ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆತುರವಾಗಿ ನಡೆಸುವುದರಿಂದ ಎದುರಿಸಬೇಕಾದ ಅಪಾಯಗಳು ಮತ್ತು ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿ ಜೂನ್ 4ರಂದೇ ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಎಂ.ಎನ್. ಕರಿಬಸವನಗೌಡ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಕಾರ್ಯದರ್ಶಿಗೆ ಸಲ್ಲಿಸಿದ್ದ ವರದಿ ಬಹಿರಂಗಗೊಂಡಿದೆ. ಈ ಘಟನೆಯಲ್ಲಿ ಸರ್ಕಾರದ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರೆ, ಸರ್ಕಾರದ ಆತುರ ಮತ್ತು ಬೇಜವಾಬ್ದಾರಿಯ ನಿರ್ಧಾರವೇ ಅವಘಡಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ಹರಿಹಾಯ್ದಿವೆ. ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯೂ ನಡೆದಿದೆ. ಅಲ್ಲದೇ, ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವೂ ಕೆಎಸ್ಸಿಎಯಿಂದ ವರದಿಯನ್ನು ಕೇಳಿದೆ.

ಬೆಂಗಳೂರು: ‘ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದರೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಬರಬಹುದು. ಆತುರದಲ್ಲಿ ಆಯೋಜನೆ ಮಾಡಿದರೆ ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆಯಾಗಬಹುದು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್) ಕಾರ್ಯದರ್ಶಿಗೆ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ವರದಿ ನೀಡಿದ್ದರು.

ಐಪಿಎಲ್ ಟ್ರೋಫಿ ಗೆದ್ದರೆ ಆರ್ಸಿಬಿ ಆಟಗಾರರನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲು ಅನುಮತಿ ಕೋರಿ ಕೆಎಸ್ಸಿಎ ಪತ್ರ ಬರೆದಿತ್ತು. ಈ ವಿಚಾರವಾಗಿ ಅಭಿಪ್ರಾಯ ನೀಡುವಂತೆ ಡಿಸಿಪಿ ಎಂ.ಎನ್. ಕರಿಬಸವನಗೌಡ ಅವರಿಗೆ ಜೂನ್ 3ರಂದು ಡಿಪಿಎಆರ್ (ಕಾರ್ಯಕಾರಿ ವಿಭಾಗ) ಪತ್ರ ಬರೆದಿತ್ತು.

ಜೂನ್ 4ರಂದೇ ಇದಕ್ಕೆ ಉತ್ತರಿಸಿ ಡಿಸಿಪಿ ಅವರು ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ.

‘ವಿಧಾನಸೌಧ ಕಟ್ಟಡವು ಪಾರಂಪರಿಕ ಕಟ್ಟಡ ಆಗಿರುವುದರಿಂದ ಭದ್ರತೆಗೆ ಯಾವುದೇ ಧಕ್ಕೆ ಆಗದಂತೆ ನಿಯಮಾನುಸಾರ ಕಾರ್ಯಕ್ರಮ ನಡೆಸಲು ಸಮಯಾವಕಾಶದ ಅವಶ್ಯಕತೆ ಇದೆ. ಆದರೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳ ಲಾಗುವುದು’ ಎಂದೂ ತಮ್ಮ ವರದಿಯಲ್ಲಿ ಡಿಸಿಪಿ ವಿವರಿಸಿದ್ದರು.

ಪತ್ರದಲ್ಲಿ ಏನಿದೆ?

l ಆರ್ಸಿಬಿ ಕ್ರಿಕೆಟ್ ತಂಡಕ್ಕೆ ದೇಶದಾದ್ಯಂತ ಅಭಿಮಾನಿ ಬಳಗವಿದೆ. ಸನ್ಮಾನ ಕಾರ್ಯಕ್ರಮಕ್ಕೆ
ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಬರಬಹುದು. ವಿಧಾನಸೌಧ ಭದ್ರತಾ
ವಿಭಾಗದಲ್ಲಿ ಅಧಿಕಾರಿ, ಸಿಬ್ಬಂದಿಯ ಕೊರತೆ ಇದೆ. ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಬಂದೋಬಸ್ತ್ಗೆ ತೊಂದರೆಯಾಗುವ
ಸಾಧ್ಯತೆ ಇದೆ

l ಕಾರ್ಯಕ್ರಮ ಆಯೋಜನೆಯ ಕಾರಣಕ್ಕೆ ಆ ದಿನ ವಿಧಾನಸೌಧದ ಪ್ರವೇಶಕ್ಕೆ ಸಾರ್ವಜನಿಕರಿಗೆ
ನೀಡುವ ಪಾಸ್ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು

l ವಿಧಾನಸೌಧದ ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕುಟುಂಬದವರನ್ನು ಕರೆತರುವ ಸಾಧ್ಯತೆಯಿದ್ದು, ಜೂನ್ 4ರ ಮಧ್ಯಾಹ್ನದ ನಂತರ ವಿಧಾನಸೌಧ ಸಚಿವಾಲಯದ ಸಿಬ್ಬಂದಿಗೆ ರಜೆ ನೀಡಬೇಕು. ಅಲ್ಲದೆ, ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದ ಸ್ಥಳಕ್ಕೆ ಬರದಂತೆ ಸೂಚನೆ ನೀಡಬೇಕು

l ವಿಧಾನಸೌಧ ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ
ಅವಶ್ಯಕತೆ ಇದೆ

l ವೇದಿಕೆ ಸದೃಢವಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಸದೃಢ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಕನಿಷ್ಠ 2 ಗಂಟೆ ಮುಂಚಿತವಾಗಿಯೇ ಪರಿವೀಕ್ಷಣೆಗೆ ಬಿಟ್ಟುಕೊಡುವಂತೆ ಆಯೋಜಕರಿಗೆ ತಿಳಿಸಬೇಕು

l ವಿದ್ಯುತ್ ಉಪಕರಣಗಳನ್ನು ಉಪಯೋಗಿಸುತ್ತಿದ್ದು, ಸಂಬಂಧಪಟ್ಟ ವಿದ್ಯುತ್ ವಿಭಾಗದ ಎಂಜಿನಿಯರ್ನಿಂದ ಸಾಮರ್ಥ್ಯ ಪ್ರಮಾಣಪತ್ರ ಪಡೆದುಕೊಳ್ಳಬೇಕು

l ಕಾರ್ಯಕ್ರಮ ಜರುಗುವ 2 ಗಂಟೆ ಮೊದಲು ವೇದಿಕೆಯನ್ನು ವಿಧ್ವಂಸಕ ಕೃತ್ಯ ತಡೆ ತಪಾಸಣೆಗೆ ಬಿಟ್ಟುಕೊಡುವಂತೆ ಆಯೋಜಕರಿಗೆ ಸೂಚಿಸಬೇಕು

l ಆರ್ಸಿಬಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಇರುವುದರಿಂದ ಬಂದೋಬಸ್ತ್ಗೆ ಹೊರಗಡೆಯಿಂದ ಅಧಿಕಾರಿಗಳು, ಸಿಬ್ಬಂದಿಯನ್ನು ಕರೆಸಿಕೊಳ್ಳಬೇಕಿದೆ. ಇದಕ್ಕೆ ಸಮಯಾವಕಾಶ ಬೇಕಿದೆ

l ಈ ರೀತಿಯ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರ ಜೊತೆ ಸಮನ್ವಯದ ಅವಶ್ಯಕತೆಯಿದ್ದು, ಸಮಯಾವಕಾಶದ ಕೊರತೆಯಿದೆ ಅನ್ನಿಸುತ್ತಿದೆ

l ಇಂತಹ ಕಾರ್ಯಕ್ರಮದಲ್ಲಿ ಹೊರಗಿನಿಂದ ಡ್ರೋನ್ ಕ್ಯಾಮೆರಾ ಬಳಸುವ ಸಾಧ್ಯತೆ ಇರುವುದರಿಂದ ಡ್ರೋನ್ ತಡೆ ವ್ಯವಸ್ಥೆ ಅಳವಡಿಸುವ ಅವಶ್ಯಕತೆಯಿದೆ

ವಿಧಾನಮಂಡಲ ವಿಶೇಷ ಅಧಿವೇಶನಕ್ಕೆ ಒತ್ತಾಯ

ಕಾಲ್ತುಳಿತ ದುರಂತ ನಡೆಯಲು ಸರ್ಕಾರ ಮಾಡಿರುವ ತಪ್ಪುಗಳು ಕಾರಣ. ಈ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.ಇದಕ್ಕಾಗಿ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಅವರು ಒತ್ತಾಯಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಈಗಾಗಲೇ ಮೂರು ತನಿಖೆಗಳಿಗೆ ಆದೇಶಿಸಿದ್ದು, ಇದರಲ್ಲಿ ಯಾವ ತನಿಖೆ ನೈಜ ಎಂಬುದು ಗೊತ್ತಾಗುತ್ತಿಲ್ಲ. ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂಬುದು ನಮ್ಮ ಆಗ್ರಹ’ ಎಂದು ಹೇಳಿದರು. ‘ನಾವು ಬಿಜೆಪಿ ಶಾಸಕರು ನಮ್ಮ ಒಂದು ತಿಂಗಳ ವೇತನವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಿದ್ದೇವೆ. ಸರ್ಕಾರ ದಿವಾಳಿ ಆಗಿಲ್ಲ ಎಂದಾದರೆ ತಲಾ ₹1 ಕೋಟಿ ಪರಿಹಾರ ನೀಡಲಿ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಶಕ್ತಿ ಪ್ರದರ್ಶನದ ತಿಕ್ಕಾಟ ನಡೆಯದೇ ಇದ್ದಿದ್ದರೆ ಜನರು ಸಾಯುತ್ತಿರಲಿಲ್ಲ. ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಬೇಕಿದ್ದವರು ಕಪ್ಗೆ ಮುತ್ತಿಡುತ್ತಿದ್ದರು. ಮಧ್ಯಾಹ್ನವೇ ಮೊದಲ ಸಾವು ಸಂಭವಿಸಿದಾಗ ಪೊಲೀಸರು ಮಾಹಿತಿ ನೀಡಿದ್ದರು. ಕಾರ್ಯಕ್ರಮ ಆರಂಭವಾದಾಗಲೇ ಎಂಟು ಮಂದಿ ಸತ್ತಿದ್ದರು. ಆ ನಂತರವೂ ಕಾರ್ಯಕ್ರಮ ಮಾಡುತ್ತಾರೆಂದರೆ ಇವರೆಲ್ಲರೂ ಕಟುಕ ಮತ್ತು ಕಲ್ಲು ಹೃದಯದವರು’ ಎಂದರು.

ಸಿಐಡಿ ತನಿಖೆ: ಬಂಧಿತರು, ಪೊಲೀಸರ ವಿಚಾರಣೆಗೆ ಸಿದ್ಧತೆ

ಕಾಲ್ತುಳಿತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾ ತಂಡ, ಆರೋಪಿಗಳನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದೆ.

ಎಸ್ಐಟಿ ಎಸ್.ಪಿ ಶುಭನ್ವಿತಾ ನೇತೃತ್ವದ ತನಿಖಾ ತಂಡ, ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕ್ರೀಡಾಂಗಣದ ಯಾವ ಪ್ರವೇಶ ದ್ವಾರದಲ್ಲಿ ಕಾಲ್ತುಳಿತ ಉಂಟಾಗಿದೆ ಎಂಬುದರ ಬಗ್ಗೆ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿತು. ಘಟನೆ ಸಂಬಂಧ ಕ್ರೀಡಾಂಗಣದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿದೆ.

ಪ್ರಕರಣದಲ್ಲಿ ಬಂಧಿತರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್ಎ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಟೆಡ್ನ ವ್ಯವಸ್ಥಾಪಕ ಕಿರಣ್, ಮ್ಯಾನೇಜ್ಮೆಂಟ್ ಸಿಬ್ಬಂದಿ ಸುನಿಲ್ ಮ್ಯಾಥ್ಯೂ ಮತ್ತು ಸುಮಂತ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲು ತನಿಖಾ ತಂಡವು ಸೋಮವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಸಂಸ್ಥೆ ಮಾಜಿ ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜಯರಾಮ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಪಡೆಯಲಿದೆ. ಅಮಾನತುಗೊಂಡಿರುವ ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಹಾಗೂ ಎಸಿಪಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆ ರಾಜ್ಯ ಮಾನವ ಹಕ್ಕುಗಳ ಆಯೋಗ ಕ್ರೀಡಾಂಗಣಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿತು. ಬಳಿಕ ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿತು.

‘ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಹೆಚ್ಚಿನ ಸಂಖ್ಯೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡದ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕ್ರೀಡಾಂಗಣದ ಪ್ರವೇಶ ದ್ವಾರಗಳನ್ನು ಏಕಕಾಲಕ್ಕೆ ತೆರೆದ ಕಾರಣ ಉಂಟಾದ ಅವಘಡಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಕೆಎಸ್ಸಿಎಗೆ ಸೂಚಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶ್ಯಾಮ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.