ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌ಡಿಕೆಯನ್ನು ಬಂಧಿಸಲೇಬೇಕಾದರೆ ನಮ್ಮ ಸರ್ಕಾರ ಹಿಂದೇಟು ಹಾಕಲ್ಲ: ಕಾಂಗ್ರೆಸ್

Published 21 ಆಗಸ್ಟ್ 2024, 12:54 IST
Last Updated 21 ಆಗಸ್ಟ್ 2024, 12:54 IST
ಅಕ್ಷರ ಗಾತ್ರ

ಬೆಂಗಳೂರು: ಸನ್ಮಾನ್ಯ ಭ್ರಷ್ಟ ಕುಮಾರ ಅವರೇ, ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬಂದರೂ ಸಾಧ್ಯವಿಲ್ಲ ಎಂದಿದ್ದೀರಿ. ನಿಮ್ಮನ್ನು ಬಂಧಿಸಲು ನೂರು ಸಿದ್ದರಾಮಯ್ಯನವರು ಬೇಕಿಲ್ಲ, ಒಬ್ಬ ಸಿದ್ದರಾಮಯ್ಯನವರೂ ಬೇಕಿಲ್ಲ ಎಂದು ರಾಜ್ಯ ಕಾಂಗ್ರೆಸ್, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರ್ನಾಟಕದ ಪೊಲೀಸರ ಸಾಮರ್ಥ್ಯಕ್ಕೆ ಸವಾಲು ಹಾಕುತ್ತಿದ್ದಾರಾ ಅಥವಾ ಕಾನೂನನ್ನು ಪ್ರಶ್ನೆ ಮಾಡುತ್ತಿದ್ದಾರಾ? ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್‌ ಮೂಲಕ ಪ್ರಶ್ನಿಸಿದೆ.

ಗಣಿ ಹಗರಣದಲ್ಲಿ 550 ಎಕರೆ ಭೂಮಿ ಬಗೆಯಲು ನಿಯಮಗಳನ್ನು ಗಾಳಿಗೆ ತೂರಿದ ಎಚ್‌.ಡಿ, ಕುಮಾರಸ್ವಾಮಿಯವರನ್ನುಅಗತ್ಯ ಬಿದ್ದರೆ, ಬಂಧಿಸಲೇಬೇಕಾದ ಸನ್ನಿವೇಶ ಸೃಷ್ಟಿಯಾದರೆ ಬಂಧಿಸಲು ನಮ್ಮ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಕಾನೂನು ಪಾಲನೆ ಮಾಡುವುದರಲ್ಲಿ, ನಿಷ್ಪಕ್ಷಪಾತ ತನಿಖೆ ನಡೆಸುವುದರಲ್ಲಿ ನಮ್ಮ ಸರ್ಕಾರ ಲೋಪವಾಗಲು ಬಿಡುವುದಿಲ್ಲ. ಮೈ ತುಂಬಾ ಭ್ರಷ್ಟಾಚಾರದ ಕೊಳೆಯನ್ನೇ ತುಂಬಿಕೊಂಡಿರುವ ಕುಮಾರಸ್ವಾಮಿಯವರು ಸಾರ್ವಜನಿಕ ಜೀವನದಲ್ಲಿರಬೇಕಾದ ವ್ಯಕ್ತಿಯಲ್ಲ, ಜೈಲಿನಲ್ಲಿ ಇರಬೇಕಾದ ವ್ಯಕ್ತಿ ಎಂದು ಅದು ಹೇಳಿದೆ.

ಇದೇವೇಳೆ, ಬಿಜೆಪಿ ವಿರುದ್ಧವೂ ಟೀಕೆಗೈದಿರುವ ಕಾಂಗ್ರೆಸ್, ಅಧಿಕಾರದಾಹಿ ಬಿಜೆಪಿಗೆ ದೇಶದ ಜನ ಪಾಠ ಕಲಿಸಿದರೂ ತನ್ನ ಅನೈತಿಕ ಕೃತ್ಯಗಳನ್ನು ಬಿಟ್ಟಿಲ್ಲ, ಕರ್ನಾಟಕದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ದಾಳ ಉರುಳಿಸಿದರೆ, ಜಾರ್ಖಂಡ್ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಲು ವಿಫಲ ಯತ್ನ ಮಾಡುತ್ತಿದೆ. ಬಿಜೆಪಿಯಂತಹ ಅನೈತಿಕ ರಾಜಕೀಯ ಪಕ್ಷದಿಂದ ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳು ಅಧೋಗತಿಗೆ ತಲುಪಿವೆ. ಸಾರ್ವಜನಿಕ ಲಜ್ಜೆ, ಜನರ ಭಯವಿಲ್ಲದೆ ವರ್ತಿಸುತ್ತಿರುವ ಬಿಜೆಪಿಯನ್ನು ಭಾರತದ ಜನರೇ ಸರ್ವನಾಶ ಮಾಡುತ್ತಾರೆ ಎಂದು ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT