ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರ್ಯಾಂಡ್‌ ಬೆಂಗಳೂರು: ಕಾಂಗ್ರೆಸ್‌–ಬಿಜೆಪಿ ವಾಕ್ಸಮರ

Published 5 ಡಿಸೆಂಬರ್ 2023, 15:19 IST
Last Updated 5 ಡಿಸೆಂಬರ್ 2023, 15:19 IST
ಅಕ್ಷರ ಗಾತ್ರ

ವಿಧಾನಸಭೆ(ಬೆಳಗಾವಿ): ‘ಬ್ರ್ಯಾಂಡ್‌ ಬೆಂಗಳೂರು’ ಕಲ್ಪನೆಯಡಿ ರಾಜ್ಯ ಸರ್ಕಾರ ಆರಂಭಿಸಿರುವ ಯೋಜನೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.

ಕಾಂಗ್ರೆಸ್‌ನ ಎನ್‌.ಎ. ಹ್ಯಾರಿಸ್‌ ‘ಬ್ರ್ಯಾಂಡ್‌ ಬೆಂಗಳೂರು’ ಯೋಜನೆ ಕುರಿತು ಪ್ರಶ್ನೆ ಕೇಳಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡಿದರು.

ಸಚಿವರು ಉತ್ತರ ಆರಂಭಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಬಿಜೆಪಿಯ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಸತೀಶ್‌ ರೆಡ್ಡಿ, ಎಸ್‌.ಆರ್‌. ವಿಶ್ವನಾಥ್‌ ಮತ್ತಿತರರು, ‘ಯಾವ ಕಾರಣಕ್ಕಾಗಿ ಈ ಪ್ರಶ್ನೆ ಕೇಳಿದ್ದೀರಿ? ಪ್ರಚಾರ ಕೊಡಿಸುವುದಕ್ಕಾ’ ಎಂದು ಛೇಡಿಸಿದರು.

‘ಈ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ ನಯಾಪೈಸೆ ಕಾಮಗಾರಿ ನಡೆದಿಲ್ಲ. ಲೋಡ್‌ ಶೆಡ್ಡಿಂಗ್‌, ರಸ್ತೆಗಳ ಗುಂಡಿ, ಸಂಚಾರ ದಟ್ಟಣೆ ಹೆಚ್ಚಾಗಿದೆ. ಬ್ರ್ಯಾಂಡ್‌ ಬೆಂಗಳೂರು ಎಂದರೆ ಇದೇನಾ’ ಎಂದು ಪ್ರಶ್ನಿಸಿದರು.

‘ಜನರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಇದಕ್ಕೆ ಸಲಹೆಗಾರರು ಬೇಕಾ’ ಎಂದು ಬಿಜೆಪಿಯ ಮುನಿರತ್ನ ಕೇಳಿದರು.

ಬಿಜೆಪಿ ಸದಸ್ಯರ ಪ್ರಶ್ನೆಗಳಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ಪ್ರತ್ಯುತ್ತರ ಕೊಡಲಾರಂಭಿಸಿದರು. ‘ನಿಮ್ಮ ಕೈಯಲ್ಲಿ ಏನೂ ಆಗಲಿಲ್ಲ. ಈಗ ಕೆಲಸ ಮಾಡುವವರಿಗಾದರೂ ಬಿಡಿ’ ಎಂದು ಕಾಂಗ್ರೆಸ್‌ನ ಎಚ್‌.ಸಿ. ಬಾಲಕೃಷ್ಣ ಬಿಜೆಪಿ ಸದಸ್ಯರನ್ನುದ್ದೇಶಿಸಿ ಹೇಳಿದರು. ವಾಕ್ಸಮರ ಜೋರಾಯಿತು. ಮಧ್ಯ ಪ್ರವೇಶಿಸಿದ ಸ್ಪೀಕರ್‌ ಯು.ಟಿ. ಖಾದರ್‌ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT