ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾಕ್ಕೆ ಬರೆದಿದ್ದ ಪತ್ರಕ್ಕೆ ವೈಟ್ನರ್ ಹಚ್ಚಿ ತಿರುಚಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ವೈಟ್ನರ್ ಹಚ್ಚಿದ್ದರ ಹಿಂದೆ ಏನಿದೆ ಎನ್ನುವ ಬಗ್ಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹೆಚ್ಚಿದನ್ನೇ ಮಹಾನ್ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ – ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ, ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣುಬಿಟ್ಟು ನೋಡಿ’ ಎಂದಿದ್ದಾರೆ
‘ನನ್ನ ಪತ್ನಿ ಬದಲೀ ನಿವೇಶನ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿ ಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ‘ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ’ ಎಂಬ ನಾಲ್ಕೈದು ಪದಗಳಿಗೆ ವೈಟ್ನರ್ ಹಾಕಿ, ಪ್ರಾಧಿಕಾರ ಅಭಿವೃದ್ಧಿ ಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಜಾಗದಲ್ಲಿ ನಿವೇಶನ ಕೊಡಿ ಎಂಬ ಮನವಿ ಅಷ್ಟೆ ಇದೆ’ ಎಂದಿದ್ದಾರೆ.
‘ವೈಟ್ನರ್ ಹಚ್ಚಿ ಕಪ್ಪು ಚುಕ್ಕೆ ಅಳಿಸಿಕೊಳ್ಳಲು ಸಾಧ್ಯವಿಲ್ಲ, ಸಿಎಂ ಪತ್ನಿ ನಿವೇಶನ ಕೇಳಿದ್ದು ವಿಜಯನಗರದಲ್ಲಿ, ಮುಡಾ ವಿಚಾರ ಚರ್ಚೆಗೆ ಬಂದ ನಂತರ ಸಿದ್ದರಾಮಯ್ಯ ಅವರ ಪರವಾಗಿ ಯಾರೋ ಹೋಗಿ ವೈಟ್ನರ್ ಹಚ್ಚಿ ಬಂದಿದ್ದಾರೆಂದು’ ಬೊಬ್ಬೆ ಹಾಕುತ್ತಿದ್ದ ಸ್ವಯಂ ಘೋಷಿತ ಕಾನೂನು ಪಂಡಿತರು ಈಗೇನು ಹೇಳುತ್ತಾರೆ?. ಆತುರದಲ್ಲಿ ಮೂಗು ಕತ್ತರಿಸಿಕೊಂಡು, ರಾತ್ರಿಯೆಲ್ಲ ಕನ್ನಡಿ ಮುಂದೆ ನಿಂತು ಕಣ್ಣೀರು ಹಾಕಿದ್ದರಂತೆ ಹಾಗಾಯಿತು ಕೆಲವು ಅತಿ ಬುದ್ದಿವಂತರ ಕತೆ. ಕಪೋಲ ಕಲ್ಪಿತ ಕಟ್ಟುಕತೆಗಳ ಮೂಲಕ ನನ್ನನ್ನು ಹಾಗೂ ನನ್ನ ಕುಟುಂಬವನ್ನು ವಿನಾಃಕಾರಣ ಅಪರಾಧಿಗಳಂತೆ ಬಿಂಬಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಬಿಜೆಪಿ – ಜೆಡಿಎಸ್ ಪಕ್ಷಗಳ ವಿವೇಕ ಶೂನ್ಯ ನಾಯಕರು ಇಂದು ಜನರೆದುರು ಬೆತ್ತಲಾಗಿದ್ದಾರೆ. ಸತ್ಯ ಹಾಗೆಯೇ, ಅರಿವಿಗೆ ಬರುವುದು ಸ್ವಲ್ಪ ತಡವಾಗಬಹುದು, ಆದರೆ ಅಂತಿಮ ಗೆಲುವು ಸತ್ಯದ್ದೇ ಆಗಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಮುಡಾ ಅಕ್ರಮವಾಗಿ ಸ್ವಾದೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹೆಚ್ಚಿದನ್ನೇ ಮಹಾನ್ ಅಪಾರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ – ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ,… pic.twitter.com/NMQfgViKNp
— Siddaramaiah (@siddaramaiah) August 26, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.