ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಪ್ಪನ ಅಗ್ರಹಾರದಲ್ಲಿ ಆರೋಪಿ ದರ್ಶನ್‌ ಭೇಟಿ ಮಾಡಿದ್ದ ನಟ ಚಿಕ್ಕಣ್ಣನ ವಿಚಾರಣೆ

Published : 29 ಆಗಸ್ಟ್ 2024, 11:28 IST
Last Updated : 29 ಆಗಸ್ಟ್ 2024, 11:28 IST
ಫಾಲೋ ಮಾಡಿ
Comments

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರ ಪಟ್ಟಿಯಲ್ಲಿರುವ ನಟ ಚಿಕ್ಕಣ್ಣ ಅವರನ್ನು ಗುರುವಾರ ತನಿಖಾಧಿಕಾರಿಗಳು ಮತ್ತೆ ವಿಚಾರಣೆಗೆ ಒಳಪಡಿಸಿ, ಹೇಳಿಕೆ ದಾಖಲಿಸಿಕೊಂಡರು.

ಕೊಲೆ ಪ್ರಕರಣದ ಎರಡನೇ ಆರೋಪಿ, ನಟ ದರ್ಶನ್‌ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಚಿಕ್ಕಣ್ಣ ಭೇಟಿ ಆಗಿದ್ದರು. ಭೇಟಿಯಾದ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದರು. ಗುರುವಾರ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು.

ಕೃತ್ಯಕ್ಕೂ ಮುನ್ನ ಆರೋಪಿ ವಿನಯ್‌ ಅವರ ಒಡೆತನದ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಪಾರ್ಟಿ ನಡೆಸಿದ್ದರು. ಆ ಪಾರ್ಟಿಯಲ್ಲಿ ದರ್ಶನ್‌, ಪವಿತ್ರಾಗೌಡ ಜತೆಗೆ ನಟ ಚಿಕ್ಕಣ್ಣ ಕಾಣಿಸಿಕೊಂಡಿದ್ದರು. ಚಿಕ್ಕಣ್ಣ ಅವರನ್ನೂ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದ ಪೊಲೀಸರು, ಚಿಕ್ಕಣ್ಣ ಅವರನ್ನು ಈ ಪ್ರಕರಣದಲ್ಲಿ ಸಾಕ್ಷಿದಾರರನ್ನಾಗಿ ಪರಿಗಣಿಸಿ ನ್ಯಾಯಾಧೀಶರ ಎದುರು ಸಿಆರ್‌ಪಿಸಿ ಕಲಂ 164ರ ಅಡಿ ಹೇಳಿಕೆ ದಾಖಲಿಸಲಾಗಿತ್ತು. ಆದರೆ, ಸಾಕ್ಷಿದಾರರಾಗಿದ್ದ ಚಿಕ್ಕಣ್ಣ ಅವರು ಆರೋಪಿಯನ್ನು ಭೇಟಿ ಮಾಡಿದ್ದರು ಎಂದು ಪೊಲೀಸರು ಹೇಳಿದರು.

‘ದರ್ಶನ್‌ ಭೇಟಿ ವೇಳೆ ಏನೇನು ಮಾತುಕತೆ ನಡೆಯಿತು? ಅವರು ನಿಮಗೇನಾದರೂ ಆಮಿಷ ಒಡ್ಡಿದ್ದಾರೆಯೇ? ಅಥವಾ ಬೆದರಿಕೆ ಹಾಕಿದರೆ’ ಎಂದು ಪೊಲೀಸರು ಪ್ರಶ್ನೆ ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

‘ಈ ಪ್ರಕರಣದಲ್ಲಿ ನ್ಯಾಯಾಧೀಶರ ಎದುರು ನಿಮ್ಮ ಹೇಳಿಕೆ ದಾಖಲಿಸಲಾಗಿದೆ. ಹೇಳಿಕೆ ತಿರುಚಿದರೆ ತಪ್ಪಾಗಲಿದೆ ಎಂಬುದಾಗಿ ಪೊಲೀಸರು ನಟನಿಗೆ ಎಚ್ಚರಿಕೆ ನೀಡಿದ್ಧಾರೆ’ ಎಂದು ಗೊತ್ತಾಗಿದೆ. ಆರೋಪಿಯನ್ನು ಭೇಟಿಯಾಗಬಾರದು ಎಂಬ ವಿಚಾರ ನನಗೆ ಗೊತ್ತಿರಲಿಲ್ಲ ಎಂಬುದಾಗಿ ತನಿಖಾಧಿಕಾರಿಗಳಿಗೆ ಚಿಕ್ಕಣ್ಣ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿಲ್ಲ. ನಾನು ಸಾಕ್ಷಿದಾರರ ಆಗಿರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಚಿಕ್ಕಣ್ಣ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT