ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನ | ಪತಿ ನಿಧನರಾದರೂ ವಿಚಾರಣೆಗೆ ಭಗ್ನವಿಲ್ಲ: ಹೈಕೋರ್ಟ್

Published 24 ಮೇ 2024, 15:23 IST
Last Updated 24 ಮೇ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ‘ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಛೇದನ ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಬಾಕಿ ಇದ್ದಾಗ ಪತಿ ಸಾವನ್ನಪ್ಪಿದರೆ ಅಂತಹ ಸಂದರ್ಭಗಳಲ್ಲಿ ನ್ಯಾಯಿಕ ವಿಚಾರಣಾ ಪ್ರಕ್ರಿಯೆ ರದ್ದಾಗದು’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಸಂಬಂಧ ಪ್ರಕರಣವೊಂದರಲ್ಲಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ರದ್ದುಗೊಳಿಸಿದೆ.

‘ಪತಿ ನಿಧನರಾಗಿದ್ದರೂ ಪತ್ನಿ ವಿಧವೆಯಾಗುವುದರಿಂದ ಕಾನೂನು ಪ್ರಕಾರ ಅವರಿಗೆ ಸೇರಬೇಕಾದ ಸವಲತ್ತುಗಳು ಸೇರಬೇಕಾಗುತ್ತದೆ. ಪತಿಯ ಆಸ್ತಿಯಲ್ಲಿ ಬರಬೇಕಾದ ಪರಿಹಾರ ಮತ್ತು ಅನುಕಂಪದ ಹುದ್ದೆಗೆ ಪತ್ನಿಯನ್ನು ಪರಿಗಣಿಸಬೇಕಾಗುತ್ತದೆ’ ಎಂದು ಆದೇಶಿಸಿದೆ.

‘ಮೇಲ್ಮನವಿ ಬಾಕಿ ಇದ್ದಾಗ ಪತಿ ನಿಧನರಾದರೂ ಅದರ ಪರಿಣಾಮ ಪ್ರಕರಣದ ಮೇಲಾಗುತ್ತದೆ. ಪತ್ನಿಯ ಸ್ಥಾನಮಾನ ಅವರ ಹಕ್ಕುಗಳನ್ನು ಆಧರಿಸುತ್ತದೆ. ಹಾಗಾಗಿ, ಯಲ್ಲವ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಂತೆ ಕೌಟುಂಬಿಕ ವ್ಯಾಜ್ಯಗಳಲ್ಲಿ ಒಬ್ಬ ವ್ಯಾಜ್ಯಕರ್ತರು (ಪತಿ-ಪತ್ನಿ) ಮೃತಪಟ್ಟರೆ ಪ್ರಕರಣ ರದ್ದಾಗದು’ ಎಂದು ವಿವರಿಸಿದೆ.

‘ವಿವಾಹ ವಿಚ್ಛೇದನ ಮಂಜೂರು ಮಾಡಲು ಕೌಟುಂಬಿಕ ಕ್ರೌರ್ಯ ಎಂಬುದನ್ನು ಸಾಬೀತುಪಡಿಸಬೇಕಿದೆ. ಆದರೆ, ಈ ಪ್ರಕರಣದಲ್ಲಿ ಅದು ಸಾಬೀತಾಗಿಲ್ಲ. ಆದರೂ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿರುವುದು ಸರಿಯಲ್ಲ’ ಎಂದು‌ ನ್ಯಾಯಪೀಠ ಹೇಳಿದೆ.

ಪ್ರಕರಣವೇನು?:

ದಂಪತಿ 2002ರ ಏಪ್ರಿಲ್ 19ರಂದು ವಿವಾಹವಾಗಿದ್ದರು. ಮದುವೆಯಾದ 10 ತಿಂಗಳ ನಂತರ ಉಂಟಾದ ಕೌಟುಂಬಿಕ ಕಲಹದ ಪರಿಣಾಮ 2005ರಲ್ಲಿ ಪತ್ನಿ ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜೀವನಾಂಶ ನೀಡಲು ಆದೇಶಿಸಿತ್ತು.

ಏತನ್ಮಧ್ಯೆ, ಪತಿ 2007ರಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರು ಜೀವನಾಂಶ ಪಾವತಿಸದ ಕಾರಣ ಆ ಅರ್ಜಿ ವಜಾಗೊಂಡಿತ್ತು.

2015ರಲ್ಲಿ ಪತಿ ಪುನಃ ಅರ್ಜಿ ಸಲ್ಲಿಸಿದ್ದಾಗ ನ್ಯಾಯಾಲಯ ಕ್ರೌರ್ಯದ ಆಧಾರದಡಿ ವಿಚ್ಛೇದನದ ಡಿಕ್ರಿ ಮಂಜೂರು ಮಾಡಿತ್ತು.

ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ಬಾಕಿ ಇದ್ದಾಗ ಪತಿ 2022ರಲ್ಲಿ ನಿಧನರಾಗಿದ್ದರು. ‘ನನ್ನ ಪತಿ ಅಕೌಂಟೆಂಟ್‌ ಜನರಲ್‌ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ನಿವೃತ್ತಿ ಭತ್ಯೆ ಹಾಗೂ ಅನುಕುಂಪದ ಉದ್ಯೋಗ ಸೇರಿ ಕಾನೂನಾತ್ಮಕ ಪರಿಹಾರಗಳು ನನಗೆ ದೊರಕಬೇಕು. ಹಾಗಾಗಿ, ಕೌಟುಂಬಿಕ ನ್ಯಾಯಾಲಯ ನೀಡಿರುವ ವಿಚ್ಛೇದನದ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT