ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕು ಹರಿತವಾಗಿಡಿ ಎಂದು ಭಾಷಣ: ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ವಿರುದ್ಧ ದೂರು

Last Updated 27 ಡಿಸೆಂಬರ್ 2022, 10:25 IST
ಅಕ್ಷರ ಗಾತ್ರ

ಶಿವಮೊಗ್ಗ: ಲವ್‌ ಜಿಹಾದ್‌ಗೆ ಹೆಣ್ಣುಮಕ್ಕಳು ಬಲಿಯಾಗಬೇಡಿ, ಚಾಕುವನ್ನು ಹರಿತವಾಗಿಡಿ ಎಂದು ಭಾಷಣ ಮಾಡಿದ್ದ ಭೋಪಾಲ್‌ನ ಬಿಜೆಪಿ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ದೆಹಲಿ ಮೂಲದ ತೆಹಸೀನ್ ಪೂನಾವಾಲಾ ಎಂಬುವವರು ಟ್ವಿಟರ್ ಮೂಲಕ ಎಸ್‌ಪಿಗೆ ದೂರು ನೀಡಿದ್ದಾರೆ. ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೂ ಟ್ಯಾಗ್ ಮಾಡಿದ್ದಾರೆ.

ದ್ವೇಷ ಭಾಷಣದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವ ಪ್ರಯತ್ನದ ಹಿನ್ನೆಲೆಯಲ್ಲಿ ಸಾದ್ವಿ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಅವರು ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮಂಗಳವಾರ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಭಾನುವಾರ ಹಿಂದೂ ಜಾಗರಣ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್, ‘ಮುಂದೆ ಎಂಥ ಸಂದರ್ಭ ಬರುತ್ತದೋ ಗೊತ್ತಿಲ್ಲ. ಆತ್ಮ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ನಮ್ಮ ಹೆಣ್ಣು ಮಕ್ಕಳ ಸಂರಕ್ಷಣೆಗಾಗಿ ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಸಿದ್ಧವಾಗಿಟ್ಟುಕೊಳ್ಳಿ. ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬ್‌ಗಳಂತೆ ಸಿದ್ಧಪಡಿಸಬೇಕು. ನಮ್ಮ ಹೆಣ್ಣುಮಕ್ಕಳು ಲವ್ ಜಿಹಾದ್‌ನಲ್ಲಿ ಸಿಲುಕದಂತೆ ನೋಡಿಕೊಳ್ಳಬೇಕು. ಧರ್ಮ ತಾಯಿಯ ರೂಪ. ಜನ್ಮಭೂಮಿ ಕೂಡ ತಾಯಿಯ ರೂಪ. ಹಿಂದೂಗಳು ಸತ್ಯ ಮತ್ತು ಧರ್ಮದಲ್ಲಿ ನಂಬಿಕೆ ಇಟ್ಟವರು. ಶಿವಾಜಿ ಮಹಾರಾಜರ ಸ್ಫೂರ್ತಿಯಲ್ಲಿ ಬೆಳೆದು ಬಂದಿರುವ ನಮಗೆ ಧರ್ಮ ಸಂರಕ್ಷಣೆಗೆ ಜೀವ ಕೊಡುವುದು ಗೊತ್ತಿದೆ. ಜೀವ ತೆಗೆಯುವುದೂ ಗೊತ್ತಿದೆ’ ಎಂದು ಹೇಳಿದ್ದರು.

ಸಾದ್ವಿ ವಿರುದ್ಧ ಐಪಿಸಿ 153/ಎ, 153/ಬಿ, 268, 295–ಎ,298,504, 508,1860 ಅಡಿ ಎಫ್‌ಐಆರ್ ದಾಖಲು ಮಾಡುವಂತೆ ಪೂನಾವಾಲಾ ಎಸ್ಪಿಗೆ ಕೋರಿದ್ದಾರೆ.

ಖುದ್ದಾಗಿ ಬರಲು ಸೂಚನೆ: ಎಸ್ಪಿ

ಟ್ವಿಟರ್‌ ದೂರಿನ ಅನ್ವಯ ಏನೂ ಕ್ರಮ ಮಾಡಲು ಆಗೊಲ್ಲ. ತೊಂದರೆಗೀಡಾದವರು ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಬಹುದು. ಎರಡು ಇ–ಮೇಲ್‌ ಮೂಲಕವೂ ದೂರು ಬಂದಿವೆ. ಖುದ್ದಾಗಿ ಹಾಜರಾಗಿ ದೂರು ನೀಡುವಂತೆ ಅವರಿಗೆ ಸೂಚನೆ ನೀಡಿದ್ದೇವೆ. ದೂರಿನ ಪ್ರತಿಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT