ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ಗೆ ಸುಧಾಮ್ ದಾಸ್: ನಾಲ್ವರು ಹಿರಿಯ ಸಚಿವರ ಆಕ್ಷೇಪ– ಹೈಕಮಾಂಡ್‌ಗೆ ‍ಪತ್ರ

ಪರಿಷತ್‌ಗೆ ಸುಧಾಮ್‌ ದಾಸ್‌ ನಾಮನಿರ್ದೇಶನ ವಿಷಯ
Published 18 ಆಗಸ್ಟ್ 2023, 13:22 IST
Last Updated 18 ಆಗಸ್ಟ್ 2023, 13:22 IST
ಅಕ್ಷರ ಗಾತ್ರ

ನವದೆಹಲಿ: ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್‌ ದಾಸ್‌ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರದ ನಾಲ್ವರು ಹಿರಿಯ ಸಚಿವರು ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್‌ ಹೈಕಮಾಂಡ್‌ಗೆ ‍ಪತ್ರ ಬರೆದಿದ್ದಾರೆ.  

ಗೃಹ ಸಚಿವ ಡಾ.ಜಿ.ಪರಮೇಶ್ವರ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ಸುಧಾಮ್‌ ದಾಸ್‌ ಹೆಸರನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. 

ಮಾಜಿ ಸಚಿವರಾದ ಉಮಾಶ್ರೀ, ಎಂ.ಆರ್‌. ಸೀತಾರಾಂ ಮತ್ತು ಸುಧಾಮ್‌ ದಾಸ್‌ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಈಗಾಗಲೇ ಒಪ್ಪಿಗೆ ನೀಡಿದೆ. ಉಮಾಶ್ರೀ ಅವರನ್ನು ಸಿನಿಮಾ ಕ್ಷೇತ್ರ, ಸೀತಾರಾಂ ಅವರನ್ನು ಶಿಕ್ಷಣ ಕ್ಷೇತ್ರ ಹಾಗೂ ಸುಧಾಮ್‌ ದಾಸ್‌ ಅವರನ್ನು ಸಮಾಜಸೇವೆ ಕ್ಷೇತ್ರದಿಂದ ನಾಮನಿರ್ದೇಶನಕ್ಕೆ ಆಯ್ಕೆ ಮಾಡಲಾಗಿದೆ.

‘ಜಾರಿ ನಿರ್ದೇಶನಾಲಯದ ಅಧಿಕಾರಿಯಾಗಿದ್ದ ಸುಧಾಮ್‌ ದಾಸ್‌ ಕೆಲವು ವರ್ಷಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಅವರನ್ನು ಕರ್ನಾಟಕ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಅವರು ಈ ವರ್ಷದ ಮಾರ್ಚ್‌ನಲ್ಲಿ ಮಾಹಿತಿ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರು ಪಕ್ಷಕ್ಕೆ ಹೊಸಬರು. ಪಕ್ಷ ಸಂಘಟನೆಯಲ್ಲಿ ಅವರ ಪಾತ್ರ ನಗಣ್ಯ ಎನ್ನಬಹುದು. ಅವರ ಹೆಸರನ್ನು ಮೇಲ್ಮನೆಗೆ ಪರಿಗಣಿಸುವುದಕ್ಕೆ ನಮ್ಮ ಬಲವಾದ ಆಕ್ಷೇಪವಿದೆ’ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ. 

‘ಪಕ್ಷದ ಸಂಘಟನೆಗಾಗಿ ಹಲವಾರು ವರ್ಷಗಳಿಂದ ದುಡಿದ ನಾಯಕರು ಸಾಕಷ್ಟು ಮಂದಿ ಇದ್ದಾರೆ. ಅವರನ್ನು ಪರಿಗಣಿಸಬೇಕು. ಒಂದು ವೇಳೆ ಅವಕಾಶ ನೀಡಿದರೆ ಅಂತಹವರ ಹೆಸರನ್ನು ಶಿಫಾರಸು ಮಾಡುತ್ತೇವೆ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ಇದು ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಆರ್‌.ಬಿ.ತಿಮ್ಮಾಪುರ ‘ಪ್ರಜಾವಾಣಿ’ಗೆ ತಿಳಿಸಿದರು. ಉಳಿದ ಸಚಿವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT