ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೀಘ್ರದಲ್ಲೇ ‘ಆರ್‌ಸಿಬಿ’ ಬ್ರಿಗೇಡ್‌ ಸ್ಥಾಪನೆ: ಕೆ.ಎಸ್‌. ಈಶ್ವರಪ್ಪ ಘೋಷಣೆ

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಘೋಷಣೆ
Published : 22 ಸೆಪ್ಟೆಂಬರ್ 2024, 12:46 IST
Last Updated : 22 ಸೆಪ್ಟೆಂಬರ್ 2024, 12:46 IST
ಫಾಲೋ ಮಾಡಿ
Comments

ವಿಜಯಪುರ: ರಾಜ್ಯದಲ್ಲಿ ಹಿಂದುಳಿದವರಿಗೆ, ದಲಿತರಿಗೆ, ಬ್ರಾಹ್ಮಣರಿಗೆ ಮತ್ತು ಲಿಂಗಾಯತರಿಗೆ  ಅನ್ಯಾಯವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶೀಘ್ರದಲ್ಲೇ ಆರ್‌ಸಿಬಿ (ರಾಯಣ್ಣ,ಚನ್ನಮ್ಮ ಬ್ರಿಗೇಡ್‌) ಅಸ್ಥಿತ್ವಕ್ಕೆ ಬರಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು. 

ಹಿಂದುಳಿದವರಿಗೆ ಅನ್ಯಾಯವಾಗುವುದನ್ನು ತಡೆಯಲು ಬ್ರಿಗೇಡ್‌ ಬೇಕು ಎಂದು ಅನೇಕರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕೂಡ ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ ಯತ್ನಾಳ ಸೇರಿ ಆರ್‌ಸಿಬಿ ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಬೆಂಬಲಿಗರೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ರಾಯಣ್ಣ ಬ್ರಿಗೇಡ್‌ ಚಟುವಟಿಕೆ ನಿಲ್ಲಿಸುವಂತೆ ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ದೂರಿನ ಮೇರೆಗೆ ಅಮಿತ್‌ ಶಾ ಅವರು ನನಗೆ ಸೂಚಿಸಿದ್ದ ಕಾರಣಕ್ಕೆ ಕೈಬಿಟ್ಟಿದ್ದೆ. ಅಂದು ರಾಯಣ್ಣ ಬ್ರಿಗೇಡ್‌ ಸಂಘಟನೆ ಕೈಬಿಟ್ಟು ತಪ್ಪು ಮಾಡಿದೆ ಎಂದು ಈಗ ಅನಿಸುತ್ತಿದೆ ಎಂದು ಹೇಳಿದರು.

ಜೀವನದಲ್ಲಿ ಬಿಜೆಪಿ ಬಿಟ್ಟು ಬೇರಾವ ಪಕ್ಷಕ್ಕೂ ಹೋಗುವುದಿಲ್ಲ. ಆದರೆ, ಭ್ರಷ್ಟಾಚಾರಿಗಳಿಂದ, ಅಪ್ಪ–ಮಕ್ಕಳ ಕಪಿಮುಷ್ಠಿಯಿಂದ ಶುದ್ಧೀಕರಣವಾಗದ ಹೊರತು ಬಿಜೆಪಿಗೆ ಸದ್ಯ ಹೋಗಲ್ಲ. ಬಿಜೆಪಿ ನನ್ನ ತಾಯಿ ಇದ್ದಂತೆ. ಆ ತಾಯಿ ಮೇಲೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ ಧ್ವನಿ ಎತ್ತಿ ಹೊರಬಂದಿದ್ದೇನೆ. ಬಿಜೆಪಿ ಶುದ್ಧೀಕರಣದ ಬಗ್ಗೆ ಪಕ್ಷದ ವರಿಷ್ಠರು ಗಮನ ಹರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಬಂಧಿಸಿ, ಜೈಲಿಗೆ ಕಳುಹಿಸಿ

ತಿರುಪತಿ ಲಡ್ಡು ವಿಷಯದಲ್ಲಿ ವಿದೇಶಿ ಕ್ರಿಶ್ಚಿಯನ್‌ ಮಿಷನರಿಗಳ ಕೈವಾಡ ಇದೆ. ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರವಾಗಿರುವ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ಜಗತ್ತಿನ ಹಿಂದುಗಳಿಗೆ ಮಾಡಿರುವ ದೊಡ್ಡ ದ್ರೋಹ ಇದಾಗಿದೆ. ಅವರ ವಿರುದ್ಧ ಎಫ್‌ಐಆರ್‌ ಹಾಕಿ, ಬಂಧಿಸಿ, ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬೆರಸುವ ಮೂಲಕ ಹಿಂದುಗಳ ಭಾವನೆಗಳಿಗೆ ದಕ್ಕೆ ಮಾಡಲಾಗಿದೆ. ಶ್ರದ್ಧೆಗೆ ಭಂಗ ತರುವ ಕೆಲಸ ಇದಾಗಿದೆ. ಹಿಂದುಗಳ ಶ್ರದ್ಧಾ ಕೇಂದ್ರಕ್ಕೆ ಅಪಮಾನ ಮಾಡಲಾಗಿದೆ. ಸಿಬಿಐ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದರು.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೂ ಇದೇ ಜಗನ್‌ ಮೋಹನ್‌ ರೆಡ್ಡಿ ಎರಡು ಲಕ್ಷ ಲಡ್ಡು ಕಳುಹಿಸಿದ್ದರು. ಅಲ್ಲಿಯೂ ಭಕ್ತರಿಗೆ ವಿತರಣೆ ಮಾಡಲಾಗಿತ್ತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT