ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: ಡ್ಯಾಶ್‌ಬೋರ್ಡ್, ಆ್ಯಪ್‌ಗೆ ಚಾಲನೆ

ರೋಗ ನಿರ್ವಹಣೆಗೆ ಆರೋಗ್ಯ ಇಲಾಖೆ, ಬಿಬಿಎಂಪಿ ಜಂಟಿ ಕ್ರಮ
Published 8 ಸೆಪ್ಟೆಂಬರ್ 2023, 14:13 IST
Last Updated 8 ಸೆಪ್ಟೆಂಬರ್ 2023, 14:13 IST
ಅಕ್ಷರ ಗಾತ್ರ

ಬೆಂಗಳೂರು: ಡೆಂಗಿ ರೋಗ ನಿಯಂತ್ರಣ ಹಾಗೂ ನಿರ್ವಹಣೆಗೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗೆ ಶುಕ್ರವಾರ ಚಾಲನೆ ದೊರೆತಿದೆ. 

ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್‌ ಸಹಯೋಗದಲ್ಲಿ ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲಾಗಿದೆ. ರೋಗದ ಮುನ್ಸೂಚನೆ, ವಿಶ್ಲೇಷಣೆಗೆ ಇದು ಸಹಕಾರಿಯಾಗಲಿದೆ. 

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಈ ವ್ಯವಸ್ಥೆಗೆ ಚಾಲನೆ ನೀಡಿ, ಮಾತನಾಡಿದರು. ‘ಹವಾಮಾನ ಬದಲಾವಣೆಯಿಂದ ಡೆಂಗಿ ‍ಪ್ರಕರಣಗಳು ಹೆಚ್ಚಳವಾಗುತ್ತಿವೆ. ಜಗತ್ತಿನಲ್ಲಿ ವರದಿಯಾಗುತ್ತಿರುವ ಡೆಂಗಿ ಪ್ರಕರಣದ ಮೂರನೇ ಒಂದರಷ್ಟು ಪ್ರಕರಣ ನಮ್ಮ ದೇಶದಲ್ಲಿ ದೃಢಪಡುತ್ತಿದೆ. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕೆಲ ದಿನಗಳಿಂದ ಡೆಂಗಿ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿದೆ. ಹೀಗಾಗಿ, ತಂತ್ರಜ್ಞಾನದ ನೆರವಿನಿಂದ ಯೋಗ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು. 

‘ನೂತನ ವ್ಯವಸ್ಥೆಯು ರೋಗ ನಿಯಂತ್ರಣ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ನೀತಿ ನಿರೂಪಕರು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ. ರೋಗದ ಕಣ್ಗಾವಲು ನಡೆಸುವ ಡ್ಯಾಶ್‌ಬೋರ್ಡ್ ಕರ್ನಾಟಕದಾದ್ಯಂತ ಜಿಲ್ಲಾ ಮತ್ತು ಉಪ ಜಿಲ್ಲಾ ಮಟ್ಟದಲ್ಲಿ ಏಕಾಏಕಿ ಸಂಭವಿಸುವ ನಕ್ಷೆಯನ್ನು ಒದಗಿಸುತ್ತದೆ. ನಾಲ್ಕು ವಾರಗಳ ಮುನ್ಸೂಚನೆಯ ನಕ್ಷೆ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಲಭ್ಯವಾಗುವಂತೆ ಮಾಡುತ್ತದೆ’ ಎಂದು ಹೇಳಿದರು. 

‘ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳೆರಡೂ ಡೆಂಗಿ ಮೇಲೆ ಕೇಂದ್ರೀಕೃತವಾಗಿವೆ. ರೋಗದ ಮೇಲ್ವಿಚಾರಣೆ, ಪರೀಕ್ಷೆ, ಸಮೀಕ್ಷೆ ಸೇರಿ ವಿವಿಧ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ, ಮನೆ-ಮನೆ ಆರೋಗ್ಯ ಸೇರಿ ವಿವಿಧ ಸಮೀಕ್ಷೆಗಳಿಗೆ ಆಶಾ ಕಾರ್ಯಕರ್ತೆಯರಿಗೆ ಆ್ಯಪ್ ಸಹಕಾರಿ’ ಎಂದು ವಿವರಿಸಿದರು. 

ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT