ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಗಳ ಸಲಹೆ ಪಡೆಯದೇ ಆಯೋಜನೆ: ಎಚ್‌.ವಿಶ್ವನಾಥ್

ದಸರಾ ಕವಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ವಾಗ್ದಾಳಿ
Published 17 ಅಕ್ಟೋಬರ್ 2023, 15:19 IST
Last Updated 17 ಅಕ್ಟೋಬರ್ 2023, 15:19 IST
ಅಕ್ಷರ ಗಾತ್ರ

ಮೈಸೂರು: ‘ವಿಧಾನ ಪರಿಷತ್ತಿನಲ್ಲಿ ಸಾಹಿತ್ಯ ವಲಯವನ್ನು ಪ್ರತಿನಿಧಿಸುತ್ತಿರುವ ನನ್ನ ಅಭಿಪ್ರಾಯವನ್ನೇ ದಸರಾ ಕವಿಗೋಷ್ಠಿ ಕುರಿತು ಕೇಳಿಲ್ಲ. ಯಾರ ಅಭಿಪ್ರಾಯವನ್ನೂ ಪಡೆಯದೆ ಅಧಿಕಾರಿಗಳು ತಮ್ಮಿಷ್ಟದಂತೆ ಆಯೋಜಿಸಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಆಕ್ಷೇಪಿಸಿದರು.

ಇಲ್ಲಿನ ಕಲಾಮಂದಿರದಲ್ಲಿ ಮಂಗಳವಾರ ನಡೆದ ‘ದಸರಾ ಕವಿಗೋಷ್ಠಿ’ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕವಿಗಳು, ಸಾಹಿತ್ಯಾಸಕ್ತ ರಾಜಕಾರಣಿಗಳೊಂದಿಗೆ ಚರ್ಚಿಸಿ ಸಲಹೆ ಪಡೆಯಬೇಕಿತ್ತು’ ಎಂದು ಪ್ರತಿಪಾದಿಸಿದರು. 

‘ದೀಪಾಲಂಕಾರ ನೋಡಿದರೆ ದಸರಾ ಚೆನ್ನಾಗಿದೆ ಎಂದನ್ನಿಸುತ್ತದೆ. ಆದರೆ, ಉತ್ಸವ ಕಳೆಗುಂದಿದೆ. ಎಲ್ಲಿಯೂ ಜನಪ್ರತಿನಿಧಿಗಳ ಉಪಸ್ಥಿತಿ ಇಲ್ಲ. ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ’ ಎಂದರು.

 ‘ಸಾಹಿತ್ಯ ವಲಯವು ರಾಜಕೀಯ ಸಾಹಿತ್ಯಕ್ಕೂ ಮನ್ನಣೆ ನೀಡಬೇಕು. ನಿತ್ಯ ಕನ್ನಡವನ್ನು ಕೊಲ್ಲುತ್ತಿರುವ ಜನಪ್ರತಿನಿಧಿಗಳನ್ನು ಖಂಡಿಸುವ ಗಂಡೆದೆಯ ಗುಂಡಿಗೆ ಯಾವ ಸಾಹಿತಿಗಳಿಗೂ ಇಲ್ಲವೇ’ ಎಂದೂ ಪ್ರಶ್ನಿಸಿದರು.

ಓದುಗರಿಗಿಂತ ಕವಿಗಳೇ ಹೆಚ್ಚು:

‘ಕನ್ನಡದಲ್ಲಿ ಓದುಗರಿಗಿಂತ ಹೆಚ್ಚಾಗಿ ಕವಿಗಳಿದ್ದಾರೆ. ಅವರಿಗಿಂತ ಹೆಚ್ಚಾಗಿ ಪ್ರಶಸ್ತಿಗಳಿವೆ. ಪ್ರಶಸ್ತಿಗಳಿಗಿಂತ ಬದುಕಿನಲ್ಲಿ ಹೊಸತನ್ನು ಹುಡುಕುವುದು ಮುಖ್ಯ ಎಂಬುದನ್ನು ಕವಿ ಅರಿಯಬೇಕು’ ಎಂದು ಗೋಷ್ಠಿಯನ್ನು ಉದ್ಘಾಟಿಸಿದ ಜಯಂತ ಕಾಯ್ಕಿಣಿ ಹೇಳಿದರು.

‘ದೇಶವೆಂದರೆ ಒಂದೇ ಕೋಡುಗಂಬದ ಮೇಲೆ ನಿಂತ ಸರ್ಕಸ್ಸಿನ ಡೇರೆಯಲ್ಲ, ಸಾವಿರ ಕಂಬಗಳ ಚಪ್ಪರದಲ್ಲಿ ನಿಂತಿದೆ. ಕವಿಯು ಕನ್ನಡಿ ನೋಡುವಾಗ ಹಿಂದೆ ಇರುವ ಕುಟುಂಬ, ಸಮಾಜ ಸೇರಿದಂತೆ ಮಾನವೀಯ ಜಗತ್ತನ್ನು ಕಾಣಬೇಕು. ಆಗ ಕನ್ನಡಿ ಕವಿತೆಯಾಗುತ್ತದೆ’ ಎಂದರು.

ಸಚಿವನಾಗಿ ಏಳು ಬಾರಿ ದಸರಾ ಆಯೋಜಿಸಿದ್ದೇನೆ. ಬರಗಾಲದಲ್ಲಿ ಪ್ರಾಯೋಜಕತ್ವದ ಹಣದಲ್ಲಿ ಉತ್ಸವ ಮಾಡಲಾಗಿತ್ತು. ಈಗ ಸರ್ಕಾರ ₹30 ಕೋಟಿಯೇಕೆ ಖರ್ಚು ಮಾಡಬೇಕು?

-ಎಚ್‌.ವಿಶ್ವನಾಥ್‌ ವಿಧಾನಪರಿಷತ್‌ ಸದಸ್ಯ

‘ದಸರಾ ಶುಭಾಶಯ ಕೋರಲಾರೆ’

‘ವಿಜಯದಶಮಿ ನರಕ ಚತುರ್ದಶಿ ದೀಪಾವಳಿ ಎಲ್ಲವೂ ಸೂತಕದ ದಿನಗಳು. ದಕ್ಷಿಣ ಭಾರತದ ಪೂರ್ವಿಕರಾದ ನರಕಾಸುರ ಬಲಿ ಚಕ್ರವರ್ತಿ ಹಿರಣ್ಯಕಶಿಪು ರಾವಣ ಮಹಿಷಾಸುರ ಅವರನ್ನು ಯಜ್ಞ–ಯಾಗಗಳನ್ನು ವಿರೋಧಿಸಿದ ವಿಚಾರವಾಗಿ ವ್ಯವಸ್ಥಿತವಾಗಿ ಕೊಲೆ ಮಾಡಿದ ದಿನಗಳು. ಹೀಗಾಗಿ ಶುಭಾಶಯ ಕೋರಲಾರೆ’ ಎಂದು ಕುಂ.ವೀರಭದ್ರಪ್ಪ ಹೇಳಿದರು.  ‘ದೇಶದ ಸಂವಿಧಾನದ ಪೀಠಿಕೆಯಲ್ಲಿರುವ ‘ಭಾರತದ ಪ್ರಜೆಗಳಾದ ನಾವು’ ಎಂಬ ವಾಕ್ಯವನ್ನು ಕವಿ ಕಥೆಗಾರರು ಸದಾ ನೆನಪಿಟ್ಟುಕೊಳ್ಳಬೇಕು. ಅದನ್ನು ಸಮರ್ಥಿಸಬೇಕು. ಸಾಮಾನ್ಯ ಪ್ರಜೆಯ ಪರವಾಗಿ ಮಾತನಾಡಬೇಕು. ಭಾರತದಲ್ಲಿ ನದಿಗಳು ಬತ್ತುತ್ತಿವೆ. ಉತ್ತರ ಕರ್ನಾಟಕದ ಹೊಲಗಳ ಬೆಳೆಗಳು ಒಣಗಿ ಹೋಗಿದ್ದು ರೈತ ಹತಾಶ ಸ್ಥಿತಿಯಲ್ಲಿದ್ದಾನೆ. ಈ ಬಗ್ಗೆ ಕವಿ ಬರೆಯುವುದೇ ಮುಖ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT