ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕೆಲವು ಪ್ರಾಧ್ಯಾಪಕರು ವರ್ಗಾವಣೆಗಾಗಿ ‘ಅಂಗವಿಕಲ’ರಾಗುತ್ತಿರುವುದು, ಇನ್ನು ಕೆಲವರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ತಮ್ಮ ಅವಲಂಬಿತರನ್ನು ‘ಅಂಗವಿಕಲ’ರನ್ನಾಗಿ ಮಾಡಿರುವುದು ಬಹಿರಂಗವಾಗಿದೆ.

ಜುಲೈ 2ರಂದು ನಡೆದ ಆನ್ಲೈನ್ ಕೌನ್ಸೆಲಿಂಗ್ ವರ್ಗಾವಣೆಯಲ್ಲಿ ‘ಸ್ವಯಂ ಅಂಗವಿಕಲರು’ ಎಂದು ಘೋಷಿಸಿಕೊಂಡು ಅಂಗವಿಕಲರ ಹಕ್ಕುಗಳನ್ನು ಉಲ್ಲಂಘಿಸಲು ಯತ್ನಿಸಲಾಗಿದೆ. ವರ್ಗಾವಣೆಯಲ್ಲಿ ಅಂಗವಿಕಲ ನೌಕರರಿಗೆ ಪ್ರಾಶಸ್ತ್ಯ ನೀಡಬೇಕು. ನಂತರ ಅವಲಂಬಿತರು ಅಂಗವಿಕಲರೆಂದು ಹೇಳಿಕೊಂಡಿರುವ ಬೋಧಕರನ್ನು ಪರಿಗಣಿಸಬೇಕು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ದಾಖಲೆಗಳ ಸಹಿತ ಕೆಲವು ಪ್ರಾಧ್ಯಾಪಕರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ರಾಜ್ಯ ಆಯುಕ್ತರಿಗೆ ದೂರು ನೀಡಿದ್ದಾರೆ.

ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ, ‘ವರ್ಗಾವಣೆಗಾಗಿ ಅಂಗವಿಕಲರೆಂದು ಸ್ವಯಂ ಘೋಷಿಸಿಕೊಂಡಿರುವ, ಅವಲಂಬಿತರು ಅಂಗವಿಕಲರೆಂದು ಹೇಳಿಕೊಂಡಿರುವ ಮತ್ತು ವಿನಾಯಿತಿ ಕೋರಿರುವ ಪ್ರಾಧ್ಯಾಪಕರ ವೈದ್ಯಕೀಯ ಪ್ರಮಾಣಪತ್ರ, ಯುಡಿಐಡಿ ಕಾರ್ಡ್ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ಸಹಿತ ಪಟ್ಟಿಯನ್ನು ಸಲ್ಲಿಸಬೇಕು’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಎನ್. ಮಂಜುಶ್ರೀ ಅವರಿಗೆ ಜುಲೈ 18ರಂದು ಸೂಚಿಸಿದ್ದಾರೆ.

ವರ್ಗಾವಣೆಯಲ್ಲಿ ಅಂಗವಿಕಲರ ಹಕ್ಕುಗಳ ಉಲ್ಲಂಘನೆಯ ಕುರಿತು ತುಮಕೂರು ಜಿಲ್ಲೆ ಬೆಳ್ಳಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಿ. ಗಂಗಾಧರಯ್ಯ, ಚಿಕ್ಕಮಗಳೂರು ಜಿಲ್ಲೆಯ ಐಡಿಎಸ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆರ್. ವಿನೋದ್ ಪ್ರಕಾಶ್, ಮೈಸೂರು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಪಿ.ವಿ. ನಾಗರಾಜು ಮತ್ತಿತರರು ದೂರು ನೀಡಿದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರೊಬ್ಬರು ಶೇ 66ರಷ್ಟು ಅಂಗವೈಕಲ್ಯ ಇದೆಯೆಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಮಾಹಿತಿಯನ್ನು ದೂರುದಾರರು ನೀಡಿದ್ದಾರೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬರುವ ಮೊದಲು ಸುಮಾರು 12 ವರ್ಷ ಪೊಲೀಸ್ ಇಲಾಖೆಯಲ್ಲಿ ಅವರು ಕೆಲಸ ಮಾಡಿದ್ದಾರೆ. ಇನ್ನು ಕೆಲವು ಬೋಧಕರು ಸ್ವಯಂ ಅಂಗವಿಕಲರೆಂದು ಘೋಷಿಸಿಕೊಂಡು ವೈದ್ಯಕೀಯ ಪ್ರಮಾಣಪತ್ರ ಹಾಗೂ ಯುಡಿಐಡಿ ಕಾರ್ಡ್ ಸಲ್ಲಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಮಂಜುಶ್ರೀ ಅವರಿಗೆ ಪತ್ರ ಬರೆದಿರುವ ದಾಸ್ ಸೂರ್ಯವಂಶಿ, ‘ವರ್ಗಾವಣೆಯಲ್ಲಿ ಅಂಗವಿಕಲ ನೌಕರರಿಗೆ ಪ್ರಾಶಸ್ತ್ಯ ನೀಡಿ, ನಂತರ ಅವಲಂಬಿತ ಅಂಗವಿಕಲರಿರುವ ಬೋಧಕರಿಗೆ ಅವಕಾಶ ನೀಡಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಪ್ರಸಕ್ತ ಸಾಲಿನ ವರ್ಗಾವಣೆಯಲ್ಲಿ ನೈಜ ಅಂಗವಿಕಲ ನೌಕರರ ಪಟ್ಟಿಯಲ್ಲಿ ಅವಲಂಬಿತ ಅಂಗವಿಕಲರಿರುವ ಬೋಧಕರನ್ನು ಸೇರಿಸಿ ವರ್ಗಾವಣೆ ಮಾಡಲಾಗಿದೆ. ಇದು ಅಸಾಂವಿಧಾನಿಕ. ತಮ್ಮ ಇಲಾಖೆಯ ಅಸಮರ್ಪಕ ದೋಷಪೂರಿತ ಪರಿಶೀಲನೆಯು ಪ್ರಾಧ್ಯಾಪಕರು ವಾಮಮಾರ್ಗ ಹಿಡಿಯಲು ಅವಕಾಶ ಕಲ್ಪಿಸಿದೆ’ ಎಂದಿದ್ದಾರೆ.

‘ಕೆಲವು ಬೋಧಕರು ವೈದ್ಯರಿಗೆ ಆಸೆ, ಆಮಿಷಗಳನ್ನು ಒಡ್ಡಿ ವೈದ್ಯಕೀಯ ಪ್ರಮಾಣಪತ್ರ ಅಥವಾ ಯುಡಿಐಡಿ ಕಾರ್ಡ್ ಪಡೆದಿದ್ದಾರೆ. ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ತಮ್ಮ ಅವಲಂಬಿತರು ಅಂಗವಿಕಲರು ಎಂದು ಹೇಳಿ ವಿನಾಯಿತಿ ಗಿಟ್ಟಿಸಿಕೊಂಡು ಸೇವಾ ಅವಧಿಯನ್ನು ಒಂದೇ ಕಾಲೇಜಿನಲ್ಲಿ ಪೂರೈಸಲು ಸಂಚು ರೂಪಿಸಿದ್ದಾರೆ. ಅವಲಂಬಿತರು ನೈಜ ಅಂಗವಿಕಲರೇ ಎಂಬುವುದಕ್ಕೆ ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರ ಅಥವಾ ಯುಡಿಐಡಿ ಕಾರ್ಡ್ ಅಷ್ಟೆ ಮಾನದಂಡವಲ್ಲ. ಬೋಧಕರ ಅವಲಂಬಿತರು ಅಂಗವಿಕಲರು ಎಂದು ಸೇವಾ ಪುಸ್ತಕದಲ್ಲಿ ಮೊದಲು ನಮೂದಿಸಬೇಕು. ಎಚ್ಆರ್ಎಂಎಸ್, ಇಎಂಐಎಸ್ ಮತ್ತು ಆರೋಗ್ಯ ಸಂಜೀವಿನಿ ಯೋಜನೆಯಲ್ಲಿ ಘೋಷಿಸಿಕೊಂಡಿರಬೇಕು. ಒಮ್ಮೆಯೂ ವೈದ್ಯಕೀಯ ತಪಾಸಣೆಗೆ ಒಳಪಡದೆ, ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರಗಳನ್ನು ಮಾನ್ಯ ಮಾಡಿ ಅವಲಂಬಿತ ಅಂಗವಿಕಲರು ಇರುವ ಬೋಧಕರನ್ನು ವರ್ಗಾವಣೆ ಅಥವಾ ವಿನಾಯಿತಿಗೆ ಪರಿಗಣಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರತಿಕ್ರಿಯೆ ಪಡೆಯಲು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಎನ್. ಮಂಜುಶ್ರೀ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

‘ಪ್ರತ್ಯೇಕ ವರ್ಗಾವಣೆ ಪಟ್ಟಿ ಮಾಡಬೇಕು’

‘ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಉಲ್ಲಂಘನೆಗಳನ್ನು ಸರಿಪಡಿಸಲು ಕಡ್ಡಾಯವಾಗಿ ಅಂಗವಿಕಲರ ಸಮಿತಿಯೊಂದನ್ನು ಹೊಂದಲೇಬೇಕು. ನೈಜ ಅಂಗವಿಕಲರಿಗೆ ವರ್ಗಾವಣೆಯಲ್ಲಿ ಪ್ರಾಶಸ್ತ್ಯ ನೀಡಬೇಕಾಗಿದೆ. ಹೀಗಾಗಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ, ತೀವ್ರತರದ ಅಂಗವೈಕಲ್ಯ (ಶೇ 75) ಹೊಂದಿರುವವರನ್ನು ಅಂಗವಿಕಲರೆಂದು ಘೋಷಿಸಿ, ವರ್ಗಾವಣೆ ಪಟ್ಟಿಯನ್ನು ಪ್ರತ್ಯೇಕವಾಗಿ ಮಾಡಬೇಕು. ನಕಲಿ ಅಂಗವಿಕಲರೆಂದು ಕಂಡುಬಂದ ಪ್ರಾಧ್ಯಾಪಕರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ನಿಯಮಾನುಸಾರ ಶಿಕ್ಷೆ ವಿಧಿಸಲು ಕ್ರಮ ತೆಗೆದುಕೊಳ್ಳಬೇಕು. ಏಳು ದಿನಗಳಲ್ಲಿ ಈ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ದಾಸ್ ಸೂರ್ಯವಂಶಿ ಸೂಚನೆ ನೀಡಿದ್ದಾರೆ.

ನಕಲಿ ಪ್ರಮಾಣಪತ್ರ: ತಪಾಸಣೆಗೆ ತಂಡ

ದೂರು ಸ್ವೀಕರಿಸಿದ್ದ ಕೆಇಎ, ವಿದ್ಯಾರ್ಥಿಗಳ ಅಂಗವೈಕಲ್ಯ ಕುರಿತು ತಜ್ಞ ವೈದ್ಯರಿಂದ ಪರಿಶೀಲಿಸಿ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಪತ್ರ ಬರೆದಿತ್ತು. ‘ವಿದ್ಯಾರ್ಥಿ ಪೋಷಕರ ಸಂಘಟನೆಯೊಂದು ಸಲ್ಲಿಸಿದ ವಿದ್ಯಾರ್ಥಿಗಳ ಆರೋಗ್ಯದ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ಪರೀಕ್ಷಾ ಪ್ರಾಧಿಕಾರ ನಿರ್ದೇಶನಾಲಯಕ್ಕೆ ಕಳುಹಿಸಿದೆ. ಅವರು ಸಲ್ಲಿಸಿದ ದಾಖಲೆಗಳಲ್ಲಿರುವ ಅಂಗವೈಕಲ್ಯದ ಸ್ವರೂಪದ ಆಧಾರದಲ್ಲಿ ತಪಾಸಣೆ ನಡೆಸಲು ಜಯದೇವ ಆಸ್ಪತ್ರೆ ಸೇರಿದಂತೆ ವಿವಿಧ ತಜ್ಞರನ್ನು ಒಳಗೊಂಡ ತಂಡ ರಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದರು.

ಎನ್ಆರ್ಐನಲ್ಲೂ ನಕಲಿ ಕೋಟಾ: ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳಲ್ಲಿ ಶೇ 15ರಷ್ಟು ಅನಿವಾಸಿ ಭಾರತೀಯರ ಕೋಟಾಕ್ಕೆ (ಎನ್ಆರ್ಐ) ಮೀಸಲಿಡಲಾಗಿದೆ. ಆದರೆ, ಸಾಕಷ್ಟು ಸೀಟುಗಳು ಉಳಿಕೆಯಾಗುತ್ತಿರುವ ಕಾರಣ ಹಲವು ಮಧ್ಯವರ್ತಿಗಳು ವಿದ್ಯಾರ್ಥಿಗಳಿಗೆ ನಕಲಿ ಎನ್ಆರ್ಐ ಪ್ರಮಾಣಪತ್ರ ನೀಡಿ, ವಿವಿಧ ಕಾಲೇಜುಗಳಿಗೆ ಪ್ರವೇಶ ಪಡೆಯಲು ನೆರವಾಗುತ್ತಿದ್ದಾರೆ. ಇಂತಹ ಒಂದು ಪ್ರಕರಣ ಕಳೆದ ವಾರ ಪತ್ತೆಯಾಗಿದ್ದು, ನಕಲಿ ಎನ್ಆರ್ಐ ಪ್ರಮಾಣಪತ್ರ ಒದಗಿಸಿದ ಮಧ್ಯವರ್ತಿ ವಿರುದ್ಧ ಕೆಇಎ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.