ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯ ಮನಃಸ್ಥಿತಿಗೆ ಆಕ್ಷೇಪ; ಪ್ರಬಲ ಸಾಕ್ಷ್ಯ ಅಗತ್ಯ –ಹೈಕೋರ್ಟ್

Published 18 ಮಾರ್ಚ್ 2024, 15:49 IST
Last Updated 18 ಮಾರ್ಚ್ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ‘ಕೌಟುಂಬಿಕ ವ್ಯಾಜ್ಯಗಳಲ್ಲಿ ಸಲ್ಲಿಸಲಾಗುವ; ಪತ್ನಿಯ ಮನಃಸ್ಥಿತಿ ಸರಿ ಇಲ್ಲ, ಆಕೆಯನ್ನು ಮನಃಶಾಸ್ತ್ರಜ್ಞರಿಂದ ಪರೀಕ್ಷೆಗೆ ಒಳಪಡಿಸಬೇಕು ಎಂಬ ಪತಿಯ ಆರೋಪಗಳನ್ನು ಪರಿಗಣಿಸಬೇಕಾದರೆ ಮೇಲ್ನೋಟಕ್ಕೇ ಅಂತಹ ಆರೋಪಗಳಿಗೆ ಬಲವಾದ ಸಾಕ್ಷ್ಯಗಳು ಇರಬೇಕು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ನನ್ನ ಪತ್ನಿಯನ್ನು ನಿಮ್ಹಾನ್ಸ್‌ನಲ್ಲಿ (ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ) ಮನಃಶಾಸ್ತ್ರಜ್ಞರಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂಬ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ‘ಪತಿ ಅನಗತ್ಯ ದಾವೆ ಹೂಡಿದ್ದಾರೆ’ ಎಂದು ಅವರಿಗೆ ₹ 50 ಸಾವಿರ ದಂಡ ವಿಧಿಸಿರುವ ನ್ಯಾಯಪೀಠ, ಈ ಹಣವನ್ನು ಪತ್ನಿಗೆ ನೀಡುವಂತೆ ನಿರ್ದೇಶಿಸಿದೆ.

‘ಪತಿ ತನ್ನ ಪತ್ನಿಯನ್ನು ಮಾನಸಿಕ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ ತಕ್ಷಣವೇ ಅದನ್ನು ಪರಿಗಣಿಸಲಾಗದು. ಮೇಲ್ನೋಟಕ್ಕೇ ಈ ಆರೋಪವನ್ನು ಪುಷ್ಟೀಕರಿಸುವಂತಹ ಬಲವಾದ ಸಾಕ್ಷ್ಯಗಳು ಮತ್ತು ಆಧಾರಗಳು ಇರಬೇಕಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಪ್ರಕರಣದ ದಂಪತಿ 2020ರ ನವೆಂಬರ್ 26ರಂದು ಮದುವೆಯಾಗಿದ್ದರು. ಇಬ್ಬರ ಮಧ್ಯೆ ಆರಂಭವಾದ ಮನಸ್ತಾಪ ಪೊಲೀಸ್‌ ಠಾಣೆ, ಕೋರ್ಟ್ ಮೆಟ್ಟಿಲೇರಿತ್ತು.

‘ಪತ್ನಿ 2021ರ ಜನವರಿ 28ರಂದು ತವರಿಗೆ ಹೋದವಳು ವಾಪಸ್ ಬಂದಿಲ್ಲ’ ಎಂದು ಪತಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಪತ್ನಿ ಪತಿಯ ವಿರುದ್ಧ ದೌರ್ಜನ್ಯ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ-1961ರ ಕಲಂ 3 ಮತ್ತು 4ರಡಿ 2022ರ ಏಪ್ರಿಲ್‌ 14ರಂದು ಕೆ.ಪಿ. ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದರ ನಂತರ ಪತಿ, ಮಾನಸಿಕ ಕ್ರೌರ್ಯದ ಆಧಾರದಡಿ ವಿವಾಹ ರದ್ದುಗೊಳಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಬಾಕಿ ಇರುವಾಗಲೇ ‘ನನ್ನ ಹೆಂಡತಿಯ ಮಾನಸಿಕ ಸ್ಥಿತಿ ಸರಿ ಇಲ್ಲ. ಹೀಗಾಗಿ, ಆಕೆಯನ್ನು ನಿಮ್ಹಾನ್ಸ್‌ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಲು ನಿರ್ದೇಶಿಸಬೇಕು’ ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

‘ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ತೋರಿಸಲಾಗಿತ್ತು, ಆಗ ವೈದ್ಯರು ಆಕೆಯ ಮಾನಸಿಕ ಸ್ಥಿತಿ 11 ವರ್ಷ 8 ತಿಂಗಳ ಬಾಲಕಿಯ ಹಂತದ್ದಿದೆ. ಆಕೆಯ ಮನಸ್ಥಿತಿ ಸರಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮದುವೆಯನ್ನು ಅನೂರ್ಜಿತಗೊಳಿಸಬೇಕು’ ಎಂದು ಮನವಿ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಪತ್ನಿ, ‘ನಾನು ಸಂಗೀತಗಾರ್ತಿ, ಶಿಕ್ಷಕಿ ಮತ್ತು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸುತ್ತಿದ್ದೇನೆ. ನಾನು ಹಲವು ತಾಂತ್ರಿಕ ಪರೀಕ್ಷೆಗಳನ್ನು ಪಾಸು ಮಾಡಿದ್ದೇನೆ’ ಎಂದು ದಾಖಲೆಗಳ ಸಹಿತ ನ್ಯಾಯಾಲಯಕ್ಕೆ ವಿವರಣೆ ನೀಡಿದ್ದರು. 

ಪತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ‘ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಹೇಳಿಕೆ ಕೇವಲ ಊಹೆ ಎನಿಸುತ್ತದೆ. ಏಕೆಂದರೆ, ಪತ್ನಿ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದರೆ ಆಕೆ ಪ್ರತಿಭಾವಂತೆ ಎಂಬುದು ವೇದ್ಯವಾಗುತ್ತದೆ. ಎಲ್ಲ ಅಂಶಗಳನ್ನು ಪರಿಶೀಲಿಸಿದರೆ ವಿವಾಹವನ್ನು ಅನೂರ್ಜಿತಗೊಳಿಸಲು ನ್ಯಾಯಾಲಯದಲ್ಲಿ ತನ್ನ ಪರ ಸಾಕ್ಷ್ಯ ಹೆಣೆಯಲು ಪತಿಯು ವೇದಿಕೆ ಸಿದ್ಧಪಡಿಸುತ್ತಿರುವುದು ಕಂಡು ಬರುತ್ತದೆ. ಆದ್ದರಿಂದ ಈ ಅರ್ಜಿಯನ್ನು ಪರಿಗಣಿಸಲಾಗದು’ ಎಂದು ಆದೇಶದಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT