೀ ಬೇಧಿ ಆಗಿದ್ದರಿಂದ ಬಟ್ಟೆ ಗಲೀಜಾಗಿತ್ತು. ಆಸ್ಪತ್ರೆಯಿಂದ ತೆರಳುವಂತೆ ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿಯಲ್ಲಿ ಬೆದರಿಸಿದರು. ಆಯಾಸಗೊಂಡಿದ್ದ ನನಗೆ ಗ್ಲೂಕೋಸ್ ಕೂಡ ಹಾಕದೆ ಕೆಟ್ಟದಾಗಿ ವರ್ತಿಸಿದರು’ ಎಂದು ಸೀಗೇಹಳ್ಳಿಗೇಟ್ ನಿವಾಸಿ ಸುನೀತಾ ದೂರಿದರು. ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನು ಕರೆದ ಮುಖ್ಯಮಂತ್ರಿ ಸಂಬಂಧಪಟ್ಟವರಿಂದ ವಿವರಣೆ ಕೇಳುವಂತೆ ಸೂಚಿಸಿದರು. ಬಳಿಕ ತಮ್ಮ ಎರಡನೇ ದೂರು ಮುಂದಿಟ್ಟು ‘ಮನೆಯ ಮಾಲೀಕರು ಲೀಸ್ ಹಣ ವಾಪಸ್‌ ಕೊಡದೆ ಸತಾಯಿಸುತ್ತಿದ್ದಾರೆ’ ಎಂದರು. ಮನೆ ಮಾಲೀಕರ ವಿವರ ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತ ದಯಾನಂದ್‌ಗೆ ಮುಖ್ಯಮಂತ್ರಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT