ಬೆಂಗಳೂರು: ಚಿತ್ರದುರ್ಗದ, 'ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ‘ಕ್ಕೆ (ಎಸ್‌ಜೆಎಂ) ನಡೆದಿರುವ ತಾತ್ಕಾಲಿಕ ಉಸ್ತುವಾರಿ ಸ್ವಾಮೀಜಿ (ಬಸವ ಪ್ರಭು) ನೇಮಕಾತಿ ಪ್ರಕ್ರಿಯೆ ಪ್ರಜಾಪ್ರಭುತ್ವ ಚೌಕಟ್ಟುಗಳಿಗೆ ಒಳಪಟ್ಟಿದೆಯೋ ಹೇಗೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್; ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿದ್ದ ಆದೇಶ ವಿಸ್ತರಿಸಿದೆ.
ಈ ಸಂಬಂಧದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಮಂಗಳವಾರ ವಿಚಾರಣೆ ನಡೆಸಿ, ‘ಉಸ್ತುವಾರಿ ನೇಮಕ ಕುರಿತಂತೆ ಈ ಹಿಂದೆ ಪಾಲನೆ ಮಾಡಿಕೊಂಡು ಬಂದಿರುವ ಪದ್ಧತಿಯನ್ನು ಕೋರ್ಟ್ ವಿವರವಾಗಿ ಅರಿತುಕೊಳ್ಳಬೇಕಿದೆ. ಅಂತೆಯೇ, ನಿಮ್ಮೆಲ್ಲರ ವಾದವನ್ನೂ ಆಲಿಸಬೇಕಿದೆ. ಹಾಗಾಗಿ, ಸದ್ಯಕ್ಕೆ ಕೋರ್ಟ್ ಈ ಹಿಂದೆ ನೀಡಿರುವ ಆದೇಶ ಮುಂದುವರಿಯಬೇಕಾದ ಅವಶ್ಯಕತೆ ಇದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಮಠದ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಸುದೀರ್ಘ ವಾದ ಮಂಡಿಸಿ, ‘ಸದ್ಯ ಶಾಖಾ ಮಠದ ಸ್ವಾಮೀಜಿ ಉಸ್ತುವಾರಿಯಾಗಿ ಕಾರ್ಯಭಾರ ಮುಂದುವರಿಸಿದ್ದಾರೆ. ಇದಕ್ಕೆ ಜೈಲಿನಲ್ಲಿರುವ ಶಿವಮೂರ್ತಿ ಶರಣರಿಂದ ಪವರ್ ಆಫ್ ಅಟಾರ್ನಿ (ಕಾರ್ಯ ನಿರ್ವಹಣಾ ಅಧಿಕಾರ) ಪಡೆದಿದ್ದಾರೆ. ಮಠದ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ 20 ಸದಸ್ಯರ ಸಮಿತಿಯೂ ಇದೆ. ಹೀಗಿರುವಾಗ ಮೂರನೇ ವ್ಯಕ್ತಿಯನ್ನು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗದು‘ ಎಂದು ಆಕ್ಷೇಪಿಸಿದರು.
‘ಕುಟುಂಬದ ಹಿರಿಯರೊಬ್ಬರು ಬಂಧನಕ್ಕೊಳಗಾದ ಮಾತ್ರಕ್ಕೆ ಮೂರನೇ ವ್ಯಕ್ತಿ ಆ ಕುಟುಂಬದ ಸಾರಥ್ಯ ವಹಿಸಿಕೊಳ್ಳಲು ಸಾಧ್ಯವೇ? ಕುಟುಂಬದ ಒಳಗಿನವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವುದು ನಿಯಮ. ಅದರಂತೆ ಇಲ್ಲಿಯೂ ಅದೇ ನಿಯಮ ಪಾಲನೆ ಮಾಡಲಾಗಿದೆ‘ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಉತ್ತರಾಧಿಕಾರಿ ಅಥವಾ ಉಸ್ತುವಾರಿ ನೇಮಕ ಸಂದರ್ಭದಲ್ಲಿನ ಪ್ರಕ್ರಿಯೆಯಲ್ಲಿ ಈ ಹಿಂದೆ ಯಾವ ಪದ್ಧತಿ ಪಾಲನೆ ಮಾಡಲಾಗಿದೆ? ಮಠದಲ್ಲಿ ಕಳೆದ 300 ವರ್ಷಗಳಿಂದ ನಡೆದು ಬಂದಿರುವ ಪದ್ಧತಿಯನ್ನೇ ಈಗಿನ ಉಸ್ತುವಾರಿ ನೇಮಕ ಪ್ರಕ್ರಿಯೆಯಲ್ಲೂ ಅನುಸರಿಸಿರುವುದಾಗಿ ಹೇಳಿದ್ದೀರಿ. ಹಾಗಾಗಿ, ಈಗಿನ ಉಸ್ತುವಾರಿ ನೇಮಕಕ್ಕೆ ಯಾವ ನಿಯಮ ಪಾಲನೆ ಮಾಡಲಾಗಿದೆ. ಮಠಾಧೀಶರ ನೇಮಕ ವಿಚಾರದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಅನುಸರಿಸಲಾಗಿದೆ ಎಂಬೆಲ್ಲಾ ವಿವರಗಳನ್ನು ನಾವು ತಿಳಿದುಕೊಳ್ಳಬೇಕಿದೆ. ಯಾರದೋ ಒಬ್ಬರ ಮೂಲಭೂತ ಹಕ್ಕು ರಕ್ಷಣೆ ಮಾಡುವ ಭರದಲ್ಲಿ ಇನ್ಯಾರದೋ ಹಕ್ಕನ್ನು ಕಸಿದುಕೊಳ್ಳುವಂತೆ ಆಗಬಾರದು‘ ಎಂದು ಹೇಳಿತು.
‘ಶಿವಮೂರ್ತಿ ಶರಣರು ಕ್ರಿಮಿನಲ್ ಅಪರಾಧದಡಿ ಬಂಧನಕ್ಕೆ ಒಳಾಗಾಗಿರುವ ಕಾರಣ ದೈನಂದಿನ ವ್ಯವಹಾರ ಮತ್ತು ಮಠದ ಎಲ್ಲ ಆಗುಹೋಗುಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಕಷ್ಟದ ಕೆಲಸ. ಈ ಕಾರಣಕ್ಕಾಗಿಯೇ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಹಂತದಲ್ಲಿ ಕೋರ್ಟ್ ತನ್ನ ವ್ಯಾಪ್ತಿ ಮೀರಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ಸದ್ಯ ಇರುವ ವ್ಯವಸ್ಥೆ ಮುಂದುವರಿಯಲಿ‘ ಎಂದು ಆದೇಶಿಸಿ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿತು.
‘ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರು 2022ರ ಸೆಪ್ಟೆಂಬರ್ 1ರಂದು ಅವರನ್ನು ಬಂಧಿಸಿದ್ದು ಅಂದಿನಿಂದಲೂ ಅವರು ಚಿತ್ರದುರ್ಗ ಜೈಲಿನಲ್ಲಿ (ವಿಚಾರಣಾಧಿನ ಬಂದಿ ಸಂಖ್ಯೆ: 2261) ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದರು.
ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು, ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆಡಳಿತಾಧಿಕಾರಿ ನೇಮಕವನ್ನು 2023ರ ಮೇ 22ರಂದು ರದ್ದುಪಡಿಸಿತ್ತು. ‘ಮಠ-ಮಾನ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು‘ ಎಂಬ ಖಚಿತ ನಿಲುವನ್ನು ವ್ಯಕ್ತಪಡಿಸಿತ್ತು.
ಅಂತೆಯೇ, ’ಶರಣರು ಜೈಲಿನಲ್ಲಿರುವ ಕಾರಣ, ಮಠ, ವಿದ್ಯಾಪೀಠ ಹಾಗೂ ಶೈಕ್ಷಣಿಕ ಸಂಸ್ಥೆಗಳ ಆಡಳಿತ ನಿರ್ವಹಣೆಗಾಗಿ ಮಠದ ಭಕ್ತರು, ವೀರಶೈವ, ಲಿಂಗಾಯತ ಸಮುದಾಯದ ಮುಖಂಡರು ಆರು ವಾರಗಳ ಒಳಗಾಗಿ ಮಧ್ಯಂತರ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲ್ಲಿಯವರೆಗೆ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯನ್ನು ಮುಂದುವರಿಸಲಾಗುತ್ತಿದೆ‘ ಎಂದು ನಿರ್ದೇಶಿಸಿತ್ತು.
ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್. ಏಕಾಂತಯ್ಯ ಹಾಗೂ ಇತರರು ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು 2023ರ ಜುಲೈ 3ರಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಮಠದ ದೈನಂದಿನ ಆಡಳಿತ ನಿರ್ವಹಣೆಗಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿತ್ತು.
‘ನಾಳೆಯೇ (ಜುಲೈ 4) ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳತಕ್ಕದ್ದು‘ ಎಂದು ಆದೇಶಿಸಿತ್ತು. ‘ಪ್ರಧಾನ ನ್ಯಾಯಧೀಶರು ಮಠದ ನೀತಿ, ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಅಗತ್ಯವಿದೆ ಎಂದಾಗ ಮಾತ್ರ ಚಿತ್ರದುರ್ಗ ಜಿಲ್ಲಾಧಿಕಾರಿ ಇವರಿಗೆ ನೆರವು ನೀಡಬೇಕು‘ ಎಂದು ನಿರ್ದೇಶಿಸಿತ್ತು.
ಇದರನ್ವಯ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ 2023ರ ಜುಲೈ 4ರಂದು ಬೆಳಗ್ಗೆ ಬೃಹನ್ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ತಾತ್ಕಾಲಿಕ
ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.