ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಸಂದೇಶದ ವೈಭವೀಕರಣ ಮಾತಿನ ಅಂಗಡಿಯಂತೆ...’

‘ಹಿಂದ್‌ ಸ್ವರಾಜ್: ಗಾಂಧಿಯವರ ದರ್ಶನ’ ಕುರಿತ ಉಪನ್ಯಾಸ ನೀಡಿದ ಎಂ. ಪುಟ್ಟಯ್ಯ
Last Updated 18 ಜನವರಿ 2019, 20:00 IST
ಅಕ್ಷರ ಗಾತ್ರ

ಧಾರವಾಡ (ಸುವರ್ಣ ಮಹೋತ್ಸವ ಭವನ): ‘ಮಹಾತ್ಮ ಗಾಂಧೀಜಿ ಅವರು ‘ಹಿಂದ್‌ ಸ್ವರಾಜ್‌’ ಕೃತಿಯಲ್ಲಿ ಪ್ರತಿಪಾದಿಸಿದ ಆಶಯಗಳಂತೆ ಬಾಳಲಾರದೇ ಕೇವಲ ಅವರು ಹೇಳಿದ ಸಂದೇಶಗಳನ್ನು ವೈಭವೀಕರಿಸುವುದು ಮಾತಿನ ಅಂಗಡಿ ಇರಿಸಿದಂತೆ’ ಎಂದು ಪ್ರಾಧ್ಯಾಪಕ ಬಿ.ಎಂ. ಪುಟ್ಟಯ್ಯ ವಿಶ್ಲೇಷಿಸಿದರು.

‘ಹಿಂದ್‌ ಸ್ವರಾಜ್‌: ಗಾಂಧಿಯವರ ದರ್ಶನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

‘ಬ್ರಿಟಿಷರ ಪಾರ್ಲಿಮೆಂಟ್‌ ಪರಿಕಲ್ಪನೆ, ವಕೀಲರು, ವೈದ್ಯರು ಮತ್ತು ರೈಲಿನ ಬಗ್ಗೆ ಗಾಂಧೀಜಿ ತಮ್ಮ ಅಸಮಾಧಾನವನ್ನು ಈ ಪುಟ್ಟ ಕೃತಿಯಲ್ಲಿ ವ್ಯಕ್ತಪಡಿಸಿದ್ದರು. ಆಧುನಿಕ ಯಂತ್ರ ನಾಗರಿಕತೆಯ ವಿವರ, ವಿಮರ್ಶೆ ಮತ್ತು ವಿರೋಧವನ್ನು ವಿವರಿಸುತ್ತ ಅವರು, ಅದಕ್ಕೆ ಪರ್ಯಾಯವಾಗಿ ಹಿಂದೂಸ್ತಾನವು ಯಾವ ರೀತಿಯ ಮಾದರಿಯನ್ನು ಕಟ್ಟಿಕೊಳ್ಳಬಹುದು ಎಂಬ ವಿಚಾರಗಳನ್ನೂ ಹೇಳಿದ್ದಾರೆ. ನ್ಯಾಯ ಸಿಗುವುದು ಎಂಬ ನಂಬಿಕೆಯನ್ನು ವಕೀಲರು ಮೂಡಿಸುತ್ತಾರೆ. ಕಾಯಿಲೆ ಗುಣಪಡಿಸಲು ವೈದ್ಯರು ಇರುವುದರಿಂದ ಹೇಗೆ ಬೇಕಾದರೂ ಜೀವನ ಮಾಡಬಹುದು ಎಂಬ ಧೋರಣೆ ಜನರಲ್ಲಿ ಮೂಡುತ್ತದೆ; ರೈಲಿನ ಮೂಲಕ ಪ್ರವಾಸಗಳು ಹೆಚ್ಚಾಗುತ್ತವೆ. ಒಟ್ಟಿನಲ್ಲಿ ಭೋಗ ವಿಲಾಸಗಳಿಗೆ ಹೆಚ್ಚಿನ ಅವಕಾಶ ನೀಡಿ, ಮಾನವ ದೇಹದ ಶ್ರಮ ಸಾಧ್ಯತೆಗಳನ್ನು ಮರೆಯುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂಬ ಆತಂಕ ಗಾಂಧೀಜಿ ಅವರಲ್ಲಿತ್ತು. ಈ ವಿಚಾರಗಳನ್ನೆಲ್ಲ ಅವರುಓದುಗ ಮತ್ತು ಸಂಪಾದಕರ ನಡುವಿನ ಸಂಭಾಷಣೆ ಮಾದರಿಯಲ್ಲಿ ಸೃಜನಶೀಲವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ವಿವರಿಸಿದರು.

‘ಬ್ರಿಟಿಷರು ಹಿಂದುಸ್ತಾನೀಯರ ನಂಬಿಕೆಗಳ ಬಗ್ಗೆ ಸಂಶಯವನ್ನು ಮೂಡಿಸಿ ತಮ್ಮ ನೆಲದ ಐಹಿಕ ಸುಖದ ಪರಿಕಲ್ಪನೆಯನ್ನು ಬಿತ್ತುತ್ತಿರುವುದನ್ನು ಆಕ್ಷೇಪಿಸುತ್ತ ಅವರು ಅವುಗಳಿಗೆ ಪರ್ಯಾಯವಾಗಿ ಸತ್ಯಾಗ್ರಹ, ಬ್ರಹ್ಮಚರ್ಯದ ಪ್ರತಿಪಾದನೆ ಮಾಡಿದರು’ ಎಂದರು.

‘ಬ್ರಿಟಿಷ್‌ ಪೂರ್ವ ಭಾರತದಲ್ಲಿ ನ್ಯಾಯ ತೃಪ್ತಿಕರವಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಅಸಮಾನತೆ, ಜಾತೀಯತೆ, ಪರಸ್ಪರ ಸಮುದಾಯಗಳ ನಡುವಿನ ಹೊಡೆದಾಟ ಇದ್ದ ಭಾರತದಲ್ಲಿ ನ್ಯಾಯ ತೃಪ್ತಿಕರವಾಗಿತ್ತು ಎಂಬ ಮಾತು ಒಪ್ಪುವುದು ಕಷ್ಟ’ ಎಂದು ಪುಟ್ಟಯ್ಯ ಅಭಿಪ್ರಾಯಪಟ್ಟರು.

ಕತ್ತಿ ಪರಕೀಯರದಾದರೆ ಮಾತ್ರ ನೋವೇ...

ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಂಬೇಡ್ಕರ್‌ ಮಾತನಾಡುತ್ತ ಒಂದು ಪ್ರಶ್ನೆ ಎತ್ತಿದ್ದಾರೆ. ಒಂದು ದೇಶದ ಮೇಲೆ ಮತ್ತೊಂದು ದೇಶ ಅನ್ಯಾಯ, ಸುಲಿಗೆ ಮಾಡಿದರೆ ಅದರ ವಿರುದ್ಧ ಹೋರಾಟ ಮಾಡಬೇಕು ಎಂಬುದು ನಿಜ. ಆದರೆ ದೇಶದೊಳಗೆ ಜಾತಿಯ ಹೆಸರಿನಲ್ಲಿ ಸಮುದಾಯಗಳ ನಡುವಿನ ಕೊಲೆ, ಸುಲಿಗೆ ಅನ್ಯಾಯಗಳ ವಿರುದ್ಧ ಹೋರಾಡುವುದು ಅಷ್ಟೇ ಅಗತ್ಯವಲ್ಲವೇ ಎಂದು ಅಂಬೇಡ್ಕರ್‌ ಪ್ರಶ್ನಿಸಿದ್ದರು ಎನ್ನುತ್ತ ಪುಟ್ಟಯ್ಯ ಅವರು ಕುವೆಂಪು ಸಾಲುಗಳನ್ನು ಉಲ್ಲೇಖಿಸಿದರು:

ಕತ್ತಿ ಪರಕೀಯರದಾದರೆ ನೋವೇ
ತಮ್ಮವರೇ ಹದ ಹಾಕಿ ತಿವಿದರೆ ಅದು ಹೂವೇ..

ಎಂಬ ಸಾಲುಗಳಿಗೆ ಸಭಿಕರು ತಲೆದೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT