ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಕ್ಕೊಮ್ಮೆ ತಾಲ್ಲೂಕು ಭೇಟಿ, ತಿಂಗಳಿಗೊಂದು ಗ್ರಾಮ ವಾಸ್ತವ್ಯ ಕಡ್ಡಾಯ: ಸಿ.ಎಂ

ಜಿಲ್ಲಾಧಿಕಾರಿಗಳಿಗೆ ಸಿ.ಎಂ ತಾಕೀತು
Last Updated 8 ಮೇ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಮತ್ತು ವಿಳಂಬ ಧೋರಣೆಯಿಂದ ಸರ್ಕಾರದ ವರ್ಚಸ್ಸಿಗೆ ಹಾನಿಯಾಗುತ್ತದೆ. ಯಾವುದೇ ಸಂದರ್ಭದಲ್ಲೂ ಈ ಎರಡನ್ನೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಭಾನುವಾರ ಎಚ್ಚರಿಕೆ ನೀಡಿದರು.

ಬಜೆಟ್‌ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜತೆ ನಾಲ್ಕು ಗಂಟೆಗಳ ಕಾಲ ವಿಡಿಯೊ ಕಾನ್ಫರೆನ್ಸ್‌ ನಡೆಸಿದ ಅವರು, ಆಡಳಿತದ ವಿವಿಧ ಹಂತದಲ್ಲಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವಂತೆ ತಾಕೀತು ಮಾಡಿದರು. ಚುನಾವಣಾ ವರ್ಷವಾಗಿರುವ ಕಾರಣದಿಂದಬಜೆಟ್‌ ಘೋಷಣೆಗಳನ್ನು ಕಾಲಮಿತಿ ಯೊಳಗೆ ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ತಕ್ಷಣದಿಂದಲೇ ಕಾರ್ಯ
ಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ಸಮಯದ ಮಿತಿ ಬೇಡ: ಜಿಲ್ಲಾಧಿ ಕಾರಿಗಳು ನಿಗದಿತ ಅವಧಿಗೆ ಸೀಮಿತವಾಗಿ ಕೆಲಸ ಮಾಡಿದರೆ ಗುರಿ ಸಾಧಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಎಲ್ಲರೂ ಹೆಚ್ಚು ಸಮಯವನ್ನು ಕರ್ತವ್ಯಕ್ಕೆ ಮೀಸಲಿಡಬೇಕು. ಎಲ್ಲ ಹಂತಗಳಲ್ಲಿ ಕಡತ ವಿಲೇವಾರಿಗೆ ವೇಗ ನೀಡಬೇಕು. ‘ಅರ್ಜಿ ಸಲ್ಲಿಸಿದರೆ ಕೆಲಸ ಆಗುವುದಿಲ್ಲ’ ಎಂಬ ಮಾತು ಹುಸಿಯಾಗುವಂತೆ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ವಿವಿಧ ಜಿಲ್ಲೆಗಳಿಂದ 16,436 ಅರ್ಜಿಗಳು ಮುಖ್ಯಮಂತ್ರಿ ಕಚೇರಿಗೆ ಬಂದಿವೆ. ಅವುಗಳಲ್ಲಿ 10,000 ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಕಚೇರಿಯಿಂದ ಬಂದ ಪತ್ರಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಂಡು, ಪ್ರತಿಕ್ರಿಯೆ ಸಲ್ಲಿಸಬೇಕು. ಸಮಸ್ಯೆ ಪರಿಹಾರಕ್ಕೆ ಸ್ಥಳೀಯವಾಗಿಯೇ ಕ್ರಮ ಕೈಗೊಳ್ಳಬೇಕು ಎಂದರು.

ಎಲ್ಲ ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಬೇಕು. ‘ಜಿಲ್ಲಾಧಿಕಾರಿಗಳ ನಡೆ– ಹಳ್ಳಿಯ ಕಡೆ’ ಕಾರ್ಯಕ್ರಮದ ಭಾಗವಾಗಿ ತಿಂಗಳಿಗೊಮ್ಮೆ ಗ್ರಾಮ ವಾಸ್ತವ್ಯ ನಡೆಸುವುದು ಕಡ್ಡಾಯ ಎಂದು ಹೇಳಿದರು.

‘ಗ್ರಾಮ ಒನ್‌’ ಸೇರಿದಂತೆ ವಿವಿಧ ಸೇವಾ ಕೇಂದ್ರಗಳಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಮೇಲೆ ನಿಗಾ ಇರಿಸಬೇಕು. ‘ಭೂಮಿ’ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು 30 ದಿನಗಳೊಳಗೆ ವಿಲೇವಾರಿ ಮಾಡಬೇಕು ಎಂದರು.

ಟೆಂಡರ್‌ನಲ್ಲಿ ಕಟ್ಟೆಚ್ಚರ: ಅಮೃತ ನಗರೋತ್ಥಾನ ಯೋಜನೆಯಡಿ ಈಗಾಗಲೇ ಆರಂಭಿಸಿರುವ ಟೆಂಡರ್‌ ಪ್ರಕ್ರಿಯೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಬಾಕಿ ಇರುವ ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್‌ ಕರೆಯಬೇಕು. ‘ಅಮೃತ ನಿರ್ಮಲ ನಗರ’ ಯೋಜನೆಯ ಟೆಂಡರ್‌ ಪ್ರಕ್ರಿಯೆಯನ್ನೂ ಚುರುಕುಗೊಳಿಸಬೇಕು. ಯಾವುದೇ ಕಾಮಗಾರಿಗೆ ಅತಿ ಕಡಿಮೆ ದರ ನಮೂದಿಸಿದ (ಎಲ್‌–1) ಬಿಡ್‌ದಾರರಿಗೆ ಗುತ್ತಿಗೆ ನೀಡಬೇಕು. ತಪ್ಪಿದರೆ ಟೆಂಡರ್‌ ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ, ಸಿ.ಸಿ.ಪಾಟೀಲ, ಉಮೇಶ ಕತ್ತಿ, ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಬಿ.ಸಿ.ನಾಗೇಶ್, ಬಿ.ಸಿ ಪಾಟೀಲ, ವಿ. ಸುನೀಲ್‌ ಕುಮಾರ್, ಪ್ರಭು ಚವ್ಹಾಣ್‌, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಮಳೆಗಾಲದ ತಯಾರಿಗೆ ಸೂಚನೆ:

‘ಮಳೆಗಾಲ ಆರಂಭವಾಗುತ್ತಿರುವುದರಿಂದ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಕುರಿತು ಜಿಲ್ಲಾಧಿಕಾರಿಗಳು ತಕ್ಷಣವೇ ಪರಿಶೀಲನೆ ನಡೆಸಬೇಕು. ಕೊರತೆ ಕಂಡುಬಂದಲ್ಲಿ ಅಗತ್ಯವಿರುವಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು.

ಎಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯಿಂದ ರೂಪಿಸಿರುವ ಹೊಸ ಯೋಜನೆ
ಯಡಿ 72 ಗಂಟೆಯೊಳಗೆ ಅರ್ಜಿಗಳ ವಿಲೇವಾರಿ ಕುರಿತು ನಿಗಾ ವಹಿಸಬೇಕು ಎಂದರು.

‘ಅರ್ಜಿ ತಿರಸ್ಕಾರವೇ ಪ್ರಾಮಾಣಿಕತೆಯಲ್ಲ’:

‘ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸುವುದೇ ಪ್ರಾಮಾಣಿಕತೆ ಎಂದು ಅಧಿಕಾರಿಗಳು ಭಾವಿಸಬಾರದು. ಜನರಿಗೆ ಸಹಾಯ ಮಾಡಲು ಅಧಿಕಾರಿಗಳು ಸ್ವಲ್ಪ ಪ್ರಮಾಣದ ತೊಂದರೆಯನ್ನಾದರೂ ಎದುರಿಸಲು ಸಿದ್ಧರಾಗಿರಬೇಕು’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

‘ಬಡವರಿಗೆ ಸಹಾಯ ಮಾಡಲು ಯಾವುದೇ ನಿರ್ಧಾರ ತೆಗೆದುಕೊಂಡರೂ ಸರ್ಕಾರ ನಿಮ್ಮ ರಕ್ಷಣೆಗೆ ನಿಲ್ಲುತ್ತದೆ. ಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿದರೆ ಹೊಸ ಚೈತನ್ಯ ಮೂಡುತ್ತದೆ. ಅದರಿಂದ ನಿಮಗೂ ತೃಪ್ತಿ ದೊರೆಯುತ್ತದೆ. ಆಡಳಿತದಲ್ಲಿ ಬದಲಾವಣೆ ಆಗುತ್ತಿದೆ. ಸರಳ, ಸುಲಭ ಮತ್ತು ಸ್ವಚ್ಛವಾದ ಆಡಳಿತವಿದೆ ಎಂಬ ಭಾವನೆ ಬರುವಂತೆ ಕೆಲಸ ಮಾಡಬೇಕು’ ಎಂದರು.

ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಮಿತಿ:

‘ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಬಿಗಿ ಕಟ್ಟೆಚ್ಚರ ವಹಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ರಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಒದಗಿಸಿ, ಸರ್ಪಗಾವಲಿನಲ್ಲಿ ಪರೀಕ್ಷೆ ನಡೆಸುವಂತೆ ತಾಕೀತು ಮಾಡಿದ್ದಾರೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಡೀಮ್ಡ್‌ ಅರಣ್ಯದ ವ್ಯಾಪ್ತಿಯಲ್ಲಿರುವ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡುವ ವಿಚಾರವನ್ನೂ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಯಾವುದೇ ರೈತರನ್ನು ಒಕ್ಕಲೆಬ್ಬಿಸದಂತೆ ಸ್ಪಷ್ಟವಾದ ನಿರ್ದೇಶನ ನೀಡಿದ್ದಾರೆ’ ಎಂದರು.

ಪ್ರಮುಖ ಸೂಚನೆಗಳು:

*ಸರ್ಕಾರದ ವಿವಿಧ ಯೋಜನೆಗಳಿಗೆ ತಿಂಗಳೊಳಗೆ ಜಮೀನು ಗುರುತಿಸುವುದು.

* ಗೋಶಾಲೆಗಳ ನಿರ್ಮಾಣಕ್ಕೆ ಎಲ್ಲ ಜಿಲ್ಲೆಗಳಲ್ಲೂ ತಲಾ 10 ಎಕರೆ ಜಮೀನು ಗುರುತಿಸುವುದು.

*19 ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯಗಳ ಜನರಿಗೆ ವಸತಿ ಕಲ್ಪಿಸಲು ಜಮೀನು ಗುರುತಿಸುವುದು.

* 7,000 ಶಾಲಾ ಕೊಠಡಿ, 100 ಪ್ರಾಥಮಿಕ ಆರೋಗ್ಯ ಕೇಂದ್ರ, 4,000 ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ತ್ವರಿತ ಚಾಲನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT