ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಯಲುಸೀಮೆಯತ್ತ ಎತ್ತಿನಹೊಳೆ.. ದಶಕದ ಬಳಿಕ ಸಾಕಾರಗೊಳ್ಳುತ್ತಿರುವ ಯೋಜನೆ!

ಹೆಬ್ಬನಹಳ್ಳಿಯಲ್ಲಿ ಇಂದು ಚಾಲನೆ
Published 6 ಸೆಪ್ಟೆಂಬರ್ 2024, 1:13 IST
Last Updated 6 ಸೆಪ್ಟೆಂಬರ್ 2024, 1:13 IST
ಅಕ್ಷರ ಗಾತ್ರ

ಸಕಲೇಶಪುರ: ನೀರಿನ ಬರದಿಂದ ಕಂಗೆಟ್ಟ ಬಯಲುಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ದಶಕದ ನಂತರ ಸಾಕಾರಗೊಳ್ಳುವ ಸಂಭ್ರಮಕ್ಕೆ ‘ಗೌರಿಹಬ್ಬ’ದ ದಿನವೇ ಸಾಕ್ಷಿಯಾಗಲಿದೆ.

ಯೋಜನೆಯು ಮೊದಲ ಹಂತದಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಹರಿಯಲಿದೆ.

ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗಡಹಳ್ಳ, ಕೇರಿಹೊಳೆ ಹಳ್ಳಗಳಿಗೆ ಅಡ್ಡಲಾಗಿ ಎಂಟು ವಿಯರ್‌ಗಳನ್ನು (ತಡೆ) ಕಟ್ಟಿ ಮಳೆಗಾಲದಲ್ಲಿ ಪ್ರವಾಹದಿಂದ ಸಿಗುವ ನೀರಿನಲ್ಲಿ 24.11 ಟಿಎಂಸಿ ಅಡಿಯನ್ನು ಬರಪೀಡಿತ ಏಳು ಜಿಲ್ಲೆಗಳಿಗೆ ಹರಿಸುವ ಯೋಜನೆ ಇದಾಗಿದೆ.

ಪ್ರತಿ ವರ್ಷ ಜೂನ್‌ 15ರಿಂದ ಅಕ್ಟೋಬರ್‌ 15ರವರೆಗೆ (ಮಳೆಗಾಲದ ವ್ಯತ್ಯಾಸಕ್ಕೆ ಅನುಗುಣವಾಗಿ ವ್ಯತ್ಯಾಸವಾಗಲಿದೆ) ನಾಲ್ಕು ತಿಂಗಳು ಪೂರ್ವಾಭಿಮುಖವಾಗಿ ನೀರು ಹರಿಸಿ ಏಳು ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ ನೀರು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.

ಪರ–ವಿರೋಧದ ಯೋಜನೆ: 2011 ರಲ್ಲಿ ಯೋಜನೆ ರೂಪಿಸಲಾಗಿತ್ತು. ಅದಕ್ಕೆ ಕರಾವಳಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಸಹಿತ ವಿವಿಧ ಪಕ್ಷಗಳು, ಪರಿಸರ ಪ್ರೇಮಿಗಳು, ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಅದೇ ಸಮಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಸಹಿತ ನೀರು ಹರಿಯಲಿರುವ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಬೆಂಬಲಿಸಿ ಹೋರಾಟಗಳು ನಡೆದಿದ್ದವು. ಕರಾವಳಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಪಕ್ಷಗಳು ಬಯಲುಸೀಮೆಯಲ್ಲಿ ಬೆಂಬಲ ನೀಡಿದ್ದವು. ವಿರೋಧಗಳ ನಡುವೆಯೇ 2014ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ದಶಕದ ಬಳಿಕ ಯೋಜನೆಯ ಮೊದಲ ಹಂತಕ್ಕೆ ಚಾಲನೆ ದೊರೆಯುತ್ತಿದೆ. 

ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ ಸೆ.6ರಂದು ಮಧ್ಯಾಹ್ನ 12.05ಕ್ಕೆ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಂಸದ ಶ್ರೇಯಸ್‌ ಪಟೇಲ್‌, ಶಾಸಕ ಶಿವಲಿಂಗೇಗೌಡ, ಸಿಮೆಂಟ್‌ ಮಂಜು, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು, ಕೋಲಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಐತಿಹಾಸಿಕ ದಿನ: ಡಿಕೆಶಿ

‘ರಾಜ್ಯದ ಇತಿಹಾಸದಲ್ಲಿಯೇ ಶುಕ್ರವಾರ ಮರೆಯಲಾರದ ದಿನ. ಆಲಮಟ್ಟಿಯ ನಂತರ ಅತಿ ದೊಡ್ಡ ಯೋಜನೆ ಇದಾಗಿದೆ. ಏಳು ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಪರಿಹಾರಗೊಳ್ಳಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನೀರು ಎತ್ತುವ ಪಂಪ್‌ಹೌಸ್‌ಗಳನ್ನು ಗುರುವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನ್ನ ರಾಜಕೀಯ ಜೀವನದ ಅತಿದೊಡ್ಡ ಯೋಜನೆ ಇದಾಗಿದೆ. ಈ ಯೋಜನೆ ಪೂರ್ಣ

ಗೊಳ್ಳುವುದಿಲ್ಲ ಎಂದು ಬಿಜೆಪಿಯವರು ಟೀಕಿಸಿದ್ದರು. ಟೀಕೆಗಳು ಸಾಯುತ್ತವೆ. ನಾವು ಮಾಡಿದ ಕೆಲಸಗಳು ಉಳಿಯುತ್ತವೆ’ ಎಂದು ಪ್ರತಿಕ್ರಿಯಿಸಿದರು.

‘ನೀರು ಸೋರಿಕೆ ಇಲ್ಲ’

‘ಎತ್ತಿನಹೊಳೆ ಯೋಜನೆಯಲ್ಲಿ ಮಳೆಗಾಲದಲ್ಲಿ ನೀರು ಹರಿಸುವುದರಿಂದ ನೀರು ಸೋರಿಕೆ ಇರುವುದಿಲ್ಲ’ ಎಂದು ಯೋಜನೆಯ ಸಹಾಯಕ ಎಂಜಿನಿಯರ್‌ ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್‌15ರಿಂದ ಅಕ್ಟೋಬರ್‌15ರವರೆಗೆ ಮಳೆಗಾಲ ಇರುವುದರಿಂದ ನೀರು ಆವಿಯಾಗುವುದಿಲ್ಲ ನೀರು ಬಳಕೆದಾರರು ಅಕ್ರಮವಾಗಿ ಬಳಸುವ ಪ್ರಮೇಯ ಇರುವುದಿಲ್ಲ. ಮುಂಗಾರು ಮಳೆಯ ಅವಧಿಯಲ್ಲಿ ನಾಲ್ಕು ತಿಂಗಳು ನೀರನ್ನು ಎತ್ತಿ ಹರಿಸಲಾಗುತ್ತದೆ. ಇದರಿಂದ ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ. ಬದಲಿಗೆ, ಹೆಚ್ಚುವರಿ ಮಳೆ ನೀರಿನಿಂದ ಆಗಬಹುದಾದ ಪ್ರವಾಹ ಅಪಾಯವನ್ನು ನಿಯಂತ್ರಣವೂ ಆಗಲಿದೆ’ ಎಂದರು.

‘ಎತ್ತಿನ ಹೊಳೆ ನೀರು ಕೆಂಪುಹೊಳೆಗೆ ಹರಿದು, ಕುಮಾರಧಾರಾ ನದಿಗೆ ಸೇರುತ್ತದೆ. ಅಲ್ಲಿಂದ ನೇತ್ರಾವತಿ ನದಿಗೆ ಸೇರುತ್ತದೆ. ನೇತ್ರಾವತಿ ನದಿ ಸಮುದ್ರಕ್ಕೆ ಸೇರುತ್ತದೆ. ಶೇ 1ರಷ್ಟು ನೀರನ್ನು ಮಾತ್ರ ಯೋಜನೆಯಡಿ ಬಳಸಲಾಗುತ್ತಿದೆ. ಇದರಿಂದ ಸಮುದ್ರಕ್ಕೆ ಸೇರುವ ನೀರಿನಲ್ಲಿ ಒಂದಂಶ ಕಡಿಮೆಯಾಗಬಹುದು. ಇದನ್ನು ಅರಿತೇ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕುಡಿಯುವ ನೀರು ಒದಗಿಸಲು ಯೋಜನೆ ಕೈಗೊಳ್ಳಬಹುದು ಎಂದು ಅನುಮತಿ ನೀಡಿದೆ’ ಎಂದು ಮಾಹಿತಿ ನೀಡಿದರು.

‘ಸಂಗ್ರಹವಾಗುವ ನೀರನ್ನು ಟಿಎಂಸಿ ಅಡಿ ಆಧಾರದಲ್ಲಿ ಅಳೆಯಲಾಗುತ್ತದೆ. ಹರಿಯುವ ನೀರನ್ನು ಕ್ಯುಮೆಕ್ಸ್ (ಮೀಟರ್ ಕ್ಯೂಬಿಕ್ ಪರ್ ಸೆಕೆಂಡ್) ಆಧಾರದಲ್ಲಿ ಅಳತೆ ಮಾಡಲಾಗುತ್ತದೆ. ಒಂದು ಸೆಕೆಂಡಿಗೆ ಸಾವಿರ ಲೀಟರ್ ಹರಿಯುವುದು ಒಂದು ಕ್ಯುಮೆಕ್ಸ್‌ ಆಗಿರುತ್ತದೆ. ಶುಕ್ರವಾರದಿಂದ ನಿತ್ಯ 25ರಿಂದ 30 ಕ್ಯುಮೆಕ್ಸ್ ಪಂಪ್ ಮಾಡಲಾಗುವುದು. ಇಲ್ಲಿ 14 ಕ್ಯುಮೆಕ್ಸ್ ಸಾಮರ್ಥ್ಯದ ಆರು ಮೋಟರ್‌ ಚಾಲನೆಯಲ್ಲಿ ಇರುತ್ತವೆ. ಮಧ್ಯೆ ಯಾವುದಾದರೂ ರಿಪೇರಿಗೆ ಬಂದರೆ, ಹೆಚ್ಚುವರಿಯಾಗಿ ರುವ ಏಳನೇ ಪಂಪ್‌ ಕಾರ್ಯನಿರ್ವಹಿಸುತ್ತದೆ. ಇವುಗಳ ಸಾಮರ್ಥ್ಯ 85 ಕ್ಯುಮೆಕ್ಸ್’ ಎಂದು ವಿವರಿಸಿದರು.

’ಹೋಮ, ಕುಂಬಳಕಾಯಿ ಬಲಿ ಇರಲಿದೆ’

‘ಹೋಮ ಹವನ ಮಾಡಬೇಕು, ಕುಂಬಳಕಾಯಿ ಬಲಿ ನೀಡಬೇಕು. ದೇವರಲ್ಲಿ ಪ್ರಾರ್ಥನೆ ಮಾಡಿ ಯೋಜನೆಗೆ ಚಾಲನೆ ನೀಡಬೇಕು’ ಎಂದು ಶಿವಕುಮಾರ್ ಹೇಳಿದರು.

ಹೋಮ ಮಾಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವೂ ಇರಲೇಬೇಕಲ್ಲವೇ? ನಮ್ಮ ಧರ್ಮ, ಸಂಸ್ಕೃತಿ ಕಾಪಾಡಬೇಕು. ಗಂಗೆ ಪೂಜೆ, ಬಾಗಿನ ಅರ್ಪಣೆ ಎಲ್ಲವೂ ನಮ್ಮ ಧರ್ಮ, ಸಂಸ್ಕೃತಿಯ ಭಾಗವಲ್ಲವೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT