ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ಯೂಷನ್ ನೈಟ್ಸ್‌’ಗೆ ಬರ್ತಾರೆ ಸನ್ನಿ ಲಿಯೋನ್

ಕರವೇ ಯುವಸೇನೆ ಸಂಘಟನೆ ವಿರೋಧ
Last Updated 28 ಸೆಪ್ಟೆಂಬರ್ 2018, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಹೊಸ ವರ್ಷಾಚರಣೆ ವೇಳೆ ‘ಸನ್ನಿ ನೈಟ್ಸ್‌’ ಕಾರ್ಯಕ್ರಮ ಆಯೋಜಿಸಿ ಸುದ್ದಿಯಾಗಿದ್ದ ‘ಟೈಮ್ಸ್‌ ಕ್ರಿಯೇಷನ್ಸ್‌’, ಇದೀಗ ‘ಫ್ಯೂಷನ್ ನೈಟ್ಸ್‌’ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ನಟಿ ಸನ್ನಿ ಲಿಯೋನ್‌ ಅವರನ್ನೂ ಆಹ್ವಾನಿಸಿದೆ.

ನಗರದ ಮಾನ್ಯತಾ ಟೆಕ್‌ಪಾರ್ಕ್‌ನ ವೈಟ್‌ ಆರ್ಕೀಡ್‌ನಲ್ಲಿ ನವೆಂಬರ್ 3ರಂದು ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಜೊತೆಗೆ ರಘು ದೀಕ್ಷಿತ್‌ ಸಹ ಪಾಲ್ಗೊಳ್ಳಲಿದ್ದಾರೆ. ಬಾಲಿವುಡ್ ಹಾಗೂ ಕನ್ನಡ ಹಾಡುಗಳಿಗೆ ಧ್ವನಿಗೂಡಿಸಲಿದ್ದಾರೆ. ಸನ್ನಿ ನೃತ್ಯದ ಮೂಲಕ ಜನರನ್ನು ರಂಜಿಸಲಿದ್ದಾರೆ.

‘ಜನರನ್ನು ಮನರಂಜಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ಈಗಾಗಲೇ ಅನುಮತಿ ಪಡೆಯಲಾಗಿದೆ. ಸದ್ಯದಲ್ಲೇ ಟಿಕೆಟ್ ಬುಕ್ಕಿಂಗ್‌ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಟೈಮ್ಸ್ ಕ್ರಿಯೇಷನ್ಸ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಹರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ‘ಸನ್ನಿ ನೈಟ್ಸ್‌’ ಕಾರ್ಯಕ್ರಮದ ಉದ್ದೇಶ ತಿಳಿದುಕೊಳ್ಳದೇ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ, ನಾವು ಸಹ ಕೆಲವು ಕಾನೂನು ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಮಾಡದಿದ್ದರಿಂದ ಪೊಲೀಸರಿಂದ ಅನುಮತಿ ಸಿಕ್ಕಿರಲಿಲ್ಲ. ಕೊನೆಯ ಘಳಿಗೆಯಲ್ಲಿ ಕಾರ್ಯಕ್ರಮ ರದ್ದುಪಡಿಸಬೇಕಾಯಿತು. ಈ ಬಾರಿ ಎಲ್ಲ ಸಿದ್ಧತೆ ಮಾಡಿಕೊಂಡೇ ಕಾರ್ಯಕ್ರಮದ ದಿನಾಂಕ ಘೋಷಣೆ ಮಾಡಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ವಿರೋಧ: ‘ಫ್ಯೂಷನ್ ನೈಟ್ಸ್‌’ ಕಾರ್ಯಕ್ರಮ ಆಯೋಜನೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸುವುದಾಗಿ ಹೇಳಿರುವ ಸಂಘಟನೆ ಪದಾಧಿಕಾರಿಗಳು, ‘ಕಾರ್ಯಕ್ರಮವು ನಮ್ಮ ಸಂಸ್ಕೃತಿ ಅಲ್ಲ. ಸನ್ನಿ ಲಿಯೋನ್ ಬಂದರೆ, ನಮ್ಮ ಸಂಸ್ಕೃತಿಗೆ ಧಕ್ಕೆಯಾಗಲಿದೆ. ಅರೆನಗ್ನರಾಗಿ ನೃತ್ಯ ಮಾಡಿ ಯಾರನ್ನೂ ರಂಜಿಸುವ ಅಗತ್ಯವಿಲ್ಲ. ಆಕಸ್ಮಾತ್ ಅವರು ಬಂದರೆ, ಕಪ್ಪು ಬಾವುಟ ತೋರಿಸಿ ಕಾರ್ಯಕ್ರಮದ ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT