ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೂರ್ತಿ ಶರಣರ ಬಿಡುಗಡೆ ಪ್ರಕ್ರಿಯೆ ಬಗ್ಗೆ ತನಿಖೆಗೆ ಆದೇಶ

Published 18 ನವೆಂಬರ್ 2023, 15:23 IST
Last Updated 18 ನವೆಂಬರ್ 2023, 15:23 IST
ಅಕ್ಷರ ಗಾತ್ರ

ಚಿತ್ರದುರ್ಗ: ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಜಿಲ್ಲಾ ಕಾರಾಗೃಹದಿಂದ ಬಿಡುಗಡೆಗೊಳಿಸಿದ ಪ್ರಕ್ರಿಯೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೊ ಪ್ರಕರಣದ ಬಾಡಿ ವಾರೆಂಟ್‌ ಅರ್ಜಿಯ ವಿಚಾರಣೆಯನ್ನು ಶನಿವಾರ ಕೈಗೆತ್ತಿಕೊಂಡ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು, ಕಾರಾಗೃಹದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ (ಎಡಿಜಿಪಿ) ಈ ಸೂಚನೆ ನೀಡಿದ್ದಾರೆ.

‘2ನೇ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಆರೋಪಿಯನ್ನು ಕಾರಾಗೃಹದಿಂದ ಬಿಡುಗಡೆ ಮಾಡಿರುವ ಪ್ರಕ್ರಿಯೆ ಬಗ್ಗೆ ತನಿಖೆ ನಡೆಸಿ ಎಂಬುದಾಗಿ ಪತ್ರದ ಮೂಲಕ ಕಾರಾಗೃಹದ ಎಡಿಜಿಪಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ’ ಎಂದು ವಿಶೇಷ ಸರ್ಕಾರಿ ವಕೀಲ ಎಚ್‌.ಆರ್‌.ಜಗದೀಶ್‌ ತಿಳಿಸಿದ್ದಾರೆ.

ಏನಿದು ಪ್ರಕರಣ?:

ಶಿವಮೂರ್ತಿ ಶರಣರ ವಿರುದ್ಧ ಹೊರಡಿಸಿದ ಬಾಡಿ ವಾರೆಂಟ್‌ ಅನ್ನು ನ್ಯಾಯಾಂಗ ಬಂಧನದ ವಾರೆಂಟ್‌ ಆಗಿ ಪರಿವರ್ತಿಸುವಂತೆ ಪ್ರಾಸಿಕ್ಯೂಷನ್‌ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನ.16ರಂದು ಬೆಳಿಗ್ಗೆ 11ಕ್ಕೆ ಕೈಗೆತ್ತಿಕೊಂಡಿತ್ತು. ಪ್ರಕರಣದ ಆರೋಪಿಗಳಾದ ಶಿವಮೂರ್ತಿ ಶರಣರು ಹಾಗೂ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಕಾರಾಗೃಹದಿಂದ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಹಾಜರಾಗಿದ್ದರು.

ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಮಧ್ಯಾಹ್ನಕ್ಕೆ ಮುಂದೂಡಿದಾಗ ಶಿವಮೂರ್ತಿ ಶರಣರನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಅದಾಗಲೇ ಶರಣರು ಮೊದಲ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಸೆಷನ್ಸ್‌ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ಆರಂಭವಾದಾಗ 2ನೇ ಆರೋಪಿ ರಶ್ಮಿ ಮಾತ್ರ ಕಾರಾಗೃಹದಿಂದ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಹಾಜರಾಗಿದ್ದರು. ಹೈಕೋರ್ಟ್‌ ಜಾಮೀನಿನ ಮೇಲೆ ಶರಣರನ್ನು ಬಿಡುಗಡೆ ಮಾಡಿದ್ದಾಗಿ ಕಾರಾಗೃಹದ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ವಿಚಾರಣೆ 20ಕ್ಕೆ ಮುಂದೂಡಿಕೆ
2ನೇ ಪೋಕ್ಸೊ ಪ್ರಕರಣದ ಬಾಡಿ ವಾರೆಂಟ್‌ಗೆ ಸಂಬಂಧಿಸಿದ ವಿಚಾರಣೆಯನ್ನು ನ.20ಕ್ಕೆ ಮುಂದೂಡಿ ನ್ಯಾಯಾಧೀಶರು ಶನಿವಾರ ಆದೇಶಿಸಿದರು. ಪ್ರಕರಣದ ವಿಚಾರಣೆಗೆ ಶಿವಮೂರ್ತಿ ಶರಣರು ಹಾಜರಾಗದಿರುವುದರಿಂದ ಜಾಮೀನು ರಹಿತ ಬಂಧನದ ವಾರೆಂಟ್‌ ಹೊರಡಿಸುವಂತೆ ವಿಶೇಷ ಸರ್ಕಾರಿ ವಕೀಲರು ಕೋರಿಕೆ ಸಲ್ಲಿಸಿದರು. ಶರಣರ ಪರವಾಗಿ ಹಾಜರಾದ ವಕೀಲ ಎಂ.ಉಮೇಶ್‌, ‘ಶಿವಮೂರ್ತಿ ಶರಣರು ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಸರ್ಕಾರಿ ವಕೀಲ, ‘ಹೈಕೋರ್ಟ್‌ ಆದೇಶದಲ್ಲಿ ಇಂತಹ ಅವಕಾಶ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT