ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ವಿಕೋಪ: ಈಗ ಬರೀ ಟ್ರೈಲರ್‌, ಪಿಕ್ಚರ್‌ ಬಾಕಿ ಇದೆ– ಶರತ್‌ ಬಚ್ಚೇಗೌಡ

ಬರದ ಕುರಿತು ಚರ್ಚೆಯಲ್ಲಿ ಶರತ್‌ ಬಚ್ಚೇಗೌಡ ಪ್ರಕೃತಿ ರಕ್ಷಣೆಯ ಪಾಠ
Published 8 ಡಿಸೆಂಬರ್ 2023, 15:00 IST
Last Updated 8 ಡಿಸೆಂಬರ್ 2023, 15:00 IST
ಅಕ್ಷರ ಗಾತ್ರ

ವಿಧಾನಸಭೆ(ಬೆಳಗಾವಿ): ‘ಈಗ ಸಂಭವಿಸುತ್ತಿರುವ ನೈಸರ್ಗಿಕ ವಿಕೋಪ ಕೇವಲ ಟ್ರೈಲರ್‌, ಮುಂದೆ ಪಿಕ್ಚರ್‌ ಬಾಕಿ ಇದೆ. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ, ಭೂಮಿಯಲ್ಲಿ ವಾಸ ಮಾಡುವುದಕ್ಕೂ ಕಷ್ಟವಾಗುವ ದಿನಗಳು ದೂರವಿಲ್ಲ. ಅನ್ಯಗ್ರಹ ಹುಡುಕಿಕೊಂಡು ಹೋಗಬೇಕಾದೀತು’ ಎಂದು ಕಾಂಗ್ರೆಸ್‌ನ ಶರತ್‌ ಬಚ್ಚೇಗೌಡ ಎಚ್ಚರಿಕೆ ನೀಡಿದರು.

ಬರದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು. ‘ನಿಸರ್ಗದ ಜತೆ ಹೊಂದಿಕೊಂಡು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದೇ ಹೋದರೆ ಉಳಿಗಾಲವಿಲ್ಲ. ಆಧುನಿಕತೆಯ ಅತಿಕ್ರಮಣ, ದೌರ್ಜನ್ಯ ಮಿತಿ ಮೀರಿದ ಕಾರಣ, ಬರ, ಪ್ರವಾಹ, ಭೂಕಂಪದಂತಹ ವಿಕೋಪಗಳನ್ನು ನಾವು ಕಾಣುತ್ತಿದ್ದೇವೆ’ ಎಂದರು.

‘ಇವೆಲ್ಲವುಗಳನ್ನು ನಾವು ಅರಿತುಕೊಳ್ಳುವುದರ ಜತೆಗೆ ಜನರಲ್ಲೂ ಜಾಗೃತಿ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜಾಗತಿಕ ತಾಪಮಾನ ಎಂಬ ಪದ ಹೋಗಿ ಹವಾಮಾನ ಬದಲಾವಣೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದೇವೆ. ನಿಸರ್ಗದಲ್ಲಿ ಮಾನವ ಹಸ್ತಕ್ಷೇಪ ನಿಲ್ಲಬೇಕು. ಜಾಗತಿಕ ತಾಪಮಾನದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದೆ. 2023 ವರ್ಷ ಇತಿಹಾಸದಲ್ಲೇ ಅತಿ ಹೆಚ್ಚು ತಾಪಮಾನದ ವರ್ಷ ಎಂದು ದಾಖಲಾಗಿದೆ’ ಎಂದು ಶರತ್‌ ಹೇಳಿದರು.

‘ವಿಶ್ವಸಂಸ್ಥೆ ಅಧ್ಯಯನದ ಪ್ರಕಾರ ಜಾಗತಿಕ ತಾಪಮಾನ ಸಂಕಷ್ಟಕ್ಕೆ ಸಿಲುಕುವ 139 ರಾಷ್ಟ್ರಗಳ ಪೈಕಿ ಭಾರತ 6ನೇ ಸ್ಥಾನದಲ್ಲಿದೆ. ಈ ಬಗ್ಗೆ ಕೂಲಂಕಷವಾಗಿ ನಾವೆಲ್ಲರೂ ಆಲೋಚಿಸಬೇಕಾಗಿದೆ. ಹವಾಮಾನ ಬದಲಾವಣೆಯು ಭಾರತದ ಮುಂಗಾರಿನ ಮೇಲೆ ಈಗಾಗಲೇ ಪರಿಣಾಮ ಬೀರಿದೆ. ಸಕಾಲದಲ್ಲಿ ಮಳೆ ಆಗುತ್ತಿಲ್ಲ. ಇದರಿಂದ ಶೇ 60ರಷ್ಟು ಫಸಲು ಸಿಗುತ್ತಿಲ್ಲ. ಇನ್ನೂ ಆತಂಕದ ವಿಚಾರ ಎಂದರೆ ಭೂಮಿಯ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ’ ಎಂದರು. 

ಕರಾವಳಿಯಲ್ಲಿ ಅಂತರ್ಜಲ ಕುಸಿತ:

ಕರಾವಳಿ ಪ್ರದೇಶದಲ್ಲಿ ಅಂತರ್ಜಲ ಮಟ್ಟವು ಕುಸಿದು ಹೋಗಿದೆ. 2017ರಲ್ಲಿ 10.43 ಮೀಟರ್‌ ಇದ್ದ ಅಂತರ್ಜಲ ಮಟ್ಟ, ಈ ವರ್ಷ 9.20 ಮೀಟರ್‌ಗೆ ಕುಸಿತವಾಗಿದೆ. ಬೋರ್‌ವೆಲ್‌ಗಳಲ್ಲಿ 150 ಅಡಿಗೆ ಸಿಗುತ್ತಿದ್ದ ಪ್ರದೇಶದಲ್ಲಿ ಈಗ 900 ಅಡಿಯಿಂದ 1200 ಅಡಿ ತೋಡಿದರೂ ನೀರು ಸಿಗುತ್ತಿಲ್ಲ ಎಂದು ಬಿಜೆಪಿಯ ಹರೀಶ್‌ ಪೂಂಜಾ ಆತಂಕ ವ್ಯಕ್ತಪಡಿಸಿದರು.

ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ, ಕಾಂಗ್ರೆಸ್‌ನ ಎಂ. ರೂಪಕಲಾ ಅವರೂ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT