ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ನವಜಾತ ಶಿಶು ಮರಣ ಪ್ರಮಾಣ ಇಳಿಕೆ

Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳ ಲಭ್ಯತೆ ಮತ್ತು‌‌ ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿ ಬಳಿಕ ರಾಜ್ಯದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಒಂದು ವರ್ಷದಲ್ಲಿ ಇಳಿಕೆಯಾಗಿದೆ.

2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ 7,471 ನವಜಾತ ಶಿಶುಮರಣ ಪ್ರಕರಣ ವರದಿಯಾಗಿದ್ದರೆ, 2023ರ ಏಪ್ರಿಲ್‌ನಿಂದ 2024ರ ಜನವರಿವರೆಗೆ 4,546 ಪ್ರಕರಣಗಳು ವರದಿಯಾಗಿವೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ದಾಖಲಾದ ಕನಿಷ್ಠ ಶಿಶು ಮರಣ ಪ್ರಮಾಣ. 2021–22ರಲ್ಲಿ 6,293, 2021–22ರಲ್ಲಿ 6,722 ನವಜಾತ ಶಿಶುಗಳ ಮರಣವಾಗಿತ್ತು.

‘2023–24ರಲ್ಲಿ ಮೈಸೂರಿನಲ್ಲಿ 437, ಕೊಪ್ಪಳ–371, ರಾಯಚೂರು–365, ಕಲಬುರಗಿ– 363 ಮತ್ತು ಬಳ್ಳಾರಿಯಲ್ಲಿ 323 ಅತಿ ಹೆಚ್ಚು ಶಿಶು ಮರಣ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಗ್ರಾಮಾಂತರದಲ್ಲಿ 8, ರಾಮನಗರದಲ್ಲಿ 13 ಮತ್ತು ಹಾವೇರಿ ಯಲ್ಲಿ 18 ಶಿಶು ಮರಣ ಸಂಭವಿಸಿವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

‘ಗರ್ಭಿಣಿಯರಲ್ಲಿ ರಕ್ತಹೀನತೆ, ಅವಧಿ ಪೂರ್ವ ಜನನ, ಕಡಿಮೆ ತೂಕ ಮತ್ತು ಹುಟ್ಟಿದ ತಕ್ಷಣ ಉಸಿರಾಟದ ತೊಂದರೆ, ನ್ಯುಮೋನಿಯಾ, ಕಾಮಾಲೆ ಸೇರಿ ವಿವಿಧ ರೋಗಗಳಿಂದ ಶಿಶು ಮರಣವಾಗುತ್ತಿದೆ’ ಎನ್ನುತ್ತಾರೆ ವೈದ್ಯರು.

ಈ ಮುಂಚೆ ಗ್ರಾಮೀಣ ಪ್ರದೇಶ ಗಳಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುವ ಪ್ರಕರಣಗಳು ಹೆಚ್ಚಾಗಿದ್ದವು. ಇದರಿಂದ ನವಜಾತ ಶಿಶುವಿನ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಇದೀಗ ಆರೋಗ್ಯ ಇಲಾಖೆಯು ತಾಯಿ ಮತ್ತು ಶಿಶುವಿನ ಆರೋಗ್ಯ ಸುಧಾರಣೆಗೆ ಮಹತ್ತರ ಯೋಜನೆಗಳನ್ನು ಕೈಗೊಂಡಿದೆ.

ಅಪೌಷ್ಟಿಕತೆಯುಳ್ಳ ನವಜಾತ ಶಿಶುಗಳಿಗೆ ತೀವ್ರ ನಿಗಾ ಘಟಕದಲ್ಲಿ ನೀಡಲಾಗುವ ಚಿಕಿತ್ಸೆಯೊಡನೆ ಜಿಲ್ಲಾಮಟ್ಟದ 33 ಹಾಗೂ ತಾಲ್ಲೂಕು ಮಟ್ಟದ 86 ಸರ್ಕಾರಿ ಆಸ್ಪತ್ರೆಗಳಲ್ಲಿನ ಪೌಷ್ಟಿಕತೆ ಪುನಶ್ಚೇತನ ಸೇವೆಗಳನ್ನು ನೀಡಲಾಗುತ್ತಿದೆ.‘ಗರ್ಭಿಣಿಯರ ಮೇಲೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಿಗಾವಹಿಸಿ, ಪೋಷಕಾಂಶಯುಕ್ತ ಆಹಾರ, ಮಾತ್ರೆ ಪೂರೈಸಲಾಗುತ್ತಿದೆ. ಇದರಿಂದ ತಾಯಿ ಮತ್ತು ಶಿಶುವಿನ ಸಾವಿನ ಪ್ರಕರಣಗಳು ಕಡಿಮೆಯಾಗುತ್ತಿವೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಶಶಿ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT