ಬೆಂಗಳೂರು: ‘ರಾಜ್ಯ ಸರ್ಕಾರವು ದೇವಾಲಯಗಳಿಗೆ ಅನುದಾನ ನೀಡುವಾಗ ಖಾಸಗಿ ದೇವಾಲಯಗಳಿಗೆ ಮಣೆ ಹಾಕಿದ್ದು, ಮುಜರಾಯಿ ದೇವಾಲಯಗಳಿಗೆ ಅನ್ಯಾಯವಾಗಿದೆ. ಅನುದಾನ ನೀಡುವಲ್ಲಿ ಅಕ್ರಮವೂ ನಡೆದಿದೆ’ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.
2017–18ರಿಂದ 2021–22ರವರೆಗಿನ ಐದು ಆರ್ಥಿಕ ವರ್ಷಗಳಲ್ಲಿ ದೇವಾಲಯಗಳಿಗೆ ಅನುದಾನ ಮಂಜೂರು ಮತ್ತು ಬಳಕೆಯ ಲೆಕ್ಕಪರಿಶೋಧನೆ ನಡೆಸಿರುವ ಸಿಎಜಿ, ಅನುದಾನ ಮಂಜೂರಾತಿಯಲ್ಲಿ ಏಕರೂಪತೆ ಇಲ್ಲ ಮತ್ತು ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಅಭಿಪ್ರಾಯ
ಪಟ್ಟಿದೆ. ಸಿಎಜಿ ಈಚೆಗೆ ಬಿಡುಗಡೆ ಮಾಡಿರುವ ‘ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ಅನುಪಾಲನಾ ಲೆಕ್ಕಪರಿಶೋಧನಾ ವರದಿ’ಯಲ್ಲಿ ಈ ಮಾಹಿತಿ ಇದೆ.
ಈ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್– ಕಾಂಗ್ರೆಸ್ ಮೈತ್ರಿ ಕೂಟ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸಿತ್ತು.
‘ಒಟ್ಟು ಅನುದಾನದಲ್ಲಿ ಶೇ 50ರಷ್ಟನ್ನು ಮುಜರಾಯಿ ದೇವಾಲಯಗಳಿಗೆ ಹಂಚಿಕೆ ಮಾಡಬೇಕು ಎನ್ನುತ್ತದೆ ನಿಯಮ. ಲೆಕ್ಕಪರಿಶೋಧನೆಗೆ ಆಯ್ಕೆಮಾಡಿಕೊಂಡ 11 ಜಿಲ್ಲೆಗಳಿಗೆ ಈ ಅವಧಿಯಲ್ಲಿ ಒಟ್ಟು ₹232.29 ಕೋಟಿ ಮಂಜೂರು ಮಾಡಲಾಗಿದೆ. ಇದರಲ್ಲಿ ಖಾಸಗಿ ದೇವಾಲಯಗಳಿಗೆ ₹187.81
ಕೋಟಿ (ಶೇ 81ರಷ್ಟು) ಅನುದಾನ ಹೋಗಿದೆ. ಮುಜರಾಯಿ ದೇವಾಲಯಗಳಿಗೆ ಸಿಕ್ಕಿದ್ದು ₹44.48 ಕೋಟಿ (ಶೇ 19ರಷ್ಟು) ಮಾತ್ರ. ಇದರಿಂದ ಮುಜರಾಯಿ ದೇವಸ್ಥಾನಗಳಿಗೆ ಅನ್ಯಾಯವಾಗಿದೆ’ ಎಂದಿದೆ ವರದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.