ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿಗೆ ಚಿನ್ನದ ಕಿರೀಟ, ಬೆಳ್ಳಿ ಸಿಂಹಾಸನ, ಇನೋವ ಕಾರು ಸಮರ್ಪಣೆ

Last Updated 27 ಜುಲೈ 2018, 11:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಲವೆಡೆ ಭಕ್ತಿಪೂರ್ವಕವಾಗಿ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಹಲವು ದೇವಾಲಯಗಳಲ್ಲಿ ವಿಶೇಷ–ಪೂಜೆ ಪುನಸ್ಕಾರಗಳು ಜರುಗುತ್ತಿವೆ. ದೇವಸ್ಥಾನಗಳು ಅಲಂಕಾರದಿಂದ ಕಂಗೊಳಿಸಿದರೆ, ಭಕ್ತರು ಭಜನೆಯಲ್ಲಿ ಲೀನವಾಗಿರುವ ನೋಟಗಳು ಕಂಡುಬರುತ್ತಿವೆ.
**

ಹೊಸಪೇಟೆ: ಗುರು ಪೂರ್ಣಿಮೆ ನಿಮಿತ್ತ ಹಂಪಿ ವಿದ್ಯಾರಣ್ಯ ಸ್ವಾಮೀಜಿ ಅವರು ವಿದ್ಯಾರಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಬಳಿಕ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಪ್ರಕಟಣೆ ತಿಳಿಸಿದೆ.

ಗುರು ಪೂರ್ಣಿಮೆ ಅಂಗವಾಗಿ ನಗರದ ಸಾಯಿಬಾಬಾ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ವಿವಿಧ ಕಡೆಗಳಿಂದ ಭಕ್ತರು ಬಂದು ದರ್ಶನ ಪಡೆದರು.
***


ಹಾವೇರಿ:ಸಮೀಪದ ಕಾಗಿನೆಲೆಯಲ್ಲಿ ಶುಕ್ರವಾರ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿಗೆ ಮೈಸೂರು ಕುರುಬ ಸಮಾಜದಿಂದ ಚಿನ್ನದ ಕಿರೀಟ, ಬೆಳ್ಳಿ ಸಿಂಹಾಸನ ಹಾಗೂ ಇನ್ನೋವ ಕಾರು ಸಮರ್ಪಣೆ ಮಾಡಲಾಯಿತು.


ಮೈಸೂರಿನ ಶಿವಾನಂದಪೂರಿ ಸ್ವಾಮೀಜಿ, ಕುರುಬ ಜಡೆ ದೇವರ ಮಠದ ಅಮೋಘ ಸಿದ್ದೇಶ್ವರಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ಇದ್ದರು.

***
ಎರಡನೆಯ ಆಷಾಢ ಶುಕ್ರವಾರ; ಭಕ್ತ ಸಂಖ್ಯೆ ಇಳಿಮುಖ
ಮೈಸೂರು:
ಎರಡನೆಯ ಆಷಾಢ ಶುಕ್ರವಾರ ಅಂಗವಾಗಿ ಇಲ್ಲಿನ ಚಾಮುಂಡಿಬೆಟ್ಟದಲ್ಲಿನ ಚಾಮುಂಡೇಶ್ವರಿ ದೇವಸ್ಥಾನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಆದರೆ, ಚಂದ್ರಗ್ರಹಣದ ಪ್ರಯುಕ್ತ ಭಕ್ತರ ಸಂಖ್ಯೆ ಕಡಿಮೆಯಿತ್ತು.

ನಸುಕಿನ 3 ಗಂಟೆಯಿಂದ ಚಾಮುಡೇಶ್ವರಿ ದೇವಿಗೆ ಮಹಾನ್ಯಾಸಪೂರ್ವಕ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರ ಪಾರಾಯಣ, ಮಹಾಮಂಗಳಾರತಿಯಾಯಿತು. ಆಮೇಲೆ ದೇವಿಯನ್ನು ಶೇಷವಾಹನ ಅಲಂಕೃತಗೊಳಿಸಲಾಯಿತು. ನಂತರ ನಸುಕಿನ 5ರಿಂದ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಯಿತು.

ಬೆಳಿಗ್ಗೆ 7.30ಕ್ಕೆ ಪ್ರದೋಷಕಾಲ ಅಭಿಷೇಕ ನಡೆಯಿತು. ರಾತ್ರಿ 9ರ ವರೆಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ನಂತರ ಚಂದ್ರಗ್ರಹಣ ಪ್ರಯುಕ್ತ ಪ್ರವೇಶದ್ವಾರವನ್ನು ಬಂದ್‌ ಮಾಡಲಾಗುವುದು. ಶನಿವಾರ ನಸುಕಿನ 5 ಗಂಟೆಗೆ ದೇವಸ್ಥಾನವನ್ನು ಸ್ವಚ್ಛಗೊಳಿಸಿದ ನಂತರ ಮೋಕ್ಷಪೂಜೆ, ಪೂರ್ಣಾಹುತಿ ನಡೆಯುವವು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್‌ ದೀಕ್ಷಿತ್ ತಿಳಿಸಿದರು.

ಬನ್ನಿಮಂಟಪದ ರಾಜು ಅವರು ದೇವಸ್ಥಾನದ ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ್ದರು.

ಕೊಯಮತ್ತೂರಿನ ದುರ್ಗಾ ಏಜೆನ್ಸಿಯ ತಿರುಮಲೈ ತಂಬು ಹಾಗೂ ಶಾಂತಿ ಅವರು ಸುಮಾರು 60 ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆಗೊಳಿಸಿದ್ದರು. ಕೇಸರಿಬಾತ್‌, ಉಪ್ಪಿಟ್ಟು, ಪೊಂಗಲ್, ಚಿತ್ರಾನ್ನ, ಕಡ್ಲೆಹುಳಿ, ವಾಂಗಿಬಾತ್, ಅನ್ನ–ಸಾಂಬಾರು, ಮೊಸರನ್ನ ಬಡಿಸಲಾಯಿತು.

‘200 ಬಾಣಸಿಗರು ಅಡುಗೆ ಸಿದ್ಧಗೊಳಿಸುತ್ತಿದ್ದು, ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 9 ವರ್ಷಗಳಿಂದ ಎರಡನೆಯ ಆಷಾಢ ಶುಕ್ರವಾರದಂದು ಪ್ರಸಾದ ವ್ಯವಸ್ಥೆಗೊಳಿಸುತ್ತಿದ್ದೇವೆ. ಆಷಾಢದ 4 ಶುಕ್ರವಾರಗಳಂದು ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಾಲಯ, ನಂಜನಗೂಡಿನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರಿನ ಕೆ.ಸಿ.ಬಡಾವಣೆಯ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಇರುತ್ತದೆ’ ಎಂದು ತಿರುಮಲೈ ತಂಬು ವಿವರಿಸಿದರು

***
ಮಾತೆ ಮಾಣಿಕೇಶ್ವರಿ ದರ್ಶನಕ್ಕಾಗಿ ಕಾದ ಕುಳಿತ ಭಕ್ತರು
ಸೇಡಂ(ಕಲಬುರ್ಗಿ):
ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಯಾನಾಗುಂದಿ ಮಾತೆ ಮಾಣಿಕೇಶ್ಬರಿ ಅಮ್ಮನವರ ದರ್ಶನಕ್ಕೆ ಬೆಳಿಗ್ಗೆ ಯಿಂದ ಭಕ್ತರು ಕಾದು ಕುಳಿತಿದ್ದಾರೆ..ಹುಣ್ಣಿಮೆಯ ದಿನದಂದು ದರ್ಶನ ನೀಡುತ್ತಾರೆ ಎಂಬ ಮಾಹಿತಿ ಅರಿತ ಭಕ್ತರ ದಂಡುಶುಕ್ರವಾರದ ಬೆಳಗಿನ ಜಾವವೇ ಮಾಣಿಕ್ಯಗಿರಿಯಲ್ಲಿ ತಂಡೋಪತಂಡವಾಗಿ ಆಗುಮಿಸಿ‌ ಸೇರಿದೆ.

ಚಂದ್ರ ಗ್ರಹಣ ನಿಮಿತ್ತ ಬೇಗ ಆಗಮಿಸಿ ದರ್ಶನ ನೀಡುತ್ತಾರೆ ಎಂಬ ಮಾಹಿತಿಯನ್ನು ಹೊಂದಿದ ಭಕ್ತರು ಆಗಮಿಸಿದ್ದಾರೆ. ಹಚ್ಚ ಹಸಿರಿನ ಸೊಬಗಿನಿಂದ ಕಂಗೋಳಿಸುತ್ತಿರುವ ಗಿರಿಯಲ್ಲಿ ಬಿಳಿ ಬಟ್ಟೆಯ ಧರಿಸಿದ ಭಕ್ತರ ಭಕ್ತಿಯ ಭಾವೈಕ್ಯ ಇಮ್ಮಡಿಗೊಳ್ಳುತ್ತಿದೆ.

ತಾಲ್ಲೂಕು, ಜಿಲ್ಲೆ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ. ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿದ್ದಾರೆ.

***
ವಿಜಯಪುರ: ವೇದಾಂತ ಕೇಸರಿ ಎಂದೇ ಖ್ಯಾತನಾಮರಾಗಿದ್ದ ನಗರದ ಜ್ಞಾನಯೋಗಾಶ್ರಮದ ಮಲ್ಲಿಕಾರ್ಜುನ ಶಿವಯೋಗಿಗಳ 33ನೇ ಪುಣ್ಯಸ್ಮರಣೆನಡೆಯುತ್ತಿದೆ.

ನಸುಕಿನ 4ಗಂಟೆಯಿಂದ 6ಗಂಟೆಯವರೆಗೆ ಜಪ ಯಜ್ಞ, 6ರಿಂದ 7ರವರೆಗೆ ಮಲ್ಲಿಕಾರ್ಜುನ ಶಿವಯೋಗಿಗಳ ಧ್ವನಿಸುರುಳಿ ಪ್ರವಚನದ ಪ್ರಸಾರ. 8ರಿಂದ 9ರವರೆಗೆ ಪ್ರಣವ ಮಂಟಪ ಪೂಜೆ ನಡೆದವು. ನಂತರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ನಿರಂತರ ಮಹಾ ಪ್ರಸಾದ ವಿತರಣೆ ನಡೆಯುತ್ತಿದೆ.

ಸಜ್ಜಕದ ಸವಿ:ದಾಸೋಹದ ಸಿದ್ಧತೆ ಭರದಿಂದ ನಡೆದಿವೆ. 16 ಕ್ವಿಂಟಲ್‌ ಸಜ್ಜಕ, 35 ಕ್ವಿಂಟಲ್‌ ಅಕ್ಕಿ ಬೇಯಿಸಲಿದ್ದು, 6 ಕ್ವಿಂಟಲ್‌ ತೊಗರಿ ಬೇಳೆಯ ಸಾಂಬಾರ್‌, 1 ಸಾವಿರ ಕುಂಬಳಕಾಯಿಯ ಪಲ್ಯವನ್ನು ಮಾಡಲು ಶುಕ್ರವಾರ ನಸುಕಿನ ನಾಲ್ಕು ಗಂಟೆಗೆ ಚಾಲನೆ ನೀಡಿದ್ದೇವೆ. ಕನಿಷ್ಠ 40,000 ಜನರು ಈ ಪ್ರಸಾದ ಸವಿಯಲಿದ್ದಾರೆ ಎಂದು ಅಡುಗೆಯ ಅಲ್ಲಪ್ಪ ಸಾಬಣ್ಣವರ ತಿಳಿಸಿದರು.

***
ಮದ್ದೂರು: ಸಮೀಪದ ಗೆಜ್ಜಲಗೆರೆ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ 6ನೇ ವರ್ಷದ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

ಮುಂಜಾನೆ ಬಾಬಾನಿಗೆ ವಿಶೇಷ ಅಭಿಷೇಕ ನಡೆಯಿತು. ಬಳಿಕ ವಿಶೇಷ ಹೂಗಳು ಹಾಗೂ ಚಿನ್ನಾಭರಣಗಳಿಂದ ಅಲಂಕರಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿದೆಡೆಗಳಿಂದ ಸಾಯಿ ಭಕ್ತರು ಮಂದಿರಕ್ಕೆ ಭೇಟಿ ನೀಡಿ ಬಾಬಾನಿಗೆ ವಿಶೇಷ ಹರಕೆ ಅಭಿಷ್ಟೆ ಸಲ್ಲಿಸಿದರು. ಆಗಮಿಸಿದ ಸಾವಿರಾರು ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಯಿತು.
***

ತುಮಕೂರು: ಗುರು ಪೂರ್ಣಿಮೆ ಪ್ರಯುಕ್ತ ನಗರ ಸೇರಿ ಜಿಲ್ಲೆಯಲ್ಲಿ ಶಿರಡಿ ಸಾಯಿ ಬಾಬಾ ಮಂದಿರಗಳಲ್ಲಿ, ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಪ್ರಸಾದ, ಪ್ರವಚನ ಭಜನೆ ಕಾರ್ಯಕ್ರಮಗಳು ನಡೆದವು.

ಪ್ರತಿ ವರ್ಷಕ್ಕಿಂತ ಈ ವರ್ಷ ಸ್ವಲ್ಪ ವಿಭಿನ್ನವಾಗಿ ಗುರುಪೂರ್ಣಿಮೆಯನ್ನು ನಗರದ ಶಿರಡಿ ಸಾಯಿ ಬಾಬಾ ಮಂದಿರಗಳಲ್ಲಿ ಆಚರಿಸಲಾಗುತ್ತಿದೆ. ಇದಕ್ಕಾಗಿ ಮಂದಿರದ ಟ್ರಸ್ಟ್‌ ಸಮಿತಿಗಳು ಭಕ್ತರಿಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಿದ್ದಾರೆ.

ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭಕ್ತರು ತೆರಳಿ ಪೂಜೆ ಸಲ್ಲಿಸಿದರು. ವಿಶೇಷವಾಗಿ ಸಾಯಿಬಾಬಾ ಮಂದಿರಗಳಲ್ಲಿ ಗುರುಪೂರ್ಣಿಮೆಯನ್ನು ಸಾಯಿ ಭಕ್ತರು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಿದ್ದಾರೆ.

ಶಿರಡಿ ಸಂಸ್ಥಾನದ ಸಂಪ್ರದಾಯದಂತೆ ಬೆಳಿಗ್ಗೆ ಕಾಕಡಾರತಿ, ಅಭಿಷೇಕ, ಅಲಂಕಾರ, ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ನಗರದ ಬೆಳಗುಂಬ ರಸ್ತೆಯ ಶಿರಡಿ ಸಾಯಿಬಾಬಾ ನಗರದ ಸಾಯಿಬಾಬಾ ಮಂದಿರ ಟ್ರಸ್ಟ್‌ನ ಸಾಯಿ ಬಾಬಾ ಮಂದಿರದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಾಬಾ ದರ್ಶನ ಪಡೆಯಲು ಭಕ್ತರ ನೂಕುನುಗ್ಗಲಿನ ವಾತಾವರಣ ಇದೆ.

ನಗರದ ಕುಣಿಗಲ್ ರಸ್ತೆಯ ರಾಮಕೃಷ್ಣನಗರದ ಶಿರಡಿ ಸಾಯಿನಾಥ ಸೇವಾ ಸಮಿತಿಯ ಸಾಯಿಬಾಬಾ ಮಂದಿರದಲ್ಲೂ ಭಕ್ತರು ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT