ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರ ನಡುವಿನ ಸಂಭಾಷಣೆ ಕುರಿತು ತನಿಖೆಗೆ ಆದೇಶಿಸಿ, ಪ್ರಾಮಾಣಿಕರು ಎನ್ನುವುದನ್ನು ಸಾಬೀತು ಮಾಡಲಿ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಅಪ್ಪ–ಮಕ್ಕಳ ಸಂಭಾಷಣೆಯಲ್ಲಿ ಪ್ರಸ್ತಾಪ ಮಾಡಿರುವ ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಮಹದೇವ್ ಸೇರಿದಂತೆ ಕೆಲವರನ್ನು ಎತ್ತುವಳಿಗಾಗಿಯೇ ನೇಮಿಸಿಕೊಳ್ಳಲಾಗಿದೆ. ತಕ್ಷಣ ಅವರನ್ನೆಲ್ಲ ವಜಾ ಮಾಡಬೇಕು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘ತಮ್ಮ ನಡುವೆ ನಡೆದಿರುವುದು ಶಾಲೆಗಳ ಸಿಎಸ್‌ಆರ್ ನಿಧಿಯ ಹಂಚಿಕೆಯ ಸಂಭಾಷಣೆ ಅಷ್ಟೆ. ವ್ಯವಹಾರದ ಮಾತು ಎನ್ನುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆತ್ಮಸಾಕ್ಷಿ ಇದ್ದರೆ ತಕ್ಷಣ ತನಿಖೆ ಮಾಡಿಸಿ, ಸತ್ಯವನ್ನು ಸಾರ್ವಜನಿಕರ ಮುಂದೆ ತೆರೆದಿಡಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ, ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರು ಎಲ್ಲದಕ್ಕೂ ಸಾಕ್ಷಿ ಕೇಳುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ ಒಂದಾದರೂ ಆರೋಪಗಳಿಗೆ ಸಾಕ್ಷಿ ನೀಡಲಿಲ್ಲ. ‘ಪೇಸಿಎಂ’ ಎಂದು ಅಬ್ಬರಿಸಿದವರು. ಈಗ ತೆಲಂಗಾಣ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಇವರದೇ ಫೋಟೊ ಅಂಟಿಸಿ ‘ಪೇಸಿಎಂ’ ಪ್ರಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಅವರ ಪುತ್ರ ವಿಜಯೇಂದ್ರ ಅವರನ್ನು ‘ಸೂಪರ್ ಸಿಎಂ’. ಎಲ್ಲದಕ್ಕೂ ಶೇ 25ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಈಗ ಅವರ ಪುತ್ರ ಯತೀಂದ್ರ ಏನು ಎಂದು ಪ್ರಶ್ನಿಸಿದರು.
‘ರಾಜಕೀಯದಲ್ಲಿ ನನ್ನನ್ನೂ ಸೇರಿದಂತೆ ಯಾರೂ ಸಾಚಾ ಇಲ್ಲ. ಶೇ 100ರಷ್ಟು ಶುದ್ಧ ಸಾಧ್ಯವಿಲ್ಲ. ಹಾಗಂತ ಕಾಂಗ್ರೆಸ್‌ನವರ ರೀತಿ ವರ್ಗಾವಣೆ, ನೇಮಕಾತಿಯಲ್ಲೂ ಹಣಕ್ಕೆ ಕೈಚಾಚಲಿಲ್ಲ. ಚುನಾವಣಾ ಖರ್ಚಿಗಾಗಿ ಹಣ ಸಂಗ್ರಹಿಸಿದ್ದೇವೆ. ಬಲಗೈಲಿ ತೆಗೆದುಕೊಂಡಿದ್ದನ್ನು ಎಡಗೈಲಿ ನೀಡಿದ್ದೇವೆ. ಪಕ್ಷ ಉಳಿಸಲು ಭಿಕ್ಷೆ ಬೇಡಿದ್ದೇವೆ. ದಂಧೆ ಮಾಡಿ ಗಂಟು ಇಟ್ಟಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.