ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾರಂಟಿಗೆ ಕತ್ತರಿ: ಹೈಕಮಾಂಡ್‌ಗೆ ಒತ್ತಡ

Published 14 ಆಗಸ್ಟ್ 2024, 1:04 IST
Last Updated 14 ಆಗಸ್ಟ್ 2024, 1:04 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳ ಸ್ವರೂಪದಲ್ಲಿ ಬದಲಾವಣೆ ಮಾಡಬೇಕು ಎಂದು ಖುದ್ದು ಸಚಿವರೇ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಾರೆ. ಈ ಯೋಜನೆಗಳ ವ್ಯಾಪ್ತಿಯಿಂದ ಶ್ರೀಮಂತರನ್ನು ಹೊರಗಿಡಬೇಕು ಎಂದು ಒತ್ತಾಯಿಸಿದ್ದಾರೆ.  

ಎಐಸಿಸಿ ‍ಪ್ರಧಾನ ಕಾರ್ಯದರ್ಶಿಗಳು ಹಾಗೂ ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಭಾಗಿಯಾಗಲು ರಾಷ್ಟ್ರ ರಾಜಧಾನಿಗೆ ಬಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ನಾಯಕರಿಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಅವರು ಹೈಕಮಾಂಡ್‌ನ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದರು. 

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದ ಸಚಿವರು, ಗ್ಯಾರಂಟಿಯ ಸಾಧಕ–ಬಾಧಕ, ಲೋಪ–ದೋಷಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜತೆಗೆ ಚರ್ಚಿಸುವುದಾಗಿ ಸುರ್ಜೆವಾಲಾ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. 

ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಯೋಜನೆಗಳ ವಿರುದ್ಧ ಹೇಳಿಕೆ ನೀಡದಂತೆ ಪಕ್ಷದ ನಾಯಕರು ಹಾಗೂ ಶಾಸಕರಿಗೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಆದರೆ, ಗ್ಯಾರಂಟಿ ಸ್ವರೂಪದಲ್ಲಿ ಪರಿಷ್ಕರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಚಿವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕ ₹59 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಈ ಯೋಜನೆಗಳ ಅನುಷ್ಠಾನದಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದು ಹಲವು ಶಾಸಕರು ಅಳಲು ತೋಡಿಕೊಂಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಹಾಗೂ ಅಭಿವೃದ್ದಿ ಕಾರ್ಯಗಳು ಜತೆ ಜತೆಯಾಗಿ ಸಾಗಬೇಕು. ಜತೆಗೆ, ಐದು ಗ್ಯಾರಂಟಿಗಳ ಲಾಭ ಬಡವರಿಗೆ ಮಾತ್ರ ಸಿಗಬೇಕು. ಈಗ ಉಳ್ಳವರು ಲಾಭ ಪಡೆದು ಯೋಜನೆಗಳ ಕುರಿತು ಲೇವಡಿ ಮಾಡುತ್ತಿದ್ದಾರೆ. ಅಂತಹ ಅನರ್ಹ ಫಲಾನುಭವಿಗಳನ್ನು ಕೈಬಿಟ್ಟರೆ ₹20 ಸಾವಿರ ಕೋಟಿಯನ್ನು ಉಳಿಸಬಹುದು. ಈ ಮೊತ್ತವನ್ನು ಅಭಿವೃದ್ಧಿ ಕಾಮಗಾರಿ ಹಾಗೂ ಹೊಸ ಯೋಜನೆಗಳ ಜಾರಿಗೆ ಬಳಸಬಹುದು’ ಎಂದು ಸಚಿವರೊಬ್ಬರು ತಿಳಿಸಿದರು. 

‘ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕನಿಷ್ಠ 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಗ್ಯಾರಂಟಿ ಕೈಹಿಡಿದು ಮತ ತಂದುಕೊಡಬಹುದು ಎಂಬ ವಿಶ್ವಾಸ ಇತ್ತು. ಆದರೆ, ಪಕ್ಷ ಗೆದ್ದಿರುವುದು 9 ಕ್ಷೇತ್ರಗಳಲ್ಲಷ್ಟೆ. ಸಾಂಪ್ರದಾಯಿಕ ಮತದಾರರು ಪಕ್ಷದ ಕೈ ಹಿಡಿದಿದ್ದಾರೆ. ಹೀಗಾಗಿ, ಬಡವರಿಗೆ ಮಾತ್ರ ಯೋಜನೆಯ ಲಾಭ ಸಿಗುವ ರೀತಿಯಲ್ಲಿ ಮಾನದಂಡ ರೂಪಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಜತೆಗೆ ಸಮಾಲೋಚನೆ ನಡೆಸಿ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದಾಗಿ ಹೈಕಮಾಂಡ್‌ಗೆ ಮನವಿ ಮಾಡಿರುವೆ’ ಎಂದು ವಿವರಿಸಿದರು. 

‘ಆಂಧ್ರ ಪ್ರದೇಶದಲ್ಲಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರವು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿತ್ತು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಜಗನ್‌ ಪಕ್ಷ ಹೀನಾಯವಾಗಿ ಸೋತಿತ್ತು. ಇದನ್ನು ಸಹ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು. 

‘ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ತಲಾ ₹2 ಸಾವಿರ ನೀಡಲಾಗುತ್ತಿದೆ. ಈ ಯೋಜನೆಗೆ ವೈಜ್ಞಾನಿಕವಾಗಿ ಮಾನದಂಡ ರೂಪಿಸಿಯೇ ಇಲ್ಲ. ಆದಾಯ ತೆರಿಗೆ ಪಾವತಿಸುವವರ ಕುಟುಂಬಕ್ಕೆ ಮಾತ್ರ ಗೃಹಲಕ್ಷ್ಮಿ ಸಿಗುತ್ತಿಲ್ಲ. ಇದು ಸರಿಯಲ್ಲ. ಈ ಮೊತ್ತ ಬಡವರಿಗೆ ಮಾತ್ರ ತಲುಪಿದರೆ ಯೋಜನೆಯ ನೈಜ ಆಶಯ ಈಡೇರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT