ಬೆಂಗಳೂರು: ಬೇಡ ಜಂಗಮ ಜಾತಿಯ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಅವರ ಕುಟುಂಬದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಶಾಸಕರು ಬುಧವಾರ ವಿಧಾನಸಭೆಯಲ್ಲಿ ಒತ್ತಾಯಿಸಿದರು.

ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ದೇವಸ್ಥಾನಗಳ ಜಾತ್ರೆ, ಉತ್ಸವಗಳಲ್ಲಿ ನಿರ್ಬಂಧ ಹೇರಿರುವ ಕುರಿತು ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಾಗ ರೇಣುಕಾಚಾರ್ಯ
ಅಡ್ಡಿಪಡಿಸಿದರು. ಆಗ, ‘ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರು ಪಾಠ ಹೇಳಬೇಕಿಲ್ಲ’ ಎಂದು ಖಾದರ್ ತಿರುಗೇಟು ನೀಡಿದರು.

ವಾಗ್ವಾದ ತಣ್ಣಗಾದ ಬಳಿಕ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಖಾದರ್ ಅವರು ರೇಣುಕಾಚಾರ್ಯ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ ಪಡೆದ ಆರೋಪ ಮಾಡಿದ್ದಾರೆ. ಈ ವಿಷಯವನ್ನು ಕಡತದಿಂದ ತೆಗೆದು ಹಾಕಬೇಕು’ ಎಂದು ಒತ್ತಾಯಿಸಿದರು. ಆಗ ಈ ಕುರಿತ ಚರ್ಚೆ ಮತ್ತೆ ಜೋರಾಯಿತು.

ಒಪ್ಪಿಕೊಂಡ ಶಾಸಕ: ‘ನಾನು ಸಂವಿಧಾನಕ್ಕೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ. ನನ್ನ ಅಣ್ಣ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಂಡು ಕಲಬುರಗಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ. ಆತನೇ ನನ್ನ ಮಗಳಿಗೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿಸಿದ್ದ. ವಿಷಯ ಗೊತ್ತಾದ ತಕ್ಷಣ ಅದನ್ನು ಮರಳಿಸಲು ಮಗಳಿಗೆ ಸೂಚಿಸಿದ್ದೆ’ ಎಂದು ರೇಣುಕಾಚಾರ್ಯ ಸದನದಲ್ಲಿ ಒಪ್ಪಿಕೊಂಡರು.

‘ಪರಿಶಿಷ್ಟ ಜಾತಿ ಹೆಸರಿನಲ್ಲಿ ಯಾವ ಸೌಲಭ್ಯವನ್ನೂ ನಾವು ಪಡೆದುಕೊಂಡಿಲ್ಲ. ಈ ವಿಚಾರದಲ್ಲಿ ನಾನು ಭಾಗಿಯಾಗಿರುವುದನ್ನು ಸಾಬೀತುಪಡಿಸಿದರೆ ಗಲ್ಲಿಗೇರಲು ಸಿದ್ಧ’ ಎಂದು ಸವಾಲು ಹಾಕಿದರು.

ಕ್ರಮಕ್ಕೆ ಪಟ್ಟು: ‘ಮಗಳು ಪರಿಶಿಷ್ಟ ಜಾತಿ ಹೆಸರಿನಲ್ಲಿ ಪ್ರಮಾಣಪತ್ರ ಪಡೆದಿರುವುದರಿಂದ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ಪಿ.ಟಿ. ಪರಮೇಶ್ವರ ನಾಯ್ಕ್, ಭೀಮಾ ನಾಯ್ಕ್ ಮತ್ತಿತರರು ಸಭಾಧ್ಯಕ್ಷರ ಪೀಠದ ಎದುರು ಧರಣಿಗೂ ಮುಂದಾದರು.

‘ಕ್ರಮ ಕೈಗೊಳ್ಳುವ ವಿಚಾರವನ್ನು ಸರ್ಕಾರ ವಹಿಸಿಕೊಳ್ಳುವುದಿಲ್ಲ. ರೇಣುಕಾಚಾರ್ಯ ಅಥವಾ ಯಾರೇ ಅಕ್ರಮವಾಗಿ ಜಾತಿ ಪ್ರಮಾಣಪತ್ರ ಪಡೆದಿದ್ದರೂ ಸಕ್ಷಮ ಪ್ರಾಧಿಕಾರದ ಎದುರು ದೂರು ಸಲ್ಲಿಸಬಹುದು. ಅಲ್ಲಿಯೇ ಕ್ರಮ ಆಗುವಂತೆ ಮಾಡಬಹುದು’ ಎಂದು ಮಾಧುಸ್ವಾಮಿ ಉತ್ತರಿಸಿದರು.

‘ಸೌಲಭ್ಯ ಪಡೆಯದಿದ್ದರೂ ಕ್ರಮ ಅಗತ್ಯ’

‘ಪರಿಶಿಷ್ಟ ಜಾತಿ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದಿದ್ದೆ, ಆದರೆ ಸೌಲಭ್ಯ ಪಡೆದಿಲ್ಲ ಎಂದ ಮಾತ್ರಕ್ಕೆ ಕ್ರಮ ಕೈಗೊಳ್ಳದೇ ಇರಲು ಸಾಧ್ಯವಿಲ್ಲ. ಬೇರೆ ಜಾತಿಯವರು ಪರಿಶಿಷ್ಟ ಜಾತಿಯ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುವುದೇ ದೊಡ್ಡ ಅಪರಾಧ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ರೇಣುಕಾಚಾರ್ಯ ಶಾಸಕರು, ಅಷ್ಟೇ ಅಲ್ಲದೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೂಡ. ಅವರ ಮಗಳಿಗೆ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ 2012ರಲ್ಲಿ15ಕ್ಕೂ ಅಧಿಕ ಲಿಂಗಾಯತರ ಜಂಗಮರಿಗೂ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡಿದ್ದಾರೆ. ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಎಂ.ಆರ್.ಚೇತನಾ, ಎಂ.ಪಿ.ದ್ವಾರಕೇಶ್ವರ್ ಅವರ ಪುತ್ರಿಯರಾದ ಸುಜಾತಾ, ಶ್ರುತಿ ಹೆಸರಿನಲ್ಲೂ ಬೇಡ ಜಂಗಮ ಪ್ರಮಾಣಪತ್ರ ಪಡೆಯಲಾಗಿದೆ’ ಎಂದು ಬಿಜೆಪಿಯ ಗೂಳಿಹಟ್ಟಿ ಶೇಖರ್ ಸದನದಲ್ಲಿ ಮಂಗಳವಾರ ಆರೋಪಿಸಿದ್ದರು.

‘ಬುಡ್ಗ ಜಂಗಮ ಹಾಗೂ ಬೇಡ ಜಂಗಮ ಜಾತಿಯವರಿಗೆ ನೀಡಲಾಗುವ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಪ್ರಬಲವರ್ಗಕ್ಕೆ ಸೇರಿದವರು ಪಡೆದುಕೊಳ್ಳುತ್ತಿರುವುದರ ಕುರಿತ ಚರ್ಚೆ ವೇಳೆ ಅವರು, ‘ಇಷ್ಟೆಲ್ಲ ಆದರೂ ಕಂದಾಯ ಇಲಾಖೆ ಅಧಿಕಾರಿಗಳು, ‘ಪ್ರಬಲ ವರ್ಗದ ಯಾರಿಗೂ ಈ ರೀತಿ ಪ್ರಮಾಣಪತ್ರ ನೀಡಿಲ್ಲ’ ಎಂದು ವಿಧಾನಸಭೆಗೆ ತಪ್ಪು ಉತ್ತರ ನೀಡಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದರು.

ಸವಲತ್ತು ದುರ್ಬಳಕೆಯನ್ನು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಪಕ್ಷಭೇದ ಮರೆತು ಇದನ್ನು ಖಂಡಿಸಿದ್ದರು.

‘ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ‘ಜಂಗಮ’ ಜಾತಿಯವರು ಸಾಮಾನ್ಯ ವರ್ಗಕ್ಕೆ ಸೇರಿದವರು. ಬೇಡ ಜಂಗಮ ಹಾಗೂ ಬುಡ್ಗ ಜಂಗಮರು ಪರಿಶಿಷ್ಟ ಜಾತಿಯವರು. ಪ್ರಬಲ ವರ್ಗದ ‘ಜಂಗಮ’ ಜಾತಿಯವರಿಗೂ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡುವುದು ಎಷ್ಟು ಸರಿ’ ಎಂದು ಬಿಜೆಪಿಯ ಪಿ.ರಾಜೀವ್ ಪ್ರಶ್ನಿಸಿದ್ದರು. ಬಿಜೆಪಿಯ ಲಿಂಗಣ್ಣ ಹಾಗೂ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್‌ನ ಕೆ.ಅನ್ನದಾನಿ ಅವರೂ ಇದಕ್ಕೆ ದನಿಗೂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.