ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಯವೈಖರಿ ತಿದ್ದಿಕೊಳ್ಳದಿದ್ದರೆ ಸಹಿಸಲ್ಲ: ಕೈ ಸಚಿವರಿಗೆ ಹೈಕಮಾಂಡ್ ಎಚ್ಚರಿಕೆ

Published : 4 ಆಗಸ್ಟ್ 2024, 16:04 IST
Last Updated : 5 ಆಗಸ್ಟ್ 2024, 2:55 IST
ಫಾಲೋ ಮಾಡಿ
Comments

ಬೆಂಗಳೂರು: ‘ನಿಮ್ಮ ಕಾರ್ಯವೈಖರಿ ತೃಪ್ತಿದಾಯಕವಾಗಿ ಇಲ್ಲ. ಎರಡು ತಿಂಗಳು ಕಾದು ನೋಡುತ್ತೇವೆ. ಹೀಗೇ ಮುಂದುವರಿದರೆ ಸಹಿಸಲ್ಲ’ ಎಂದು ಸಚಿವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಖಡಕ್‌ ಎಚ್ಚರಿಕೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ‘ಕಾವೇರಿ’ಯಲ್ಲಿ ಸಚಿವರ ಜೊತೆ ಭಾನುವಾರ ಸಭೆ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಸರಿಯಾಗಿ ಕೆಲಸ ಮಾಡದವರನ್ನು ಕೈಬಿಟ್ಟು, ದಸರಾ ವೇಳೆಗೆ ಸಚಿವ ಸಂಪುಟ ಪುನರ್‌ ರಚನೆಯ ಸುಳಿವು ನೀಡಿದ್ದಾರೆ ಎಂದು ಗೊತ್ತಾಗಿದೆ.

‘ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿಯ ಲೋಪ ಇಲ್ಲ. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಂದ ಮತ್ತು ಹಿರಿಯ ವಕೀಲರುಗಳಿಂದ ದಾಖಲೆಗಳ ಪರಿಶೀಲನೆ ನಡೆಸಿದ್ದೇವೆ. ಎರಡೂ ಪ್ರಕರಣಗಳಲ್ಲಿ ಸರ್ಕಾರದ ಪಾತ್ರ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಿದ್ದೂ, ಈ ವಿಚಾರವನ್ನು ರಾಜ್ಯದ ಜನರಿಗೆ ಸರಿಯಾಗಿ ಅರ್ಥ ಮಾಡಿಸುವಲ್ಲಿ ಸೋತಿದ್ದೀರಿ. ಸರಿಯಾಗಿ ನಿರ್ವಹಿಸಿಲ್ಲ’ ಎಂದು ಸಚಿವರನ್ನು ವೇಣುಗೋಪಾಲ್‌ ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ಹೇಳಿವೆ.

‘ಸರಿಯಾಗಿ ಕೆಲಸ ಮಾಡಿದ್ದರೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲಬಹುದಿತ್ತು. ನಿಮ್ಮ ಕೆಲಸ ತವರು ಮತ್ತು ಉಸ್ತುವಾರಿ ಜಿಲ್ಲೆಗೆ ಸೀಮಿತವಾಗಿದೆ. ಉಸ್ತುವಾರಿ ಜಿಲ್ಲೆಯಷ್ಟೆ ಅಲ್ಲ, ಇಡೀ ರಾಜ್ಯ ಪ್ರವಾಸ ಮಾಡಿ ವಹಿಸಿಕೊಂಡ ಇಲಾಖೆಯಲ್ಲಿ ಸುಧಾರಣೆ ತರಬೇಕು’ ಎಂದು ಇಬ್ಬರು ನಾಯಕರೂ ಸಲಹೆ ನೀಡಿದ್ದಾರೆ ಎಂದೂ ಗೊತ್ತಾಗಿದೆ.

‘ಬಿಜೆಪಿ ಅವಧಿಯ ಹಗರಣಗಳ ತನಿಖೆ ಚುರುಕುಗೊಳಿಸಬೇಕು. ಮುಡಾ ವಿಚಾರದಲ್ಲಿ ರಾಜ್ಯಪಾಲರ ವಿರುದ್ದ ಕಾನೂನು ಹೋರಾಟ ಮಾಡಬೇಕಿದ್ದು, ಎಲ್ಲರೂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲಬೇಕು. ಬಿಜೆಪಿ–ಜೆಡಿಎಸ್‌ಗೆ ತಿರುಗೇಟು ಕೊಡುವ ಕೆಲಸ ಮಾಡಬೇಕು. ನಿಮ್ಮ ಜೊತೆ ಹೈಕಮಾಂಡ್ ನಿಲ್ಲಲಿದೆ’ ಎಂದೂ ನಾಯಕರು ಅಭಯ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ, ಕೆ.ಎನ್‌. ರಾಜಣ್ಣ, ಎಸ್‌.ಎಸ್‌. ಮಲ್ಲಿಕಾರ್ಜುನ, ಶರಣಪ್ರಕಾಶ್ ಪಾಟೀಲ, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ರಣದೀಪ್ ಸಿಂಗ್ ಸುರ್ಜೇವಾಲ, ಬೈರತಿ ಸುರೇಶ್, ಎನ್‌. ಚಲುವರಾಯಸ್ವಾಮಿ, ಎಚ್.ಕೆ. ಪಾಟೀಲ ಸಭೆಯಲ್ಲಿದ್ದರು.

‘ನೋಟಿಸ್‌ ನೀಡಲು ರಾಜಭವನ ಬಳಕೆ’

‘ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಲು ರಾಜಭವನವನ್ನು ಬಿಜೆಪಿಯವರು ಬಳಸಿಕೊಂಡಿದ್ದಾರೆ. ಈ ಹುನ್ನಾರದ ವಿರುದ್ಧ ಹೋರಾಡಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ವಿಚಾರವನ್ನು ರಾಜ್ಯದ ಜನರಿಗೆ ತಿಳಿಸುವಂತೆ ಎಂದು ಸಚಿವರಿಗೆ ಸೂಚಿಸಿದ್ದೇವೆ’ ಎಂದು ಕೆ.ಸಿ ವೇಣುಗೋಪಾಲ್‌ ಹೇಳಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರು ಮಾತನಾಡುವುದು ದೊಡ್ಡ ವ್ಯಂಗ್ಯ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಎಷ್ಟು ಪ್ರಕರಣಗಳಿಲ್ಲ? ಪ್ರಜ್ವಲ್ ರೇವಣ್ಣ ವಿರುದ್ದ ಎಷ್ಟು ಪ್ರಕರಣಗಳಿಲ್ಲ?  ಈ ಕಾರಣದಿಂದಾಗಿ ಮುಖ್ಯಮಂತ್ರಿ ವಿರುದ್ದ ಅವರು ಮಾತಾಡುತ್ತಿದ್ದಾರೆ. ನಮಗೆ ಯಾವುದೇ ಭಯ ಇಲ್ಲ. ಎಲ್ಲವನ್ನೂ ಎದುರಿಸಲು ಸಿದ್ಧರಾಗಿದ್ದೇವೆ’ ಎಂದರು.

‘ಬಿಜೆಪಿ ಹುನ್ನಾರದಿಂದಲೇ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡಿತ್ತು. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವನ್ನು ಗುರಿ ಮಾಡಿದ್ದಾರೆ. ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್​ ವಿರುದ್ಧ ಹುನ್ನಾರ ನಡೆದಿರುವುದನ್ನು ಗಮನಿಸಬಹುದು. ಅವರವರ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸಿದರು’ ಎಂದರು.

‘ಮುಖ್ಯಮಂತ್ರಿಯವರ ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಹೊಸಬರಲ್ಲ. ಎಲ್ಲಿ ಶುರು ಮಾಡಿ ಎಲ್ಲಿಗೆ ಬಂದು ತಲುಪಿದ್ದಾರೆ ಎಂದೂ ಗೊತ್ತಿದೆ. ಸಿದ್ದರಾಮಯ್ಯ ಚಾರಿತ್ರ್ಯದ ಬಗ್ಗೆಯೂ ಎಲ್ಲರಿಗೂ ಅರಿವಿದೆ. ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ ಆಗಬಹುದೆಂದು ಷಡ್ಯಂತ್ರ ಮಾಡಲಾಗಿದೆ. ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಹೀಗೆ ಪ್ರಯತ್ನ ನಡೆಯುತ್ತಿದೆ’ ಎಂದೂ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT