ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ನಗರದ 16,296 ಪೊಲೀಸರು ಸದೃಢರಲ್ಲ

ವಾರದ ರಜೆ ಕಡ್ಡಾಯ ಸೇರಿದಂತೆ ಹಲವು ಸುಧಾರಣಾ ಕ್ರಮ ಜಾರಿ
ಚೇತನ್‌. ಬಿ.ಸಿ
Published 23 ಮೇ 2024, 0:54 IST
Last Updated 23 ಮೇ 2024, 0:54 IST
ಅಕ್ಷರ ಗಾತ್ರ

ಬೆಂಗಳೂರು: ದೈಹಿಕ ಸದೃಢತೆ ಕಾಪಾಡಿಕೊಳ್ಳುವಲ್ಲಿ ಬೆಂಗಳೂರು ನಗರದ 16,296 ಪೊಲೀಸರು ವಿಫಲರಾಗಿದ್ದಾರೆ. ಅಂಥವರನ್ನು ಮತ್ತೆ ಸರಿದಾರಿಗೆ ತರಲು ಹಲವು ಕಾರ್ಯಸೂಚಿಗಳನ್ನು ಪೊಲೀಸ್ ಇಲಾಖೆ ರೂಪಿಸುತ್ತಿದೆ. 

‘ಅನಿಶ್ಚಿತ ಕೆಲಸದ ಸಮಯ, ದೋಷಪೂರಿತ ಆಹಾರ ಪದ್ಧತಿ, ತೀವ್ರ ಒತ್ತಡ ಮತ್ತು ಉತ್ತಮವಲ್ಲದ ಜೀವನಶೈಲಿಗಳೇ ಈ ಪರಿಸ್ಥಿತಿಗೆ ಕಾರಣ. ಶೇ 15ರಿಂದ 20ರಷ್ಟು ಹುದ್ದೆಗಳು ಖಾಲಿ ಇರುವ ಕಾರಣ ಈಗಿರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಬಹುತೇಕ ಪೊಲೀಸರು ಸಾಮಾನ್ಯವಾಗಿ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿ ಕೆಲಸ ಮಾಡುತ್ತಾರೆ. ಇದು ಮಾನಸಿಕ ಸಮಸ್ಯೆಗಳಿಗೂ ದಾರಿ ಮಾಡಿಕೊಟ್ಟಿದೆ’ ಎನ್ನುತ್ತಾರೆ ನಗರ ಪೊಲೀಸ್‌ ಕಮಿಷನರ್ ಬಿ. ದಯಾನಂದ್‌.

‘ಅಪಘಾತ, ಕೊಲೆಗಳು ನಡೆದಾಗ, ಬಂದೋಬಸ್ತ್‌ ಮತ್ತಿತರ ಪ್ರಕರಣಗಳಲ್ಲಿ ಪೊಲೀಸರು ಪಾಳಿಯ ಸಮಯವನ್ನು ಲೆಕ್ಕಿಸದೇ ಕೆಲಸ ಮಾಡುತ್ತಾರೆ. ಸಂಘಟಕರು ಕೊಟ್ಟ ಆಹಾರ ಸೇವಿಸುತ್ತಾರೆ. ಎಷ್ಟೋ ಬಾರಿ ಆಹಾರ ಕಳಪೆಯಾಗಿರುತ್ತದೆ. ಹಸಿವಿನ ನಿವಾರಣೆಗಾಗಿ ಕೆಲವು ಬಾರಿ ತಕ್ಷಣಕ್ಕೆ ಸಿಗುವ ಜಂಕ್‌ಫುಡ್‌ ಸೇವಿಸುತ್ತಾರೆ. ರಾತ್ರಿ ಪಾಳಿಯಲ್ಲೂ ದುಡಿಯಬೇಕಾಗುತ್ತದೆ. ಬಿಡುವು ಸಿಕ್ಕಾಗ ಒತ್ತಡ ನಿವಾರಣೆಗಾಗಿ ಕೆಲ ಪೊಲೀಸರು ಮದ್ಯದ ಮೊರೆ ಹೋಗುತ್ತಾರೆ. ಇವೆಲ್ಲವೂ ಸ್ಥೂಲಕಾಯ ಹೆಚ್ಚಾಗಲು ದಾರಿ ಮಾಡಿಕೊಡುತ್ತದೆ’ ಎಂದು ಅವರು ವಿವರಿಸಿದರು.

‘ಬಿಎಂಐ ನಿರ್ವಹಣೆ ಮಾಡದ ಪೊಲೀಸರು ದೈಹಿಕ ಸದೃಢತೆಗೆ ಮರಳಬೇಕು. ಇಲ್ಲವೇ, ಕಡ್ಡಾಯ ನಿವೃತ್ತಿ ಪಡೆಯಬೇಕು ಎಂದು ಅಸ್ಸಾಂ ಸರ್ಕಾರ 2023ರಲ್ಲಿ ನಿಯಮ ರೂಪಿಸಿದೆ. ಇದರಿಂದ ಪೊಲೀಸರ ಕುಟುಂಬಕ್ಕೆ ಜೀವನ ಭದ್ರತೆ ಇಲ್ಲವಾಗುತ್ತದೆ. ಹಾಗಾಗಿ, ರಾಜ್ಯದಲ್ಲಿ ಅಂತಹ ಕ್ರಮ ಕೈಗೊಳ್ಳುವ ಆಲೋಚನೆ ಇಲ್ಲ. ಶಿಕ್ಷೆ ಎಂದಿಗೂ ಸಮಸ್ಯೆಗೆ ಪರಿಹಾರವಲ್ಲ’ ಎಂದು ದಯಾನಂದ ಹೇಳಿದರು.

‘ಸ್ಥೂಲಕಾಯ ಹೆಚ್ಚಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಕೆಲ ಅಧಿಕಾರಿಗಳು ವಯಸ್ಸಾದಂತೆ ಮಾನಸಿಕ ಆರೋಗ್ಯದ ಸಮಸ್ಯೆಗೂ ಒಳಗಾಗುತ್ತಾರೆ. ಅಂಥವರಿಗೆ ಸೂಕ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಬೇಕು. ಕೆಲಸದ ಮಧ್ಯೆಯೂ ನಿಯಮಿತ ವ್ಯಾಯಾಮಕ್ಕೆ ಅವಕಾಶ ಕಲ್ಪಿಸಬೇಕು. ಇಂತಹ ಸಾಧ್ಯತೆಗಳನ್ನು ಜಾರಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ’ ಎನ್ನುತ್ತಾರೆ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ರಮಣ್‌ ಗುಪ್ತ.

ಜೀವನಶೈಲಿ ಸರಿದಾರಿಯಲ್ಲಿ ಸಾಗಲು ಅನುಕೂಲವಾಗುವಂತೆ ಕೆಲಸದ ಹೊಂದಾಣಿಕೆ. ಮದ್ಯಪಾನ ತಡೆಗಟ್ಟಲು ಕೌನ್ಸೆಲಿಂಗ್‌. ಕೆಲಸದ ಒತ್ತಡ ಕಡಿಮೆ ಮಾಡಲು ವಾರದ ರಜೆ ಕಡ್ಡಾಯ. ವಾರದ ರಜೆಯ ದಿನ ಕೆಲಸ ಮಾಡಿದರೆ ಮರು ದಿನವೇ ಪಡೆಯಲೇಬೇಕು ಎಂಬ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಗರ ಪೊಲೀಸ್‌ ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕುರಿತು ಪ್ರತಿ ವಾರ ವರದಿ ಒಪ್ಪಿಸಲು ಸೂಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT