ಬೆಂಗಳೂರು: ‘ಡೆಂಗಿ ಜ್ವರಕ್ಕೆ ಕಾರಣವಾದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಸಹಕರಿಸದೇ ಇರುವವರಿಗೆ ದಂಡ ವಿಧಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಲಹೆ ಮಾಡಿದೆ.
ಡೆಂಗಿ ಜ್ವರ ಹೆಚ್ಚಳದ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರ ಮತ್ತು ಬಿಬಿಎಂಪಿ ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ಪರಿಶೀಲಿಸಿದ ನ್ಯಾಯಪೀಠವು, ‘ಸರ್ಕಾರ ತನ್ನ ಜವಾಬ್ದಾರಿ ಪೂರೈಸುವ ಕ್ರಮಗಳನ್ನು ಮುಂದುವರಿಸಬೇಕು ಹಾಗೂ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿತು.
ಆಕ್ಷೇಪ: ಪ್ರಕರಣದ ಅಮಿಕಸ್ ಕ್ಯೂರಿ (ಕೋರ್ಟ್‌ಗೆ ಸಹಕರಿಸುವ ವಕೀಲ) ಹಿರಿಯ ವಕೀಲ ಕೆ.ಎನ್.ಫಣೀಂದ್ರ, ಬಿಬಿಎಂಪಿ ಸಲ್ಲಿಸಿದ ಪ್ರಮಾಣಪತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ಬಿಬಿಎಂಪಿ 10 ದಿನಗಳಲ್ಲಿ 24 ಲಕ್ಷಕ್ಕೂ ಹೆಚ್ಚಿನ ಮನೆಗಳ ಸಮೀಕ್ಷೆ ನಡೆಸಿರುವುದಾಗಿ ಹೇಳಿದೆ. ಈ ಅಂಕಿ ಅಂಶ ವಾಸ್ತವವಾಗಿಲ್ಲ. ಸಮೀಕ್ಷೆ ನಡೆಸಿರುವ ತಂಡವು ಹೈಕೋರ್ಟ್ ಸುತ್ತಮುತ್ತಲ ಪ್ರದೇಶದ ಮನೆಗಳಿಗೆ ಭೇಟಿಯನ್ನೇ ನೀಡಿಲ್ಲ ಮತ್ತು ನಗರದಲ್ಲಿ ಎಲ್ಲೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಲ್ಲ. ಸೊಳ್ಳೆಗಳ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.
‘ಆರೋಗ್ಯ ಇಲಾಖೆ ನಿರ್ದೇಶಕರು ಸಲ್ಲಿಸಿರುವ ವರದಿಯಲ್ಲಿ ಆಗಸ್ಟ್‌ನಲ್ಲಿ ಡೆಂಗಿ ಪ್ರಕರಣ ತಕ್ಕಮಟ್ಟಿಗೆ ಇಳಿಕೆಯಾಗಿವೆ. ಮುಂಗಾರು ಮಳೆ ಮುಗಿಯುತ್ತಾ ಬಂದಿರುವುದು ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್.ಶ್ರೀರಂಗ, ‘ನವದೆಹಲಿ ಮತ್ತು ಇತರೆಡೆ ಡೆಂಗಿ ಜ್ವರದ ಪ್ರಕರಣಗಳ ತಡೆಗೆ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ಅಂತಹ ಕ್ರಮಗಳನ್ನೂ ರಾಜ್ಯದಲ್ಲೂ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಈ ಬಗ್ಗೆ ನಿಗಾ ವಹಿಸಲು ವಿಶೇಷ ಅಧಿಕಾರಿ ನಿಯೋಜಿಸಬೇಕು’ ಎಂದರು.
ಅಂತಿಮವಾಗಿ ನ್ಯಾಯಪೀಠವು, ‘ಡೆಂಗಿ ಜ್ವರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಸಿ’ ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ಸೂಚಿಸಿ ವಿಚಾರಣೆಯನ್ನು ಇದೇ 28ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.