ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಎತ್ತಿನಹೊಳೆ ಪರೀಕ್ಷಾರ್ಥ ನೀರು ಹರಿಸುವಿಕೆ ಪರಿಶೀಲಿಸಿದ DK ಶಿವಕುಮಾರ್‌

Published : 28 ಆಗಸ್ಟ್ 2024, 14:11 IST
Last Updated : 28 ಆಗಸ್ಟ್ 2024, 14:11 IST
ಫಾಲೋ ಮಾಡಿ
Comments

ಹಾಸನ: ಜಿಲ್ಲೆಯ ಸಕಲೇಶಪುರದ ಕೆಸವನಹಳ್ಳಿ ಗ್ರಾಮದ ಕುಂಬರಡಿ ಕಾಫಿ ಎಸ್ಟೇಟ್ ಬಳಿ ಎತ್ತಿನಹೊಳೆ ಯೋಜನೆಯ ಪರೀಕ್ಷಾರ್ಥ ನೀರು ಹರಿಸುವ ಕಾರ್ಯಾಚರಣೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಎತ್ತಿನಹೊಳೆ ಯೋಜನೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ತಾಯಿ ಗಂಗೆಗೆ ಪೂಜೆ ಸಲ್ಲಿಸಿ ಟ್ರಯಲ್ ರನ್ ಮಾಡಿದ್ದೇನೆ. ನಮ್ಮ ಅಧಿಕಾರಿಗಳು ನನ್ನ ಹತ್ತಿರ ಬಂದು ದಾಖಲೆ, ವಿಡಿಯೋಗಳನ್ನು ತೋರಿಸಿದ್ದರು. ಆದರೆ, ನಾನೇ ಖುದ್ದಾಗಿ ಕಣ್ಣಿನಲ್ಲಿ ನೋಡಬೇಕು ಎಂದು ಬಂದಿದ್ದೇನೆ. ನಮ್ಮ ಹಿರಿಯ ಶಾಸಕರ ಜೊತೆ ಬಂದು ಟ್ರಯಲ್ ರನ್ ಮಾಡಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಹಿಂದೆ ನಾನೇ ಗಡುವು ಕೊಟ್ಟು ಹೋಗಿದ್ದೆ. ಎರಡು, ಮೂರು ತಿಂಗಳು ವಿಳಂಬವಾಗಿದೆ. ಆದರೂ ಏನೇನು ಕೆಲಸ ಇತ್ತೋ ಅದನ್ನು ನಿರ್ವಹಣೆ ಮಾಡಿದ್ದೇವೆ. ಅರಣ್ಯ ಇಲಾಖೆ ಕೆಲಸ ಉಳಿದುಕೊಂಡಿದೆ. ಅರಣ್ಯ ಇಲಾಖೆಯವರ ಜೊತೆ ನಾನು, ಮುಖ್ಯಮಂತ್ರಿ ಮಾತನಾಡುತ್ತೇವೆ. ಐದು ವಿಯರ್‌ (ಚೆಕ್‌ಡ್ಯಾಂ)ಗಳನ್ನು ಇವತ್ತು ಚಾಲನೆ ಮಾಡಿದ್ದೇನೆ’ ಎಂದು ತಿಳಿಸಿದರು.

‘1500 ಕ್ಯೂಸೆಕ್ ನೀರು ಎತ್ತಲಾಗುತ್ತಿದೆ. 8–10 ದಿನದಲ್ಲಿ ನೀರು ಕಡಿಮೆಯಾಗುವ ಮೊದಲೇ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಶುಭ ದಿನ, ಶುಭ ಗಳಿಗೆ, ಶುಭ ಮುಹೂರ್ತ ನೋಡಿ ಮುಖ್ಯಮಂತ್ರಿಯನ್ನು ಕರೆದುಕೊಂಡು ಬಂದು ಚಾಲನೆ ನೀಡುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಈ ವೇಳೆ, ‘ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತವಾಗಿದೆ. ಒಂದು ರೂಪಾಯಿ ಪರಿಹಾರ ನೀಡಿಲ್ಲ’ ಎಂದು ಸ್ಥಳೀಯ ಶಾಸಕ ಸಿಮೆಂಟ್ ಮಂಜು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ‘ಎಲ್ಲೆಲ್ಲಿ ಹಾನಿ ಆಗಿದೆಯೋ ಅಲ್ಲಿ ಎಲ್ಲ ಕಾಮಗಾರಿ ಮಾಡೋಣ. ಎಲ್ಲ ದುರಸ್ತಿ ಮಾಡಿಸುತ್ತೇವೆ. ತಲೆ ಕೆಡಿಸಿಕೊಳ್ಳಬೇಡಿ. ಅಧಿಕಾರಿಗಳ ಬಳಿ ಕುಳಿತು ಮಾತನಾಡುತ್ತೇನೆ’ ಎಂದರು.

ಸಚಿವ ಡಿ. ಸುಧಾಕರ್, ಸಂಸದ ಶ್ರೇಯಸ್‌ ಪಟೇಲ್‌, ಶಾಸಕರಾದ ಶಿವಲಿಂಗೇಗೌಡ, ಶರತ್ ಬಚ್ಚೇಗೌಡ, ಜಲ ಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಜಿಲ್ಲಾಧಿಕಾರಿ ಸತ್ಯಭಾಮಾ, ಡಿಸಿಎಂ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT