ನವದೆಹಲಿ: ವಿವಿಧೆಡೆ ಕೈಗಾರಿಕಾ ಪ್ರದೇಶಗಳ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ರೈತರ ಹೆಸರಿನಲ್ಲಿ ಅನ್ಯರಿಗೆ ಪರಿಹಾರ ವಿತರಿಸಿ, ವಂಚಿಸಿರುವ ಪ್ರಕರಣದ ಸಂಬಂಧ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯವು ಡಿಜಿಟಲ್ ಸಾಧನ, ₹1.5 ಕೋಟಿ ನಗದು ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇ.ಡಿ.ಅಧಿಕಾರಿಗಳ ತಂಡವು ಕೆಐಎಡಿಬಿ ಪ್ರಧಾನ ಕಚೇರಿ, ಧಾರವಾಡ ವಲಯ ಕಚೇರಿ ಮೇಲೆ ಶುಕ್ರವಾರ ದಾಳಿ ಮಾಡಿ, ಶೋಧ ನಡೆಸಿತ್ತು.
ಧಾರವಾಡದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 2012ರಲ್ಲಿ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಒಮ್ಮೆ ಪರಿಹಾರ ನೀಡಲಾಗಿತ್ತು. 2021ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 14 ಮಂದಿಗೆ ₹ 19.9 ಕೋಟಿ ಪರಿಹಾರ ವಿತರಿಸಲಾಗಿತ್ತು. ಈ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲಾಗಿತ್ತು. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳ ಆಧಾರದಲ್ಲಿ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕೆಐಎಡಿಬಿಯ ಧಾರವಾಡ ವಲಯದ ಮಾಜಿ ವಿಶೇಷ ಭೂಸ್ವಾಧೀನ ಅಧಿಕಾರಿ ವಿ.ಡಿ.ಸಜ್ಜನ್ ಹಾಗೂ ಇತರರ ವಿರುದ್ಧ ಪೊಲೀಸರು ಈ ಹಿಂದೆಯೇ ಎಫ್‌ಐಆರ್ ದಾಖಲಿಸಿದ್ದಾರೆ. ಸಜ್ಜನ್ ಹಾಗೂ ಇತರ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಕೈಜೋಡಿಸಿ ₹19.9 ಕೋಟಿ ಪರಿಹಾರ ವಿತರಿಸಿದ್ದಾರೆ. ಇದರಿಂದಾಗಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇದೇ ವಿಧಾನ ಬಳಸಿ ಅಧಿಕಾರಿಗಳು ಈ ಹಿಂದೆ ₹72.55 ಕೋಟಿ ಪರಿಹಾರ ನೀಡಿರುವ ಬಗ್ಗೆಯೂ ನಿರ್ದೇಶನಾಲಯ ಮಾಹಿತಿ ಕಲೆ ಹಾಕಿದೆ.
ಮೂಲ ಪಾವತಿ ರಿಜಿಸ್ಟರ್, ಭೂಸ್ವಾಧೀನಕ್ಕೆ ಕೆಐಎಡಿಬಿ ಹೊರಡಿಸಿದ ಅಂತಿಮ ಅಧಿಸೂಚನೆ, ನಕಲಿ ಭೂ ಮಾಲೀಕರ ಹೆಸರಿನಲ್ಲಿ ಸಿದ್ಧಪಡಿಸಲಾದ ಆರ್‌ಟಿಜಿಎಸ್ ಪಾವತಿ ನಮೂನೆಗಳು ಇತ್ಯಾದಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಸಜ್ಜನ್ ಹೆಸರಿನಲ್ಲಿರುವ ₹55 ಲಕ್ಷಗಳ ಬ್ಯಾಂಕ್ ಠೇವಣಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.