ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವಿಧದ ಬಿ‍ಪಿಎಲ್‌ ಚೀಟಿಗೆ ಚಿಂತನೆ: ಕೆ.ಎಚ್. ಮುನಿಯಪ್ಪ

Published 26 ಜುಲೈ 2023, 11:42 IST
Last Updated 26 ಜುಲೈ 2023, 11:42 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾದ ಪ್ರತ್ಯೇಕ ಪಡಿತರ ಚೀಟಿ ಸೇರಿದಂತೆ ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿ ಎರಡು ವಿಧದ ಪಡಿತರ ಚೀಟಿಗಳನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಬಿಪಿಎಲ್‌ ಪಡಿತರ ಚೀಟಿದಾರರಲ್ಲಿ ಕೆಲವರು ಆಹಾರ ಧಾನ್ಯ ಪಡೆಯುತ್ತಿಲ್ಲ. ವೈದ್ಯಕೀಯ ಸೇವೆಗಳಲ್ಲಿ ಶುಲ್ಕ ರಿಯಾಯ್ತಿ ಪಡೆಯುವುದಕ್ಕೆ ಸೀಮಿತವಾಗಿ ಪಡಿತರ ಚೀಟಿ ಬಳಸುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಆಸಕ್ತರಿಗೆ ವೈದ್ಯಕೀಯ ಉದ್ದೇಶಕ್ಕೆ ಸೀಮಿತವಾಗಿ ಬಳಸಬಹುದಾದ ಬಿಪಿಎಲ್‌ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೊಳಿಸುವ ಪ್ರಸ್ತಾವವಿದೆ’ ಎಂದರು.

ಆಂಧ್ರಪ್ರದೇಶ ಮಾದರಿ ಕುರಿತು ಮಾಹಿತಿ ಪಡೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಪಿಎಲ್ ಪಡಿತರ ಚೀಟಿ ಕೋರಿರುವ ಮೂರು ಲಕ್ಷ ಅರ್ಜಿಗಳು ಬಾಕಿ ಇವೆ. ಅವುಗಳನ್ನು ಶೀಘ್ರದಲ್ಲಿ ಪರಿಶೀಲಿಸಿ, ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗುವುದು ಎಂದರು.

ನಾಲ್ಕು ಜಿಲ್ಲೆಗಳಲ್ಲಿ ಬಾಕಿ: ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್‌ ಪಡಿತರ ಚೀಟಿಗಳಿವೆ. ಈ ಪೈಕಿ 97.27 ಲಕ್ಷ ಪಡಿತರ ಚೀಟಿದಾರರ ಆಧಾರ್‌, ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಜೋಡಣೆ ಮಾಡಲಾಗಿದೆ. 30.90 ಲಕ್ಷ ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಈ ಮಾಹಿತಿ ಜೋಡಣೆಯಾಗಿಲ್ಲ. ಮೊದಲ ಹಂತದಲ್ಲಿ ಅಗತ್ಯ ಮಾಹಿತಿ ಜೋಡಣೆಯಾಗಿರುವ ಪಡಿತರ ಚೀಟಿದಾರರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಅಕ್ಕಿಯ ಬಾಬ್ತು ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಮುನಿಯಪ್ಪ ಹೇಳಿದರು.

ಮಾಹಿತಿ ಕೊರತೆ ಇರುವ ಪಡಿತರ ಚೀಟಿದಾರರನ್ನು ಸಂಪರ್ಕಿಸಿ, ಅಗತ್ಯ ಮಾಹಿತಿಗಳನ್ನು ಜೋಡಣೆ ಮಾಡಲಾಗುವುದು. ಎರಡರಿಂದ ಮೂರು ತಿಂಗಳಲ್ಲಿ ಅಂತಹ ಪಡಿತರ ಚೀಟಿದಾರರ ಖಾತೆಗೂ ಎರಡರಿಂದ ಮೂರು ತಿಂಗಳಲ್ಲಿ ಹಣ ವರ್ಗಾವಣೆ ಮಾಡಲಾಗುವುದು ಎಂದು ವಿವರ ನೀಡಿದರು.

ಈವರೆಗೆ 27 ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ₹ 566 ಕೋಟಿ ಪಾವತಿಸಲಾಗಿದೆ. ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬಾಕಿ ಇದ್ದು, ವಾರದೊಳಗೆ ಎಲ್ಲರ ಖಾತೆಗಳಿಗೂ ಹಣ ವರ್ಗಾವಣೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT