ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರಕ್ಕೆ ಹೆಚ್ಚಿನ ಹಣ ಕೇಳಿದರೆ ಪ್ರಶ್ನಿಸಿ: ಆಹಾರ ಸಚಿವ ಕೆ.ಗೋಪಾಲಯ್ಯ ಸಲಹೆ

ನಿಗದಿಗಿಂತ ಕಡಿಮೆ ಪ್ರಮಾಣದ ಅಕ್ಕಿ ವಿತರಣೆಯ ಆರೋಪ:
Last Updated 18 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು:ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹೇರಿರುವ ಲಾಕ್‌ಡೌನ್ ಸಂದರ್ಭದಲ್ಲೂ ನ್ಯಾಯಬೆಲೆ ಅಂಗಡಿಯಲ್ಲಿ ನಿಗದಿಗಿಂತ ಕಡಿಮೆ ಪ್ರಮಾಣದ ಅಕ್ಕಿ ವಿತರಿಸುವುದು, ಹಣ ಪಡೆಯುವುದು ನಿಂತಿಲ್ಲ. ಈ ರೀತಿಯ ಹಲವು ಸಮಸ್ಯೆಗಳನ್ನು ‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಗೋಪಾಲಯ್ಯ ಅವರ ಗಮನಕ್ಕೆ ಜನ ತಂದರು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ಸಚಿವರು ಸಂದೇಹ ನಿವಾರಿಸುವ ಪ್ರಯತ್ನ ಮಾಡಿದರು.

*ಬಿಪಿಎಲ್ ಕಾರ್ಡ್‌ ಇದ್ದದ್ದು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯಾಗಿದೆ. ಕೊರೊನಾ ಸಂದರ್ಭದಲ್ಲಿ ಅಕ್ಕಿಯೂ ಸಿಗದಂತಾಗಿದೆ.

–ಹೂವಣ್ಣ, ಮದಘಟ್ಟ, ಬೇಲೂರು ತಾಲ್ಲೂಕು, ಹಾಸನ ಜಿಲ್ಲೆ.

ಆಹಾರ ಸಚಿವ ಕೆ.ಗೋಪಾಲಯ್ಯ:ಸ್ವಂತ ಕಾರು ಇದ್ದರೆ ಅದು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುತ್ತದೆ. ಪಡಿತರ ಚೀಟಿಗೂ ಆಧಾರ್ ಕಾರ್ಡ್‌ ಲಿಂಕ್ ಆಗಿದ್ದು, ಕಾರ್ ಮಾಲೀಕರಾದ ಕೂಡಲೇ ಬಿಪಿಎಲ್ ಕಾರ್ಡ್‌ ತಾನಾಗಿಯೇ ರದ್ದಾಗಲಿದೆ. ಅವರಿಗೆ ಎಪಿಎಲ್ ಕಾರ್ಡ್‌ ವಿತರಿಸಲಾಗುತ್ತದೆ.

* ಹೊಸದಾಗಿ ಬಿಪಿಎಲ್ ಕಾರ್ಡ್‌ ಪಡೆ ಯಲು ಅರ್ಜಿ ಸಲ್ಲಿಸಿ 7 ತಿಂಗಳಾಗಿದೆ. ಈವರೆಗೆ ಕಾರ್ಡ್ ಸಿಕ್ಕಿಲ್ಲ?

– ಮಂಜು, ಶಿರಾ, ತುಮಕೂರು ಜಿಲ್ಲೆ. ಆಂಜನೇಯ, ರಾಮಮೂರ್ತಿನಗರ, ಬೆಂಗಳೂರು.ಯಧುಕುಮಾರ್, ಮೈಸೂರು. ಸುಜಾತಾ ಸೋಮವಾರಪೇಟೆ.

ಸಚಿವ: ಕೊರೊನಾ ಸೋಂಕು ಹರ ಡಿರುವ ಕಾರಣ ಹೊಸ ಕಾರ್ಡ್ ವಿತರಣೆ ಯನ್ನು ‌ಸ್ಥಗಿತಗೊಳಿಸಲಾಗಿದೆ. ಆದರೆ, ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ ದಾಖಲೆ ತೋರಿಸಿ ತಿಂಗಳಿಗೆ 10 ಕೆ.ಜಿ.ಯಂತೆ ಮೂರು ತಿಂಗಳು ಉಚಿತವಾಗಿ ಅಕ್ಕಿ ಪಡೆಯಬಹುದು.

* ಬಿಪಿಎಲ್ ಕಾರ್ಡ್‌ ಕಳೆದುಹೋಗಿದ್ದ ಕಾರಣ ಮೂರು ತಿಂಗಳು ಅಕ್ಕಿ ಪಡೆಯಲಿಲ್ಲ. ಬಿಪಿಎಲ್‌ ಕಾರ್ಡ್ ರದ್ದುಪಡಿಸಲಾಗಿದೆ.

–ರಮೇಶ್, ಹಾಸನ.

ಸಚಿವ: ಮೂರು ತಿಂಗಳ ಕಾಲ ಅಕ್ಕಿ ಪಡೆಯದೇ ಇದ್ದರೆ ಕಾರ್ಡ್ ತಾನಾಗಿಯೇ ರದ್ದಾಗುತ್ತದೆ.

* ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಮುಗಿದು ಹೋಗಿದೆ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಹಣ ಕೊಟ್ಟವರಿಗೆ ಅಕ್ಕಿ ವಿತರಿಸುತ್ತಿದ್ದಾರೆ.

–ರಾಜಕುಮಾರ್, ಬೀದರ್. ಸುರೇಶ್, ಲಿಂಗಸಗೂರು. ಮನೋಜ್, ಚಿಕ್ಕಮಗಳೂರು

ಸಚಿವ: ಸರ್ಕಾರ ಬಡವರಿಗೆ ಉಚಿತ ವಾಗಿ ಪಡಿತರ ವಿತರಿಸುತ್ತಿದೆ. ನ್ಯಾಯ ಬೆಲೆ ಅಂಗಡಿಯಲ್ಲಿ ಹಣ ಕೇಳುವಂತಿಲ್ಲ. ಪಡಿತರ ಉಚಿತವಾಗಿ ಪಡೆಯುವುದು ನಿಮ್ಮ ಹಕ್ಕು. ಊರಿನವರೇ ಐದಾರು ಮಂದಿ ಒಟ್ಟಾಗಿ ಹಣ ಕೇಳಿದವರ ವಿರುದ್ಧ ಪ್ರತಿಭಟನೆ ಮಾಡಿ. ಆಗಲೇ ಸಮಸ್ಯೆ ಪರಿಹಾರವಾಗುವುದು. ನಿರ್ದಿಷ್ಟ ದೂರುಗಳು ಬಂದರೆ ತನಿಖೆ ನಡೆಸಿಪರವಾನಗಿ ರದ್ದುಪಡಿಸಲಾಗುವುದು.

* ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರು ಅಲ್ಲಲ್ಲಿ ಇದ್ದಾರೆ. ಅವರಿಗೆ ಆಹಾರದ ಸಮಸ್ಯೆ ಇದೆ.

–ಮಧುಕುಮಾರ್, ಬೆಸಗರಹಳ್ಳಿ, ಮಂಡ್ಯ ಜಿಲ್ಲೆ. ಪ್ರಕಾಶ್, ಗದಗ

ಸಚಿವ: ವಲಸೆ ಕಾರ್ಮಿಕರಿಗೆ ಆಹಾರದ ಸಮಸ್ಯೆ ಎದುರಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸಮಸ್ಯೆ ಕಂಡು ಬಂದರೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು.

* ಆಹಾರ ಇಲಾಖೆ ಅಧಿಕಾರಿಗಳೇ ನ್ಯಾಯಬೆಲೆ ಅಂಗಡಿ ಮಾಲೀಕ ರೊಂದಿಗೆ ಶಾಮೀಲಾಗಿ ಅಕ್ರಮ ನಡೆಸುತ್ತಾರೆ.

-ರಾಜೇಶ್, ಮೈಸೂರು

ಸಚಿವ: ಈ ರೀತಿ ದೂರುಗಳಿರುವ ಮೈಸೂರಿನ 10 ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತುಗೊಳಿಸಲಾಗಿದೆ.

* ಬೆಂಗಳೂರಿನಲ್ಲಿ ವಾಸವಿರುವ ನಾನು ಲಾಕ್‌ಡೌನ್ ಕಾರಣಕ್ಕೆ ಬೇರೆ ಊರಿನಲ್ಲಿ ಇದ್ದೇನೆ. ಬೆಂಗಳೂರಿನ‌ಲ್ಲೇ ಪಡಿತರ ಪಡೆಯಬೇಕು ಎಂದು ನ್ಯಾಯಬೆಲೆ ಅಂಗಡಿಯವರು ಹೇಳುತ್ತಿದ್ದಾರೆ

–ವಸಂತಕುಮಾರ್, ಶಿರಾ,‍ಪುಷ್ಪಾಂಜಲಿ, ನಾಯಂಡಹಳ್ಳಿ

ಸಚಿವ: ಯಾವುದೇ ಜಿಲ್ಲೆಯ ಪಡಿತರ ಚೀಟಿ ಇದ್ದರೂ ದಿನಸಿ ವಿತರಣೆ ಮಾಡಲೇಬೇಕು.

* ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಹಾಕಿದ್ದೇನೆ. ಮಾಡಿಸಿಕೊಡಲು ₹3 ಸಾವಿರ ಲಂಚ ಕೇಳುತ್ತಿದ್ದಾರೆ.

–ಅಶ್ವಿನಿ, ಬೆಂಗಳೂರು

ಸಚಿವ: ಪಡಿತರ ಚೀಟಿ ಪಡೆಯಲು ಯಾರಿಗೂ ಲಂಚ ಕೊಡಬೇಕಾಗಿಲ್ಲ.

***

ಸ್ಯಾಂಡಲ್‌ ಸೋಪ್‌ ಪರಿಮಳ

ಕೊರೊನಾ ಸೋಂಕು ನಾಡಿಗೆ ವಕ್ಕರಿಸದೆ ಇರುತ್ತಿದ್ದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಇಂದು ಮೈಸೂರು ಸ್ಯಾಂಡಲ್‌ ಸೋಪಿನ ಪರಿಮಳ ಘಮಘಮಿಸುತ್ತಿತ್ತು. ಸಫಲ್‌ನಂತಹ ಅಡುಗೆ ಎಣ್ಣೆಯ ರುಚಿ ನಾಲಿಗೆಯಲ್ಲಿ ಹರಿದಾಡುತ್ತಿತ್ತು!

‘ನ್ಯಾಯಬೆಲೆ ಅಂಗಡಿಗಳಲ್ಲಿ ಜನರಿಗೆ ಗುಣಮಟ್ಟದ ಸಾಮಗ್ರಿಗಳನ್ನು ನೀಡುವ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ ಮೈಸೂರ್‌ ಸ್ಯಾಂಡಲ್‌ನಂತಹ ಉತ್ಪನ್ನಗಳೂ ಸೇರಿದ್ದವು. ಕೊರೊನಾದಿಂದಾಗಿ ಈ ಯೋಜನೆಗೆ ಕೊಂಚ ಹಿನ್ನಡೆ ಆಗಿದೆ ಅಷ್ಟೇ, ಮುಂದೆ ಖಂಡಿತ ಇದು ಅನುಷ್ಠಾನಕ್ಕೆ ಬರಲಿದೆ’ ಎಂದು ಸಚಿವ ಗೋಪಾಲಯ್ಯ ಹೇಳಿದರು.

14 ಸಮಸ್ಯೆಗಳಿಗೆ 3 ಗಂಟೆಯಲ್ಲೇ ಪರಿಹಾರ

ಫೋನ್‌ಇನ್‌ಗೆ ಕರೆ ಮಾಡಿ ಕಷ್ಟ ಹೇಳಿಕೊಂಡ 14 ಮಂದಿಗೆ ಕೇವಲ 3 ಗಂಟೆಯೊಳಗೆ ಪರಿಹಾರವೂ ದೊರಕಿತು. ಸಚಿವರು ಪ್ರತಿಯೊಬ್ಬರ ಫೋನ್ ನಂಬರ್‌ ಅನ್ನೂ ಗುರುತಿಸಿಕೊಂಡು, ತಕ್ಷಣ ಅವರನ್ನು ಉಪನಿರ್ದೇಶಕರ ಹಂತದ ಅಧಿಕಾರಿಗಳೇ ಸಂಪರ್ಕಿಸಿ ಸಮಸ್ಯೆ ಅರಿತುಕೊಳ್ಳುವಂತೆ ಮಾಡಿದರು.

‘ಲೋಡ್‌ ಬಾಳೆಹಣ್ಣು’

ಆಂಜನೇಯ ಎಂಬುವವರ 2 ಎಕರೆ ಹೊಲದಲ್ಲಿ ಬೆಳೆದ ಬಾಳೆಹಣ್ಣು ಮಾರಾಟವಾಗದೆ ಇರುವ ವಿಷಯ ತಿಳಿದು, ಅದನ್ನು ಮಹಾಲಕ್ಷ್ಮಿ ಲೇಔಟ್‌ಗೆ ತರಿಸಿಕೊಳ್ಳುವ ವ್ಯವಸ್ಥೆ ಮಾಡಿದರು.

ಅಕ್ರಮ ದಾಸ್ತಾನು–ಶಿಕ್ಷೆ

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಮಾಡುವ ಕೃತ್ಯ ನಡೆಯುತ್ತಿದ್ದು, ಇಂತಹ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಆಹಾರ ಇಲಾಖೆ ಮಗ್ನವಾಗಿದೆ. ಇದುವರೆಗೆ ₹ 64.95 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದೆ. 19 ಪ್ರಕರಣಗಳನ್ನು ಹಾಗೂ 14 ಎಫ್‌ಐಆರ್ ದಾಖಲಿಸಲಾಗಿದ್ದು, 34 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT