ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಾರ್ಟ್‌ಮೆಂಟ್‌ ಈಜುಕೊಳದಲ್ಲಿ ಮಗು ಸಾವು: ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

Published : 9 ಆಗಸ್ಟ್ 2024, 23:43 IST
Last Updated : 9 ಆಗಸ್ಟ್ 2024, 23:43 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ವರ್ತೂರು ಸಮೀಪದ ಅಪಾರ್ಟ್‌ಮೆಂಟ್‌ನ ಈಜು ಕೊಳದಲ್ಲಿ ಹೆಣ್ಣು ಮಗುವೊಂದು ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವಿರುದ್ದ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ರದ್ದುಗೊಳಿಸುವಂತೆ ಕೋರಿ ಗುಂಜೂರಿನ, ‘ಪ್ರೆಸ್ಟೀಜ್ ಲೇಕ್ ಸೈಡ್‌ ಹ್ಯಾಬಿಟ್ಯಾಟ್‌ ಹೋಮ್ ಓನರ್ಸ್ ಅಸೋಸಿಯೇಷನ್’ ಅಧ್ಯಕ್ಷ ದೇಬಶಿಶ್ ಸಿನ್ಹಾ ಸೇರಿದಂತೆ ಒಟ್ಟು ಆರು ಜನ ಪದಾಧಿಕಾರಿಗಳು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಭಾಗಶಃ ಮಾನ್ಯ ಮಾಡಿದೆ.

ಇದೇ ವೇಳೆ ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ  304 ಮತ್ತು 149ರಡಿ ಹೊರಿಸಿದ್ದ ಆರೋಪಗಳನ್ನು ರದ್ದುಪಡಿಸಿದೆ. ಆದರೆ, ವಿಚಾರಣಾ ನ್ಯಾಯಾಲಯ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 482 ಅಡಿ ತನಗೆ ಲಭ್ಯವಿರುವ ಅಧಿಕಾರ ಬಳಿಸಿ, ಅರ್ಜಿದಾರರ ವಿರುದ್ಧ ಐಪಿಸಿ 304ಎಡಿ ನಿರ್ಲಕ್ಷದಿಂದ ಸಾವು ಆರೋಪ ಹೊರಿಸಲು ಅವಕಾಶ ಕಲ್ಪಿಸಿದೆ.

‘ಅಪಾರ್ಟ್ ಮೆಂಟ್‌ಗಳಲ್ಲಿನ ಸುರಕ್ಷತೆ ಹೊಣೆ ಅಸೋಸಿಯೇಷನ್‌ನ ಜವಾಬ್ದಾರಿಯಾಗಿದೆ. ಅರ್ಜಿದಾರರು ಅಪಾರ್ಟ್‌ಮೆಂಟ್ ಸಮುಚ್ಛಯದ ಉಸ್ತುವಾರಿ ನೋಡಿಕೊಳ್ಳುತ್ತಿರುವುದನ್ನು ಒಪ್ಪಿಕೊಂಡಿರುವ ಕಾರಣದಿಂದ ಮತ್ತು ಮೇಲ್ನೋಟಕ್ಕೆ ಅವರ ನಿರ್ಲಕ್ಷ್ಯ ಕಂಡು ಬಂದಿದೆ. ಈ ಕಾರಣದಿಂದ ಅವರ ವಿರುದ್ಧ ಕಲಂ 304 ಅಡಿ ಹೊರಿಸಿರುವ ಆರೋಪ ರದ್ದು ಮಾಡಲಾಗುವುದು’ ಎಂದು ನ್ಯಾಯಪೀಠ ಆದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಜೆ.ಚೌಟ ವಾದ ಮಂಡಿಸಿದ್ದರು. ಹೈಕೋರ್ಟ್ ವಕೀಲ ಎನ್‌.ಎಸ್‌.ಶ್ರೀರಾಜ್‌ ಗೌಡ ವಕಾಲತ್ತು ವಹಿಸಿದ್ದರು. ಪ್ರಾಸಿಕ್ಯೂಷನ್‌ ಪರ ಪಿ.ತೇಜೇಶ್‌ ವಾದ ಮಂಡಿಸಿದ್ದರು.

ಪ್ರಕರಣವೇನು?:

ರಾಜೇಶ್ ಕುಮಾರ್‌ ದಮೆರ್ಲಾ ಅವರ ಪುಟ್ಟ ಮಗಳು 2023ರ ಡಿಸೆಂಬರ್ 28ರಂದು ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿರುವ ಆವರಣದಲ್ಲಿನ ಈಜು ಕೊಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು. 

ಈ ಹಿನ್ನೆಲೆಯಲ್ಲಿ ದಮೆರ್ಲಾ, ‘ನನ್ನ ಮಗಳ ಸಾವಿಗೆ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್ ನಿರ್ಲಕ್ಷ್ಯವೇ ಕಾರಣ’ ಎಂದು ಆರೋಪಿಸಿ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಅಸೋಸಿಯೇಷನ್ ಅಧ್ಯಕ್ಷ ಮತ್ತು ಪದಾಧಿಕಾರಿಗಳ ವಿರುದ್ಧ ವಿಚಾರಣಾ (2ನೇ ಹೆಚ್ಚುವರಿ ಎಸಿಎಂಎಂ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ

* ಅರ್ಜಿ ಭಾಗಶಃ ಮಾನ್ಯ

* ಅಸೋಸಿಯೇಷನ್‌ಗಳು ಮಕ್ಕಳ ಪ್ರಾಣ ರಕ್ಷಣೆಗೆ ನಿಗಾ ವಹಿಸಲು ತಾಕೀತು

ಈಜುಕೊಳದ ಬಳಿ ಯಾವುದೇ ಗಾರ್ಡ್ ಇಲ್ಲದಿರುವುದರಿಂದಲೇ ಘಟನೆ ನಡೆದಿದೆ. ಈ ನಿರ್ಲಕ್ಷ್ಯಕ್ಕೆ ಅರ್ಜಿದಾರರು ಹೊಣೆ ಹೊರಬೇಕು. ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು ಅಪಾರ್ಟ್‌ಮೆಂಟ್‌ಗಳ ಈಜುಕೊಳಗಳ ಬಗ್ಗೆ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕು.
-ಎಂ.ನಾಗಪ್ರಸನ್ನ ನ್ಯಾಯಮೂರ್ತಿ

‘ಅಸೋಸಿಯೇಷನ್‌ ಹೊಣೆ’

ವಿಚಾರಣೆಯಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು ‘ಅರ್ಜಿದಾರರಿಗೆ ಆ ಮಗು ಸಾಯಲಿ ಎಂಬ ಯಾವುದೇ ಉದ್ದೇಶವಿರಲಿಲ್ಲ. ಬೆಂಗಳೂರು ನಗರದ ಯಾವ ಅಪಾರ್ಟ್‌ಮೆಂಟ್‌ನ ಈಜುಕೊಳಗಳಲ್ಲೂ ಗಾರ್ಡ್‌ಗಳು ಇರುವುದಿಲ್ಲ. ಈ ಪ್ರಕರಣದ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಿದರೆ ಅದು ಕಾನೂನಿನ ದುರ್ಬಳಕೆ ಆಗಲಿದೆ’ ಎಂದು ಪ್ರತಿಪಾದಿಸಿದ್ದರು. ಇದನ್ನು ವಿರೋಧಿಸಿದ್ದ ಪ್ರಾಸಿಕ್ಯೂಷನ್‌ ಪರ ವಕೀಲರು ‘ಅರ್ಜಿದಾರರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣವಾಗಿದೆ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮಗು ಕೊಳಕ್ಕೆ ಬಿದ್ದು ನೀರು ಕುಡಿದಿರುವುದೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಘಟನೆಯು ಅಪಾರ್ಟ್‌ಮೆಂಟ್ ಸಮುಚ್ಛಯದ ಆವರಣದೊಳಗೆ ನಡೆದಿರುವುದರಿಂದ ಅದಕ್ಕೆ ಅಸೋಸಿಯೇಷನ್ ಪದಾಧಿಕಾರಿಗಳೇ ಹೊಣೆಗಾರರು’ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT