ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಗೊಬ್ಬರದ ಗೋದಾಮಿನ ಕಲುಷಿತ ನೀರು; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Published 22 ನವೆಂಬರ್ 2023, 16:07 IST
Last Updated 22 ನವೆಂಬರ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಹುಬ್ಬರವಾಡಿಯಲ್ಲಿರುವ, ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯ  ಗೊಬ್ಬರದ ಗೋದಾಮಿಗೆ ಹೊಂದಿಕೊಂಡಿರುವ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಕೊಳವೆ ಬಾವಿ ನೀರು ಕಲುಷಿತಗೊಳ್ಳುತ್ತಿದೆ‘ ಎಂದು ಆಕ್ಷೇಪಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಸ್ಥಳೀಯ ನಿವಾಸಿ ಪಾಂಡುರಂಗ ಮಹದೇವ ಕಾಂಬ್ಳೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ಆರ್. ಹರೀಶ್ ವಾದ ಆಲಿಸಿದ ನ್ಯಾಯಪೀಠ, ’ಇದೊಂದು ಗಂಭೀರ ವಿಚಾರ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯದರ್ಶಿ, ರಾಯಬಾಗ ತಹಶೀಲ್ದಾರ್ ಹಾಗೂ ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ ನ್ಯಾಯಪೀಠ, 2024ರ ಜನವರಿ 8ಕ್ಕೆ ವಿಚಾರಣೆ ಮುಂದೂಡಿತು.

ಅರ್ಜಿಯಲ್ಲಿ ಏನಿದೆ?: ‘ಹುಬ್ಬರವಾಡಿ ಗ್ರಾಮದಲ್ಲಿ ಗಂಗಾ ಕಾವೇರಿ ಗೋದಾವರಿ ಫರ್ಟಿಲೈಸರ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯ ರಾಸಾಯನಿಕ ಗೊಬ್ಬರದ ಗೋದಾಮು ಏಳು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತದೆ. ಈ ಗೋದಾಮಿನ ಕಾಂಪೌಂಡ್‌ಗೆ ಹೊಂದಿಕೊಂಡು ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಇದೆ. ಇದರಲ್ಲಿ 500 ಮಕ್ಕಳು ಕಲಿಯುತ್ತಿದ್ದಾರೆ. ಗೋದಾಮಿನ ಹತ್ತಿರವೇ ಸಾರ್ವಜನಿಕ ಕೊಳವೆ ಬಾವಿಯೂ ಇದೆ. ಹುಬ್ಬರವಾಡಿ ಮತ್ತು ಶಾಲೆಗೆ ಇದುವೇ ಏಕೈಕ ನೀರಿನ ಮೂಲ‘ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

‘ಗೋದಾಮಿಗೆ ಪ್ರತಿನಿತ್ಯ 40 ರಿಂದ 50ರಷ್ಟು ಭಾರಿ ಸರಕು ವಾಹನಗಳು ಬಂದು ಹೋಗುತ್ತವೆ. ಹೀಗಾಗಿ, ಗೋದಾಮಿನ ಆವರಣದಲ್ಲಿ ರಾಸಾಯನಿಕ ಹರಡುವುದರಿಂದ ಗೋದಾಮಿನಲ್ಲಿ ಬಳಸುವ ಮತ್ತು ಲಾರಿ ಚಾಲಕರು ಸ್ನಾನ ಮಾಡುವ ನೀರಿನೊಂದಿಗೆ ಸ್ಥಳದಲ್ಲಿನ ರಾಸಾಯನಿಕವು ಕೊಳವೆ ಬಾವಿಯ ನೀರನ್ನು ಸೇರುತ್ತಿದೆ. ಈ ಸಂಬಂಧ ಸ್ಥಳೀಯ ಆಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ‘ ಎಂದು ಅರ್ಜಿಯಲ್ಲಿ ದೂರಲಾಗಿದೆ. ‘ಅರ್ಜಿ ವಿಚಾರಣೆ ಮುಗಿಯುವ ತನಕ ಗೋದಾಮಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲು ನಿರ್ದೇಶಿಸಬೇಕು‘ ಎಂದು ಮಧ್ಯಂತರ ಮನವಿ ಮಾಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT