ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ದುರ್ಭಾವನಾ ರೋಗ ಮಹಾಪಾಪ: ಹೈಕೋರ್ಟ್‌

Published 8 ಫೆಬ್ರುವರಿ 2024, 16:17 IST
Last Updated 8 ಫೆಬ್ರುವರಿ 2024, 16:17 IST
ಅಕ್ಷರ ಗಾತ್ರ

ಬೆಂಗಳೂರು: ‘ಕೌಟುಂಬಿಕ ವ್ಯಾಜ್ಯಗಳಲ್ಲಿ ಪತಿ–ಪತ್ನಿ, ಹತ್ತಿರದ ಪೋಷಕರು ಕಾನೂನು ಪರಿಹಾರ ಪಡೆಯುವ ಭರದಲ್ಲಿ ಮತ್ತು ಎದುರಾಳಿಯನ್ನು ಸಂಕಟಕ್ಕೀಡು ಮಾಡುವ ಉಮೇದಿನಲ್ಲಿ ಮಕ್ಕಳನ್ನೂ ವ್ಯಾಜ್ಯದ ಭಾಗವಾಗಿಸುತ್ತಿರುವ ಬೆಳವಣಿಗೆ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಪೋಷಕರ ಇಂತಹ ದುರ್ಭಾವನಾ ರೋಗ ಮಹಾಪಾಪ’ ಎಂದು ಬಣ್ಣಿಸಿದೆ.

ಪತಿ–ಪತ್ನಿ ಮಧ್ಯದ ವ್ಯಾಜ್ಯವೊಂದರಲ್ಲಿ ಪುತ್ರಿಯ ಮೇಲಿನ ಲೈಂಗಿಕ ದೌರ್ಜನ್ಯದ ಸುಳ್ಳು ಪ್ರಕರಣವನ್ನು ರದ್ದುಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಜಗಳಗಳನ್ನು ಮುಂದುವರಿಸಲು ಮತ್ತು ಪರಸ್ಪರ ಸೇಡು, ದ್ವೇಷ ತೀರಿಸಿಕೊಳ್ಳುವ ಜಿದ್ದಿಗೆ ಬಿದ್ದ ಪೋಷಕರು ತಮ್ಮ ಸ್ವಂತ ಮಕ್ಕಳನ್ನೇ ಲೈಂಗಿಕ ಅಕ್ರಮಣದ ಆರೋಪಗಳಿಗೆ ಈಡು ಮಾಡುವುದು ನಿಜಕ್ಕೂ ಆಘಾತಕಾರಿ‘ ಎಂದು ನ್ಯಾಯಪೀಠ ಹೇಳಿದೆ.

‘ಇಂತಹ ಆರೋಪಗಳಿಂದ ಮಗುವಿನ ಮನಸ್ಸಿನ ಮೇಲೆ ಎಂತಹ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಊಹಿಸಲೂ ಆಗದು. ಹೀಗಾಗಿ, ಇಂತಹ ಆರೋಪಗಳನ್ನು ಮಾಡುವ ಮುನ್ನ ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಪಾದನೆ ನಿಜವೇ ಆಗಿದ್ದಲ್ಲಿ ಕಾನೂನು, ತನ್ನ ಪಾತ್ರ ಏನಿದೆಯೋ ಅದನ್ನು ನಿರ್ವಹಿಸಿಯೇ ತೀರುತ್ತದೆ. ಆದರೆ, ಅದನ್ನು ಮಗುವಿನ ಪಾಲನೆಯ ಉದ್ದೇಶಕ್ಕಾಗಿ ಸುಳ್ಳಾಗಿ ಬಳಸಿದರೆ ಪೋಷಕರು ಇದಕ್ಕಿಂತಲೂ ಮಾಡಬಹುದಾದ ದೊಡ್ಡ ಪಾಪ ಮತ್ತೊಂದಿಲ್ಲ‘ ಎಂದು ವೇದನೆ ವ್ಯಕ್ತಪಡಿಸಿದೆ.

ಪ್ರಕರಣವೇನು?: ಪ್ರಕರಣದಲ್ಲಿನ ಪತಿ–ಪತ್ನಿ 2007ರ ಏಪ್ರಿಲ್‌ 26ರಂದು ಮದುವೆಯಾದರು. 2008ರಲ್ಲಿ ಹೆಣ್ಣು ಮಗು ಜನಿಸಿತ್ತು. 2017ರಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿದ ಪರಿಣಾಮ ಕೌಟುಂಬಿಕ ವ್ಯಾಜ್ಯ ಆರಂಭವಾಗಿತ್ತು. ಹೆಣ್ಣು ಮಗುವಿನ ಸುಪರ್ದಿಗೆ ಸಂಬಂಧಿಸಿದಂತೆ ಉದ್ಭವಿಸಿದ ಕಾನೂನು ಸಂಘರ್ಷದಲ್ಲಿ ಬಾಲಕಿಯ ತಾಯಿಯ ಮೂರನೇ ಮತ್ತು ಸದ್ಯ ಪತಿಯಾಗಿರುವವರ ವಿರುದ್ಧ ಪೋಕ್ಸೊ ಮತ್ತು ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು. 38 ವರ್ಷದ ಅರ್ಜಿದಾರ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT