ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆವೈಸಿ ದುರ್ಬಳಕೆ: ಅರ್ಜಿ ಸಲ್ಲಿಸದಿದ್ದರೂ ₹35 ಲಕ್ಷ ಸಾಲ

* ಠಾಣೆ ಮೆಟ್ಟಿಲೇರಿದ ಪ್ರಾಧ್ಯಾಪಕ * ಬ್ಯಾಂಕ್, ಏಜೆನ್ಸಿಗಳು ಭಾಗಿ ಶಂಕೆ
Published 23 ನವೆಂಬರ್ 2023, 0:01 IST
Last Updated 23 ನವೆಂಬರ್ 2023, 0:01 IST
ಅಕ್ಷರ ಗಾತ್ರ

ಬೆಂಗಳೂರು: ಆಧಾರ್, ಪಾನ್ ಕಾರ್ಡ್ ಹಾಗೂ ಇತರೆ ಕೆವೈಸಿ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್‌ಗಳಿಂದ ಲಕ್ಷಗಟ್ಟಲೆ ಸಾಲ ಪಡೆಯುತ್ತಿರುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದ್ದು, ಜಾಲದ ಸುಳಿಯಲ್ಲಿ ಸಿಲುಕಿದ ಹಲವರು ಪೊಲೀಸ್‌ ಠಾಣೆ ಮೆಟ್ಟಿಲೇರುತ್ತಿದ್ದಾರೆ.

ಬ್ಯಾಂಕ್‌ಗಳಲ್ಲಿ ವೇತನ ಖಾತೆ ತೆರೆದಿರುವ ಕಾಲೇಜು ಪ್ರಾಧ್ಯಾಪಕರು, ಸರ್ಕಾರಿ ಹಾಗೂ ಖಾಸಗಿ ಕಂಪನಿ ನೌಕರರು ಹಾಗೂ ಇತರರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿರುವ ಜಾಲದ ರೂವಾರಿಗಳು, ಸಾಲ ಪಡೆದು ಪರಾರಿಯಾಗುತ್ತಿದ್ದಾರೆ.

ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು ಹೇಗಾಯಿತು ಎಂದು ಪ್ರಶ್ನಿಸಿ ಸಂತ್ರಸ್ತರು ಬ್ಯಾಂಕ್‌ಗಳಿಗೆ ಅಲೆದಾಡುತ್ತಿದ್ದಾರೆ. ‘ಗೋಪ್ಯ ಮಾಹಿತಿ’ ಅಸ್ತ್ರ ಬಳಸುತ್ತಿರುವ ಬ್ಯಾಂಕ್ ಸಿಬ್ಬಂದಿ, ಸಾಲ ಮಂಜೂರು ಬಗ್ಗೆ ವೈಯಕ್ತಿಕ ದಾಖಲೆಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸಂತ್ರಸ್ತರು ಪೊಲೀಸರಿಗೆ ದೂರು ನೀಡುತ್ತಿದ್ದು, ಬ್ಯಾಂಕ್‌ಗಳು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿವೆ.

‘ಕೆವೈಸಿ ದುರುಪಯೋಗಪಡಿಸಿಕೊಂಡು ಸಾಲ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವರು ಠಾಣೆಗೆ ದೂರು ನೀಡುತ್ತಿದ್ದಾರೆ. ಹಲವರು, ಬ್ಯಾಂಕ್ ಹಾಗೂ ಆರ್‌ಬಿಐ ವೇದಿಕೆಯಲ್ಲಿ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರಾಧ್ಯಾಪಕರ ಹೆಸರಿನಲ್ಲಿ ₹35 ಲಕ್ಷ ಸಾಲ: ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜೊಂದರ ಪ್ರಾಧ್ಯಾಪಕರ ಆಧಾರ್ ಹಾಗೂ ಪಾನ್ ಕಾರ್ಡ್ ದುರುಪಯೋಗಪಡಿಸಿಕೊಂಡು ಎರಡು ಬ್ಯಾಂಕ್‌ಗಳಲ್ಲಿ ₹35 ಲಕ್ಷ ಸಾಲ ಮಂಜೂರು ಮಾಡಲಾಗಿದ್ದು, ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಕೋಣನಕುಂಟೆಯ ಚುಂಚಘಟ್ಟ ಮುಖ್ಯರಸ್ತೆ ನಿವಾಸಿಯಾಗಿರುವ 45 ವರ್ಷದ ಪ್ರಾಧ್ಯಾಪಕರೊಬ್ಬರು ದೂರು ನೀಡಿದ್ದಾರೆ. ಆಕ್ಸಿಸ್ ಬ್ಯಾಂಕ್‌ನ ಜಯನಗರ 4ನೇ ಹಂತದ ಶಾಖೆ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ತಮ್ಮದಲ್ಲದ ತಪ್ಪಿಗೆ ಅಲೆದಾಟ: ‘ನನ್ನ ವೇತನ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಗೃಹ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗಿದ್ದೆ. ಸಿಬಿಲ್ ಸ್ಕೋರ್ ಪರಿಶೀಲಿಸಿದ್ದ ಸಿಬ್ಬಂದಿ, ‘ನಿಮ್ಮ ಹೆಸರಿನಲ್ಲಿ ₹10 ಲಕ್ಷ ಹಾಗೂ ₹25 ಲಕ್ಷದ ಎರಡು ವೈಯಕ್ತಿಕ ಸಾಲಗಳಿವೆ. ಕಂತು ಪಾವತಿ ಬಾಕಿ ಇದ್ದು, ಸಿಬಿಲ್ ಸ್ಕೋರ್ ಕಡಿಮೆ ಇದೆ. ಗೃಹ ಸಾಲ ಸಿಗುವುದಿಲ್ಲ’ ಎಂಬುದಾಗಿ ಹೇಳಿದ್ದರು’ ಎಂದು ದೂರುದಾರ ಪ್ರಾಧ್ಯಾಪಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಲ ನೀಡಿದವರು ಯಾರು ಹಾಗೂ ತೆಗೆದುಕೊಂಡವರು ಯಾರು ಎಂಬುದನ್ನು ಬ್ಯಾಂಕ್‌ನವರು ಆರಂಭದಲ್ಲಿ ಹೇಳಿರಲಿಲ್ಲ. ಅದನ್ನು ತಿಳಿಯಲು ಅಲೆದಾಟ ಆರಂಭವಾಯಿತು. ಕೆಲ ದಿನಗಳ ನಂತರ, ₹10 ಲಕ್ಷ ಸಾಲ ಮಂಜೂರು ಮಾಡಿದ್ದ ಬ್ಯಾಂಕ್ ಹೆಸರು ತಿಳಿಯಿತು. ಅಲ್ಲಿ ವಿಚಾರಿಸಿದಾಗ, ಸಿಬ್ಬಂದಿ ತಪ್ಪೊಪ್ಪಿಕೊಂಡರು. ಸಾಲ ಮರುಪಾವತಿ ಮಾಡದಂತೆ ತಿಳಿಸಿದ್ದಾರೆ’ ಎಂದು ಹೇಳಿದರು.

‘ಆಕ್ಸಿಸ್ ಬ್ಯಾಂಕ್‌ನಿಂದ ₹25 ಲಕ್ಷ ಸಾಲ ಮಂಜೂರಾಗಿದ್ದು ಗೊತ್ತಾಯಿತು. ಬ್ಯಾಂಕ್ ವ್ಯವವಸ್ಥಾಪಕರು ಹಾಗೂ ಸಿಬ್ಬಂದಿಯನ್ನು ವಿಚಾರಿಸಿದಾಗ, ಯಾವುದೇ ಮಾಹಿತಿ ನೀಡಲಿಲ್ಲ. ಆಕ್ಸಿಸ್ ಬ್ಯಾಂಕ್‌ನಲ್ಲಿ ನನ್ನ ಖಾತೆಯಿಲ್ಲ. ಯಾವುದೇ ಸಾಲಕ್ಕೂ ಅರ್ಜಿ ಸಲ್ಲಿಸಿಲ್ಲ. ಹೇಗೆ ಸಾಲ ನೀಡಿದ್ದೀರಾ ಎಂದು ಪ್ರಶ್ನಿಸಿದ್ದೆ. ಸಾಲ ಮಂಜೂರು ದಾಖಲೆ ಕೇಳಿದ್ದೆ. ‘ಗೋಪ್ಯ ಮಾಹಿತಿ’ ಎಂದು ಸಬೂಬು ಹೇಳಿ ಬ್ಯಾಂಕ್‌ನವರು ದಾಖಲೆ ನೀಡಲಿಲ್ಲ. ಈ ಬಗ್ಗೆ ಆರ್‌ಬಿಐಗೂ ದೂರು ನೀಡಿದ್ದೇನೆ’ ಎಂದು ತಿಳಿಸಿದರು.

‘ವಕೀಲರ ಸಲಹೆಯಂತೆ ಠಾಣೆಗೆ ದೂರು ನೀಡಿದ್ದೇನೆ. ಸಾಲದ ವಿಚಾರ ಇತ್ಯರ್ಥವಾಗಿಲ್ಲ. ಆಕ್ಸಿಸ್ ಬ್ಯಾಂಕ್ ವಿರುದ್ಧ ಕಾನೂನು ಹೋರಾಟ ಮುಂದುವರಿದಿದೆ. ನನ್ನಂತೆ ಹಲವರು ವಂಚನೆ ಜಾಲಕ್ಕೆ ಸಿಲುಕಿದ್ದಾರೆ. ಒಬ್ಬೊಬ್ಬರೇ ಠಾಣೆಗೆ ದೂರು ನೀಡುತ್ತಿದ್ದಾರೆ’ ಎಂದು ಹೇಳಿದರು.

ವ್ಯವಸ್ಥಿತ ಜಾಲದಲ್ಲಿ ಹಲವರು ಭಾಗಿ: ‘ಅಗತ್ಯ ಸೇವೆಗಳು ಹಾಗೂ ಇತರೆ ಉದ್ದೇಶಕ್ಕಾಗಿ ಜನರು ನೀಡಿರುವ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಸಾಲ ಪಡೆಯುತ್ತಿರುವ ಜಾಲದಲ್ಲಿ ಕೆಲ ಬ್ಯಾಂಕ್ ಸಿಬ್ಬಂದಿ ಹಾಗೂ ಕೆಲ ಏಜೆನ್ಸಿಯವರು ಭಾಗಿಯಾಗಿರುವ ಶಂಕೆ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರಾಧ್ಯಾಪಕರ ಪ್ರಕರಣದಲ್ಲಿ ಬ್ಯಾಂಕ್‌ ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ, ಪ್ರಾಧ್ಯಾಪಕರ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿ ಸಾಲ ಪಡೆದಿರುವುದು ಗೊತ್ತಾಗಿದೆ. ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ತಿಳಿಸಿವೆ.

ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಆಕ್ಸಿಸ್ ಬ್ಯಾಂಕ್‌ ಅಧಿಕಾರಿಗಳು ಲಭ್ಯರಾಗಲಿಲ್ಲ.

ಸಾಲ ಪರೀಕ್ಷೆ ಹೇಗೆ?

‘ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಯಾವುದಾದರೂ ಸಾಲ ಇದೆಯೇ ಎಂಬುದನ್ನು ತಿಳಿಯಲು ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಬೇಕು. ಅದರಲ್ಲಿ ಸಾಲ ಹಾಗೂ ಅದರ ಪ್ರಾಥಮಿಕ ವಿವರಣೆ ಇರುತ್ತದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು. ‘ಅಕಸ್ಮಾತ್ ಅರ್ಜಿ ಸಲ್ಲಿಸದಿದ್ದರೂ ಸಾಲ ಮಂಜೂರು ಆಗಿದ್ದರೆ ಅಥವಾ ತಮ್ಮ ಹೆಸರಿನಲ್ಲಿ ಬೇರೆ  ಯಾರಾದರೂ ಸಾಲ ಪಡೆದಿದ್ದರೆ ಸಂಬಂಧಪಟ್ಟ ಬ್ಯಾಂಕ್ ಶಾಖೆ ಸಂಪರ್ಕಿಸಬಹುದು. ಆರ್‌ಬಿಐ ಶಾಖೆಗೂ ದೂರು ನೀಡಬಹುದು. ಜೊತೆಗೆ, ಪೊಲೀಸ್‌ ಠಾಣೆಗೂ ದೂರು ನೀಡಲು ಅವಕಾಶವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT