ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಮನವೊಲಿಕೆ ಸುಲಭವಾಗಿರಲಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಜನರ ಪ್ರೀತಿಗೆ ಮಣಿದು ಸ್ಪರ್ಧೆ: ಇಂದು ನಾಮಪತ್ರ ಸಲ್ಲಿಕೆ
Last Updated 8 ಜೂನ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಎಚ್‌.ಡಿ.ದೇವೇಗೌಡರನ್ನು ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಎಲ್ಲರ ಆಶೋತ್ತರಗಳಿಗೆ ಪ್ರೀತಿ ಪೂರ್ವಕವಾಗಿ ಮಣಿದರು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಎಚ್‌.ಡಿ ದೇವೇಗೌಡ ಸ್ಪರ್ಧಿಸುವುದನ್ನು ಕುಮಾರಸ್ವಾಮಿ ಸೋಮವಾರ ಬೆಳಿಗ್ಗೆ ಟ್ವೀಟ್‌ ಮೂಲಕ ಮಾಹಿತಿ ನೀಡಿದರು.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಭಾನುವಾರ ರಾತ್ರಿ ದೇವೇಗೌಡರಿಗೆ ಕರೆ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿನಂತಿಸಿ, ಬೆಂಬಲ ನೀಡುವುದಾಗಿ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

‘ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿ ಮೇರೆಗೆ ದೇವೇಗೌಡರು ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ರಾಜಕೀಯದಲ್ಲಿ ಜನರಿಂದಲೇ ಗೆಲುವು ಸೋಲುಗಳನ್ನು ಕಂಡಿರುವ, ಜನರಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ದೇವೇಗೌಡರನ್ನು ಒಪ್ಪಿಸುವುದು ಸುಲಭವಾಗಿರಲಿಲ್ಲ. ರಾಜ್ಯಸಭೆಯಲ್ಲಿ ದೇವೇಗೌಡರು ರಾಜ್ಯದ ಅಗ್ರ ಪ್ರತಿನಿಧಿಯಾಗಲಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ‘ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಜೆಡಿಎಸ್‌ 34 ಸದಸ್ಯ ಬಲ ಹೊಂದಿದ್ದು, ಹೆಚ್ಚುವರಿ ಮತವನ್ನು ದೇವೇಗೌಡರಿಗೆ ನೀಡಲು ಕಾಂಗ್ರೆಸ್‌ ಒಪ್ಪಿದೆ. ಗೌಡರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರಲು ಬಿಜೆಪಿಯೂ ನಿರ್ಧರಿಸಿದೆ.

‘ಬಿಜೆಪಿಯ ಎಲ್ಲ ವ್ಯಕ್ತಿಗಳಿಂದ ಸಂಪರ್ಕ ಕಡಿದುಕೊಳ್ಳಿ’
‘ಬಿಜೆಪಿಯ ಶಾಸಕರು, ಮಂತ್ರಿಗಳು ಮತ್ತು ನಾಯಕರು ಸೇರಿದಂತೆ ಯಾರ ಜತೆಗೂ ಸಂಪರ್ಕ ಇಟ್ಟುಕೊಳ್ಳಬಾರದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್ ಶಾಸಕರಿಗೆ ತಾಕೀತು ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಈ ಸಂಬಂಧ ನಾನು ನಮ್ಮ ಎಲ್ಲ ಶಾಸಕರಿಗೂ ನಿರ್ದೇಶನ ನೀಡಿದ್ದೇನೆ. ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ನಿಮ್ಮನ್ನು ಕರೆದು ಸಿಲುಕಿಸುವ ಪ್ರಯತ್ನ ಮಾಡಬಹುದು. ನಿಮ್ಮ ಹೆಸರು ದುರುಪಯೋಗ ಮಾಡಿಕೊಳ್ಳಬಹುದು. ಹೀಗಾಗಿ ಯಾರೂ ಬಿಜೆಪಿಯವರ ಜತೆ ಸೇರಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT