ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿ ವೈದ್ಯಕೀಯ ಕಾಲೇಜಿಗೆ ಅನುಮತಿ ವಿಳಂಬ: ವಿಧಾನಸಭೆಯಲ್ಲಿ ವಾಕ್ಸಮರ

Published 6 ಜುಲೈ 2023, 23:30 IST
Last Updated 6 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಆರಂಭವಾಗುತ್ತಿರುವ ಮಧುಸೂಧನ ಸಾಯಿ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವಲ್ಲಿ ವಿಳಂಬ ಆಗುತ್ತಿರುವ ವಿಷಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ವಾಕ್ಸಮರಕ್ಕೆ ಕಾರಣವಾಯಿತು.

ಗುರುವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ, ‘ಮಧುಸೂಧನ ಸಾಯಿ ವೈದ್ಯಕೀಯ ಕಾಲೇಜು ದೇಶದಲ್ಲೇ ಮೊದಲ ಬಾರಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡಲು ಮುಂದಾಗಿದೆ. ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಳ್ಳಲು ಹತ್ತು ದಿನಗಳಷ್ಟೇ ಬಾಕಿ ಇದೆ. ಇನ್ನೂ ಕಾಲೇಜಿಗೆ ಅನುಮತಿ ನೀಡಿಲ್ಲ. ತ್ವರಿತವಾಗಿ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.‘

ಬೇಡಿಕೆಗೆ ಬಿಜೆಪಿಯ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಕೂಡ ದನಿಗೂಡಿಸಿದರು. ಆಗ ಮಧ್ಯ ಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಹಿಂದಿನ ನಿಮ್ಮ ಸರ್ಕಾರದಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವರು ಏಕೆ ಅನುಮತಿ ಕೊಟ್ಟಿರಲಿಲ್ಲ? ಪ್ರಧಾನಿಯೇ ಬಂದು ಉದ್ಘಾಟಿಸಿದ ಸಂಸ್ಥೆ ಇದು. ಮಾನ ಮರ್ಯಾದೆ ಇಲ್ಲವೆ’ ಎಂದು ಕೇಳಿದರು.

‘ಈ ರೀತಿಯ ಅಹಮ್ಮಿನ ಮಾತುಗಳು ಬೇಡ. ನಿಮ್ಮ ಅಹಂ ನೋಡಿ ಜನ ಮತ ಹಾಕಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೀರಿ. ಅದನ್ನೂ ಈಡೇರಿಸುತ್ತಿಲ್ಲ’ ಎಂದು ಅಶ್ವತ್ಥ ನಾರಾಯಣ ಪ್ರತ್ಯುತ್ತರ ನೀಡಿದರು.

ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್‌, ‘ಹಿಂದೆ ಏಕೆ ಅನುಮತಿ ನೀಡಿಲ್ಲ? ವಿಳಂಬಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಿ. ಆದರೆ, ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡಲು ಮುಂದಾಗಿರುವ ಸಂಸ್ಥೆಗೆ ಅನುಮತಿ ನೀಡಿ, ಪ್ರೇರಣೆ ಒದಗಿಸಬೇಕು’ ಎಂದರು.

ಬಳಿಕ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ, ‘ಮಧುಸೂಧನ ಸಾಯಿ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಕಡತ ನನ್ನ ಕಚೇರಿಗೆ ಬಂದಿಲ್ಲ. ಇನ್ನೂ ಕೆಳಹಂತದಲ್ಲೇ ಇದೆ. ಕಡತ ತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಸಮಸ್ಯೆಗೆ ಕಾರಣ ತಿಳಿದು ತ್ವರಿತವಾಗಿ ಅನುಮತಿ ನೀಡಲು ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಸ್ಕೇಟಿಂಗ್‌ ಟ್ರ್ಯಾಕ್‌’ ಬಳಕೆಗೆ ಕ್ರಮ

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಆಟದ ಮೈದಾನದಲ್ಲಿ ₹ 15 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿರುವ ‘ಸ್ಕೇಟಿಂಗ್‌ ಟ್ರ್ಯಾಕ್‌’ನ ಸಮರ್ಪಕ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಾಂಗ್ರೆಸ್‌ ಸದಸ್ಯ ಯು.ಬಿ.ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಕೇಟಿಂಗ್‌ ಮೈದಾನದ ಕಾಮಗಾರಿ ಈಚೆಗಷ್ಟೇ ಮುಗಿದಿದೆ. ಬಿಬಿಎಂಪಿಗೆ ನಿರ್ಹವಣೆಯ ಹೊಣೆ ನೀಡಲಾಗಿದೆ. ಮೈದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಈ ಕುರಿತು ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.

ಕೆಆರ್‌ಎಸ್‌ ಬಳಿ ಡಿಸ್ನಿಲ್ಯಾಂಡ್‌ ಮಾದರಿ ಉದ್ಯಾನ

ಬೆಂಗಳೂರು: ಮೈಸೂರಿನ ಕೆಆರ್‌ಎಸ್‌ ಬಳಿ 198 ಎಕರೆ ಪ್ರದೇಶದಲ್ಲಿ ₹ 1,450 ಕೋಟಿ ವೆಚ್ಚದಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಉದ್ಯಾನ ನಿರ್ಮಿಸಲಾಗುವುದು. ಅಣೆಕಟ್ಟೆಯ ಸುರಕ್ಷತೆಗೆ ಧಕ್ಕೆಯಾಗದಂತೆ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಭೂಮಿಯಲ್ಲೇ ಉದ್ಯಾನ ನಿರ್ಮಿಸಲಾಗುವುದು. ಯೋಜನಾ ವರದಿಯನ್ನು ಅನುಮೋದನೆಗಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸಲ್ಲಿಸಲಾಗಿತ್ತು. ಪರಿಷ್ಕೃತ ಪ್ರಸ್ತಾವ ಸಲ್ಲಿಸುವಂತೆ ಇಲಾಖೆ ಸಲಹೆ ನೀಡಿದೆ. ಅನುಮೋದನೆಯ ನಂತರ ಯೋಜನೆ ಅನುಷ್ಠಾನಕ್ಕೆ ಕಂಪನಿ ಗುರುತಿಸಲಾಗುವುದು. ಕೆಆರ್‌ಎಸ್‌ ಹೊರತುಪಡಿಸಿ ರಾಜ್ಯದ ಇತರೆ ಭಾಗಗಳಲ್ಲಿ ಸಿಡ್ನಿಲ್ಯಾಂಡ್‌ ಮಾದರಿ ಉದ್ಯಾನ ನಿರ್ಮಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT