ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಕೊಚ್ಚಿಹೋದ 19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯತ್ನ ಮುಂದುವರಿದಿದ್ದು, ಸುರಕ್ಷತಾ ಕ್ರಮವಾಗಿ ಎಸ್‌ಡಿಆರ್‌ಎಫ್ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ 80ಕ್ಕೂ ಅಧಿಕ ಕಾರ್ಮಿಕರು, ಎಂಜಿನಿಯರ್‌ಗಳು ಪಾಲ್ಗೊಂಡಿದ್ದು, ಒಂದು ವೇಳೆ ಆಯತಪ್ಪಿ ನದಿಗೆ ಯಾರಾದರು ಬಿದ್ದುಬಿಟ್ಟರೆ ಅವರನ್ನು ರಕ್ಷಿಸುವ ಸಲುವಾಗಿ ಐದಾರು ಮಂದಿಯ ಎಸ್‌ಡಿಆರ್‌ಎಫ್ ಸಿಬ್ಬಂದಿ ನದಿಯ ಕೆಳಭಾಗದಲ್ಲಿ ಸಜ್ಜಾಗಿ ನಿಂತಿದ್ದಾರೆ.
ಸಂರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ದೋಣಿಗಳನ್ನು ಸಹ ತರಿಸಲಾಗುತ್ತಿದೆ.
ಮೊದಲ ಗೇಟ್ ಕೂರಿಸುವ ಯತ್ನ ಸಫಲವಾದರೆ ಇಡೀ ಕಾರ್ಯಾಚರಣೆಯ ಅರ್ಧ ಕೆಲಸ ಮುಗಿದಂತೆಯೇ ಎಂದು ಹೇಳಲಾಗುತ್ತಿದ್ದು, ರೈತರಿಗೆ, ಇಡೀ ನಾಡಿನ ಜನತೆಗೆ ಶುಕ್ರವಾರದೊಳಗೆ ಶುಭ ಸುದ್ದಿ ಲಭಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.