ವಿಜಯಪುರ: ಅಲ್ಪಸಂಖ್ಯಾತ ವೋಟ್ ಬ್ಯಾಂಕ್ ಗೆ ಅಂಜಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಕ್ಕೆ ಮಾರಕವಾದ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿರುವುದು ಖಂಡನೀಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಯತ್ನಾಳ, ವಕ್ಫ್ ಬೋರ್ಡ್ ಬಳಿ ಸುಮಾರು 8.66 ಲಕ್ಷ ಆಸ್ತಿಗಳಿವೆ, 8.02 ಲಕ್ಷ ಎಕರೆ ಒಡೆತನದ ಆಸ್ತಿ ವಕ್ಫ್ ಬಳಿ ಇರುವುದು ಕಾನೂನು ತಜ್ಞರು ಹಾಗೂ ಸಂವಿಧಾನ ತಜ್ಞರಾದ ಸಿದ್ದರಾಮಯ್ಯನಿರಿಗೆ ಗೊತ್ತಿಲ್ಲವೇ ಎಂದು ಟಾಂಗ್ ನೀಡಿದ್ದಾರೆ.
ವಕ್ಫ್ ಟ್ರಿಬ್ಯೂನಲ್‌ನಲ್ಲಿ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲೂ ಪ್ರಶ್ನಿಸುವಂತಿಲ್ಲ. ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲೇ ವಕ್ಫ್ ಎಂಬ ಪರಿಕಲ್ಪನೆ ಇಲ್ಲ ಎಂದು ತಿಳಿಸಿದ್ದಾರೆ.
ರಕ್ಷಣಾ ಇಲಾಖೆ ಹಾಗೂ ಭಾರತೀಯ ರೈಲ್ವೆ ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ನಲ್ಲಿ. ಈ ಕಾಯ್ದೆಯಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಪಟ್ಟಿರುವುದು ಹಿಂದೂಗಳು ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ತಿರುಚೆಂಥುರೈ ಹಳ್ಳಿಯಲ್ಲಿರುವ 1,500 ವರ್ಷಗಳ ಇತಿಹಾಸವಿರುವ ಸುಂದರೇಶ್ವರ ಸ್ವಾಮಿ ದೇವಸ್ಥಾನದ ಮೇಲೂ ವಕ್ಫ್ ಮಂಡಳಿಯ ‘ಕಾಕ ದೃಷ್ಟಿ’ ಬಿದ್ದಿದ್ದು, ದೇವಸ್ಥಾನದ 369 ಎಕರೆ ಸಂಪೂರ್ಣವಾಗಿ ವಕ್ಫ್ ಗೆ ಸೇರಿದ್ದು ಎಂದು ಹೇಳಿತ್ತು. ಈ ರೀತಿಯಾದ ಏಕಪಕ್ಷೀಯವಾದ ಕಾನೂನು ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಮುಖ್ಯ ಮಂತ್ರಿಗಳಾಗಿ 'You should further democracy, Not Hypocrisy' ಎಂದು ಬರೆದುಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.