ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೆ ದಾಳಿ:ರಾಜ್ಯದವರ ಬಗ್ಗೆ ತಿರಸ್ಕಾರ, ಹೊರಗಿನವರಿಗೆ ಪರಿಹಾರ–ಮಲೆನಾಡಿಗರ ಅಸಮಾಧಾನ

ವಯನಾಡು ಆನೆ ದಾಳಿಗೆ ಕರ್ನಾಟಕ ಸರ್ಕಾರದ ಪರಿಹಾರ: ಮಲೆನಾಡಿನ ಜನರ ಅಸಮಾಧಾನ
Published 20 ಫೆಬ್ರುವರಿ 2024, 21:05 IST
Last Updated 20 ಫೆಬ್ರುವರಿ 2024, 21:05 IST
ಅಕ್ಷರ ಗಾತ್ರ

ಹಾಸನ: ‘ಕೇರಳದ ವಯನಾಡಿನಲ್ಲಿ ಆನೆ ತುಳಿತಕ್ಕೆ ಬಲಿಯಾದ ವ್ಯಕ್ತಿಗೆ ರಾಜ್ಯ ಸರ್ಕಾರವು ₹ 15 ಲಕ್ಷ ಪರಿಹಾರ ನೀಡಿದೆ. ಆದರೆ, ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ 2022 ರ ನವೆಂಬರ್‌ 1 ಕಾಡಾನೆ ದಾಳಿಯಿಂದ ಮೃತಪಟ್ಟ ಮನು ಅವರ ಕುಟುಂಬಕ್ಕೆ ₹ 7.5 ಲಕ್ಷ ಪರಿಹಾರವನ್ನಷ್ಟೇ ನೀಡಿದೆ’ ಎಂಬ ಆಕ್ರೋಶ ವ್ಯಕ್ತವಾಗಿದೆ.

ಮನು ಮೃತಪಟ್ಟಾಗ, ಸ್ಥಳೀಯರು ಶವ ಮೇಲೆತ್ತಲು ಬಿಡದೇ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಗ್ರಾಮಕ್ಕೆ ಮಧ್ಯರಾತ್ರಿ ಭೇಟಿ ನೀಡಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್‌ ಅವರಿಗೆ ಕರೆ ಮಾಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಪರಿಹಾರವನ್ನು ₹ 15 ಲಕ್ಷಕ್ಕೆ ಹೆಚ್ಚಿಸಲಾಗುವುದು. ಮನು ಕುಟುಂಬಕ್ಕೂ ನೀಡಲಾಗುವುದು’ ಎಂದಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹೋರಾಟಗಾರ ಯಡೇಹಳ್ಳಿ ಮಂಜುನಾಥ, ‘ಈಗ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಬಹುತೇಕ ಕಾಡಾನೆಗಳು ಕೇರಳದಿಂದಲೇ ಬಂದಿವೆ. ಮಾರ್ಟಿನ್, ಲೂಯಿಸ್, ತಣ್ಣೀರು ಸೇರಿದಂತೆ ಇತರೆ ಆನೆಗಳಿಗೆ ಹೆಸರಿಟ್ಟವರೂ ಅವರೇ. ಇದುವರೆಗೆ ಇಲ್ಲಿ 79 ಮಂದಿ ಮೃತಪಟ್ಟಿದ್ದು, ಆಗ ಕೇರಳ ರಾಜ್ಯ ಸರ್ಕಾರ ಪರಿಹಾರ ನೀಡಿತ್ತೇ’ ಎಂದು ಪ್ರಶ್ನಿಸಿದರು.

‘ಇತ್ತೀಚಿಗೆ ಮೃತಪಟ್ಟ ಜಾರ್ಖಂಡ್ ಮೂಲದ ಲಾರಿ ಚಾಲಕನ ಕುಟುಂಬಕ್ಕೂ ರಾಜ್ಯ ಸರ್ಕಾರ ಪರಿಹಾರ ನೀಡಲಿಲ್ಲ’ ಎಂದು ಆರೋಪಿಸಿದರು.

ಸ್ಥಳೀಯರಿಗೆ ಮೊದಲು ಕೊಡಲಿ: ‘‌ಕಾಡು ಪ್ರಾಣಿಗಳಿಗೆ ಗಡಿ ಇರುವುದಿಲ್ಲ. ವಯನಾಡಿನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುತ್ತಿರುವುದು ಬಾಲಿಶ ನಡೆ. ನಮ್ಮ ರಾಜ್ಯದವರಿಗೆ ಮೊದಲು ಬಾಕಿ ಪರಿಹಾರ ಬಿಡುಗಡೆ ಮಾಡಲಿ’ ಎಂದು ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್ ಆಗ್ರಹಿಸಿದರು.

‘ಕಾಡಾನೆ ಮನೆ ಬಳಿ ಬಂದರೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವೆನೆಂದು ಅಧಿಕಾರಿಗಳ ಬಳಿ ಹೇಳಿದ್ದರಿಂದ, ನನ್ನ ಬಂದೂಕನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿತ್ತು. ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕುವ ಈ ಸರ್ಕಾರ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.

ಎಚ್‌.ಎಂ.ವಿಶ್ವನಾಥ
ಎಚ್‌.ಎಂ.ವಿಶ್ವನಾಥ
ಯಡೇಹಳ್ಳಿ ಆರ್.ಮಂಜುನಾಥ್
ಯಡೇಹಳ್ಳಿ ಆರ್.ಮಂಜುನಾಥ್

2022ರ ಡಿಸೆಂಬರ್‌ 15 ರಿಂದ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಸರ್ಕಾರ ಆದೇಶಿಸಿದೆ. ಮನು ಅವರು ನವೆಂಬರ್‌ನಲ್ಲಿ ಮೃತಪಟ್ಟಿದ್ದರಿಂದ ಆದೇಶ ಅನ್ವಯವಾಗಿಲ್ಲ

–ಶಿಲ್ಪಾ ವಲಯ ಅರಣ್ಯಾಧಿಕಾರಿ ಸಕಲೇಶಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT