ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲಿಗೆ 617 ಎಕರೆ ಉಚಿತ ಭೂಮಿ

ರೈಲ್ವೆ ಸಚಿವ ಪೀಯುಷ್‌ ಗೋಯಲ್‌ ಘೋಷಣೆ: 19 ಷರತ್ತು ಸಡಿಲಿಕೆಗೆ ರಾಜ್ಯ ಸರ್ಕಾರ ಸಮ್ಮತಿ
Last Updated 22 ಫೆಬ್ರುವರಿ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆಗಾಗಿ ₹ 6 ಸಾವಿರ ಕೋಟಿ ಮೌಲ್ಯದ ಜಮೀನನ್ನು ರೈಲ್ವೆ ಇಲಾಖೆ ಉಚಿತವಾಗಿ ಒದಗಿಸಲಿದ್ದು, ಯೋಜನೆಯ ಅನುಷ್ಠಾನದಲ್ಲಿ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮ್ಮತಿಸಿವೆ.

ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಇದರಿಂದ ಮತ್ತೆ ಜೀವ ಬಂದಿದೆ.

ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಶುಕ್ರವಾರ ಚರ್ಚೆ ನಡೆಸಿದ ಬಳಿಕಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜತೆ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್‌ ಈ ಮಾಹಿತಿ ನೀಡಿದರು.

‘ಯೋಜನೆಗೆ ಒಟ್ಟು ₹ 29 ಸಾವಿರ ಕೋಟಿ ವೆಚ್ಚವಾಗಲಿದೆ ಎಂಬ ಅಂದಾಜು ಮಾಡಲಾಗಿತ್ತು. ರೈಲ್ವೆ ಇಲಾಖೆ ಈಗ ಭೂಮಿಯನ್ನು ಉಚಿತವಾಗಿ ಕೊಡುತ್ತಿರುವುದರಿಂದ ₹ 6 ಸಾವಿರ ಕೋಟಿಯಷ್ಟು ವೆಚ್ಚ ಕಡಿಮೆಯಾಗಲಿದೆ. ಈ ಭೂಮಿಗೆ ಸಾಂಕೇತಿಕವಾಗಿ 1 ರೂಪಾಯಿಯನ್ನು ವಾರ್ಷಿಕ ಗುತ್ತಿಗೆ ಮೊತ್ತವಾಗಿ ಪಡೆಯುತ್ತೇವೆ. ಯೋಜನೆ ಜಾರಿಗೆ ಸಂಬಂಧಿಸಿ ರಾಜ್ಯ ಸರ್ಕಾರ ವಿಧಿಸಿದ್ದ 19 ಷರತ್ತುಗಳನ್ನು ಸಡಿಲಿಸಬೇಕು ಎಂದು ಕೋರಿದ್ದೇನೆ. ಫೆ. 25ರಂದು ನಡೆಯಲಿರುವಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಮುಖ್ಯಮಂತ್ರಿಯವರೂ ಕೂಡಾ ಗೋಯೆಲ್‌ ಮಾತಿಗೆ ಸಹಮತ ವ್ಯಕ್ತಪಡಿಸಿದರು. ‘ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ 6 ವರ್ಷಗಳ ಒಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಭೂಮಿ ಹಸ್ತಾಂತರ ತ್ವರಿತವಾಗಿ ಆದಷ್ಟೂ ಕಾಮಗಾರಿಯ ವೇಗ ವರ್ಧಿಸುತ್ತದೆ’ ಎಂದು ಅವರು ಹೇಳಿದರು.

‘ಈ ಯೋಜನೆ ಬಗ್ಗೆ 20 ವರ್ಷಗಳಿಂದ ಬರೀ ಚರ್ಚೆ ನಡೆಯುತ್ತಿದೆ. 2018ರ ಸೆ. 16ರಂದು ಯೋಜನೆ ಬಗ್ಗೆ ಕೇಂದ್ರ ಸಚಿವರಾಗಿದ್ದ ಅನಂತ್‌ ಕುಮಾರ್‌ ಅವರ ಜತೆ ಚರ್ಚಿಸಿದ್ದೆ. ಅಂದಿನ ಕನಸು ಇಂದು ನನಸಾಗುತ್ತಿದೆ. ಭಾರತೀಯ ರೈಲು ತಾಂತ್ರಿಕ ಮತ್ತು ಆರ್ಥಿಕ ಸೇವಾ ಸಂಸ್ಥೆ (ರೈಟ್ಸ್‌) ಡಿಸೆಂಬರ್‌ನಲ್ಲಿ ಕಾರ್ಯಸಾಧ್ಯತಾ ವರದಿ ಸಲ್ಲಿಸಿದೆ. ಪ್ರಸಕ್ತ ವರ್ಷ ಮಧ್ಯಂತರ ಬಜೆಟ್‌ನಲ್ಲಿ ಈ ಯೋಜನೆಗೆ ಬೇಕಾದ ಅನುದಾನದ ಪ್ರಸ್ತಾವವನ್ನೂ ಇರಿಸಲಾಗಿದೆ. ರಾಜ್ಯ ಸರ್ಕಾರ ಮುಂದೆ ಹೆಜ್ಜೆಯಿಟ್ಟಲ್ಲಿಮುಂದಿನ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿರಿಸಲಾಗುವುದು’ ಎಂದು ಗೋಯಲ್‌ ವಿವರಿಸಿದರು.

‘ಈ ಯೋಜನೆಗೆ ಸಂಬಂಧಿಸಿ ವಿಶೇಷ ಉದ್ದೇಶದ ಘಟಕ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಏನಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಡಬಲ್‌ ಎಂಜಿನ್‌ ಇದ್ದರೆ ಕಾಮಗಾರಿ ವೇಗ ಪಡೆಯಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ಉಪನಗರ ರೈಲು ವಿಶೇಷ: ‘ಒಂದೇ ಹಂತದಲ್ಲಿ ಕಾಮಗಾರಿ ನಡೆಸಲಾಗುವುದು. ಅತ್ಯಾಧುನಿಕ, ಸ್ವಯಂ ಚಾಲಿತ ಸಿಗ್ನಲ್‌ ವ್ಯವಸ್ಥೆ
ಅಳವಡಿಸಲಾಗುವುದು, ಎ.ಸಿ ಕೋಚ್‌ಗಳನ್ನೇ ಹಳಿಗಿಳಿಸುತ್ತೇವೆ. ಈ ಯೋಜನೆಯ ಜಾಲದಲ್ಲಿ ಎತ್ತರಿಸಲ್ಪಟ್ಟ ಮಾರ್ಗ ಸುಮಾರು 70 ಕಿಲೋ ಮೀಟರ್‌ನಷ್ಟು ಇರಲಿದೆ’ ಎಂದು ವಿವರಿಸಿದರು.

‘ಮೆಟ್ರೊ– ಉಪನಗರ ರೈಲು, ಇತರ ರೈಲು ನಿಲ್ದಾಣಗಳ ಜತೆ ಸಂಪರ್ಕಿಸಲು 12 ಇಂಟರ್‌ಚೇಂಜ್‌ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಒಟ್ಟು 83 ನಿಲ್ದಾಣಗಳು ಇರಲಿವೆ. ಉಪನಗರ ರೈಲು, ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ಎಲ್ಲ ಸಾರಿಗೆ ಮಾಧ್ಯಮಗಳಿಗೆ ಒಂದೇ ಟಿಕೆಟ್‌ ನೀಡುವ ಯೋಜನೆಯೂ ಇದೆ’ ಎಂದು ಅವರು ಹೇಳಿದರು.

ಅಗತ್ಯ ಬಿದ್ದರೆ ಕಾರ್ಯಾಗಾರ:ಕೋಲಾರದ ರೈಲು ಕೋಚ್‌ ಕಾರ್ಖಾನೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಯ್‌ಬರೇಲಿಯ ಮಾಡರ್ನ್‌ ಕೋಚ್‌ ಫ್ಯಾಕ್ಟರಿಯಲ್ಲಿ ಈ ವರ್ಷ 1,422 ಕೋಚ್‌ಗಳು ನಿರ್ಮಾಣವಾಗಿವೆ. ಅದರ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲಾಗುವುದು. ಸದ್ಯ ರಾಜ್ಯಕ್ಕೆ ರೈಲು ಕಾರ್ಯಾಗಾರ ಕೊಡುತ್ತೇವೆ. ಮುಂದೆ ಕೋಚ್‌ಫ್ಯಾಕ್ಟರಿ ಬೇಕಿದ್ದರೆ ಕೊಡಬಹುದು. ಉಪನಗರ ರೈಲಿಗೆ ಇಲ್ಲಿಯೇ ಕೋಚ್‌ಗಳನ್ನು ಉತ್ಪಾದಿಸಬಹುದು ಎಂದು ತಿಳಿಸಿದರು.

ವೇಗ ಪಡೆದ ಕಾಮಗಾರಿ
2014ಕ್ಕಿಂತ ಹಿಂದೆ ವಾರ್ಷಿಕ 24 ಕಿಲೋಮೀಟರ್‌ಗಳಷ್ಟು ಮಾತ್ರ ರೈಲು ಮಾರ್ಗ ನಿರ್ಮಾಣಗೊಳ್ಳುತ್ತಿತ್ತು. ಅದೀಗ 64 ಕಿಲೋ ಮೀಟರ್‌ಗೆ ಏರಿದೆ. ದ್ವಿಪಥ ಹಳಿ ಕಾಮಗಾರಿ ಈ ಹಿಂದೆ ವಾರ್ಷಿಕ 35 ಕಿಲೋಮೀಟರ್‌ ಇತ್ತು. ಈಗ 56 ಕಿಲೋಮೀಟರ್‌ಗೆ ಏರಿದೆ. ವಿದ್ಯುತ್‌ ರೈಲುಗಳ ಸಂಖ್ಯೆಯೂ 21 ಪಟ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು.

ಇದನ್ನು ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳುತ್ತಿಲ್ಲ. ನಮ್ಮ ಅವಧಿಯಲ್ಲಾದ ಪ್ರಗತಿಯನ್ನು ಹೇಳಿದ್ದೇನೆ ಎಂದರು.

ಬಗೆಹರಿದ ತೊಡಕು: ಸಂಸದರ ಹರ್ಷ
ನಗರದ ನಾಗರಿಕರ ಮೂರು ದಶಕಗಳ ಬೇಡಿಕೆಯಾಗಿದ್ದ ಉಪನಗರ ರೈಲು ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುತ್ತಿದೆ ಎನ್ನುವುದು ಸಂತೋಷವನ್ನುಂಟು ಮಾಡಿದೆ. ಈ ಯೋಜನೆಗಿದ್ದ ತೊಡಕುಗಳನ್ನು ಬಗೆಹರಿಸಿದ್ದಕ್ಕಾಗಿ ಸಚಿವ ಪೀಯೂಷ್‌ಗೋಯಲ್ ಹಾಗೂ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಅಭಿನಂದಿಸುವುದಾಗಿ ಸಂಸದ ಪಿ.ಸಿ.ಮೋಹನ್‌ ಹೇಳಿದ್ದಾರೆ.

ಉಪನಗರ ರೈಲುಗಳು ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿವೆ. ಇದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರಿಗೆ ವ್ಯವಸ್ಥೆಯನ್ನೇ ಪರಿವರ್ತಿಸಲಿದೆ ಎಂದು ಅವರು ತಿಳಿಸಿದ್ದಾರೆ.

**

ರಾಜ್ಯ ಸರ್ಕಾರ ಭೂ ಸ್ವಾಧೀನ ವಿಳಂಬ ಮಾಡಿದರೆ ಕಾಮಗಾರಿ ವಿಳಂಬ ಮತ್ತು ವೆಚ್ಚ ಏರಿಕೆಯಾಗಲಿದೆ. ನಾವೇನೂ ಮಾಡಲಾಗದು. ಇದೆಲ್ಲವೂ ನಿಮ್ಮ (ಮುಖ್ಯಮಂತ್ರಿ) ಕೈಯಲ್ಲಿದೆ.
–ಪೀಯೂಷ್‌ ಗೋಯಲ್‌, ರೈಲ್ವೆ ಸಚಿವ

ಇದು ಸ್ವಾಗತಾರ್ಹ ಕ್ರಮ. ಒಂದು ಆಶಾದಾಯಕ ಬೆಳವಣಿಗೆ, ಸಂಪುಟದಲ್ಲಿ ಬೇಗನೇ ಅನುಮೋದನೆ ಸಿಗಬೇಕು. ಈ ಸಂಬಂಧಿಸಿದ ಪ್ರಕ್ರಿಯೆಗಳು ಬೇಗನೆ ಮುಗಿಯಬೇಕು.
–ಕೆ.ಎನ್‌.ಕೃಷ್ಣಪ್ರಸಾದ್‌, ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ

**

ಬೆಂಗಳೂರಿನ ಹಿತಾಸಕ್ತಿಯ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆ. ಇದಕ್ಕೆ ತಕ್ಕಂತೆ ಮುಂದಿನ ಪ್ರಕ್ರಿಯೆಗಳನ್ನು ಸಮರೋಪಾದಿಯಲ್ಲಿ ನಡೆಸುವಂತಾಗಬೇಕು. ಅಧಿಕಾರಿಗಳು ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು.
–ಸಂಜೀವ ದ್ಯಾಮಣ್ಣನವರ್‌, ‘ಪ್ರಜಾ’ ಸಂಘಟನೆಯ ಸಂಸ್ಥಾಪಕ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT