ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ– ಜೆಡಿಎಸ್ ಮೈತ್ರಿ | ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ ಎಂದ ಎಚ್‌ಡಿಕೆ

Published 9 ಸೆಪ್ಟೆಂಬರ್ 2023, 9:19 IST
Last Updated 9 ಸೆಪ್ಟೆಂಬರ್ 2023, 9:19 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ಮತ್ತು ಬಿಜೆಪಿ ನಡುವಣ ಮೈತ್ರಿಯ ವಿಚಾರ ಆರಂಭಿಕ ಹಂತದ ಚರ್ಚೆಯಲ್ಲಿದೆ. ಕ್ಷೇತ್ರಗಳ ಹಂಚಿಕೆ ಕುರಿತು ಈವರೆಗೂ ಚರ್ಚೆ ನಡೆದಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಮೈತ್ರಿ ಮಾತುಕತೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಇನ್ನೂ ಹಲವು ವಿಷಯಗಳ ಬಗ್ಗೆ ಚರ್ಚೆ ಆಗಬೇಕಿದೆ. ಇದರಲ್ಲಿ ಕೊಟ್ಟು, ತೆಗೆದುಕೊಳ್ಳುವುದಷ್ಟೇ ಇಲ್ಲ. ವಿಶ್ವಾಸ, ಗೌರವವೂ ಮುಖ್ಯ’ ಎಂದರು.

‘ರಾಜ್ಯದ ಹಿತದೃಷ್ಟಿಯಿಂದ ಈ ರೀತಿಯ ಕೆಲವು ತೀರ್ಮಾನಗಳು ಆಗುತ್ತವೆ. ಕೆಲವು ದಿನಗಳವರೆಗೆ ಕಾದು ನೋಡಿ. ಕೆಲವರು ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ. ಆ ಬಗ್ಗೆ ಮುಂದೆ ಮಾತನಾಡೋಣ’ ಎಂದು ಹೇಳಿದರು.

‘ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ನಾನು ಆಭಾರಿ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮೈತ್ರಿಕೂಟ ರಚಿಸುವ ಬಗ್ಗೆ ಅವರು ಹೇಳಿದ್ದಾರೆ. ರಾಜ್ಯದ ಜನರನ್ನು ಲೂಟಿ ಮಾಡುತ್ತಿರುವವರಿಗೆ ಕಡಿವಾಣ ಹಾಕಲೇಬೇಕಿದೆ’ ಎಂದರು.

‘2018ರಲ್ಲಿ ಏನಾಗಿತ್ತು?’: ‘ಅನ್ನ ಹಳಸಿತ್ತು, ನಾಯಿ ಹಸಿದಿತ್ತು’ ಎಂಬ ಗಾದೆ ಮಾತು ಉಲ್ಲೇಖಿಸಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಬಿಜೆಪಿ–ಜೆಡಿಎಸ್‌ ಮೈತ್ರಿಯನ್ನು ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘2018ರಲ್ಲಿ ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು? ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ಆಗ ನಮ್ಮ ಮನೆಗೆ ಬಂದವರು ಯಾರು’ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ದುರಾಡಳಿತಕ್ಕೆ ಜನರು ಮೂರೇ ತಿಂಗಳಲ್ಲಿ ರೋಸಿ ಹೋಗಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ನಾಲ್ಕು ವರ್ಷಗಳ ಬಳಿಕ ಆಡಳಿತ ವಿರೋಧಿ ಅಲೆ ಬರುತ್ತದೆ. ಆದರೆ, ಈಗಿನ ಕಾಂಗ್ರೆಸ್‌ ಸರ್ಕಾರ ಮೂರೇ ತಿಂಗಳಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

‘ರಾಜ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ನಾವು ಏನೋ ಮಾಡಿಬಿಟ್ಟಿದ್ದೇವೆ ಎಂಬ ಅಮಲಿನಲ್ಲಿ ಅವರು ಇದ್ದಾರೆ. ಜೆಡಿಎಸ್‌ ಪಕ್ಷವನ್ನು ಮುಗಿಸಿ ಬಿಟ್ಟಿದ್ದೇವೆ. ಅಲ್ಲಿಂದ, ಇಲ್ಲಿಂದ ಕರೆದುಕೊಂಡು ಬರುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಕೊಡುತ್ತೇವೆ’ ಎಂದರು.

ಕಾಂಗ್ರೆಸ್ ಹತಾಶೆಯಲ್ಲಿದೆ: ‘ಹೊರ ನೋಟಕ್ಕೆ ಕಾಂಗ್ರೆಸ್‌ನವರು ಏನು ಬೇಕಾದರೂ ಹೇಳಬಹುದು. ವಾಸ್ತವವಾಗಿ ಅವರು ಹತಾಶರಾಗಿದ್ದಾರೆ. ಒಳಗಡೆ ಏನಿದೆ? ಅವರ ಶಕ್ತಿ ಏನು ಎಂಬುದು ನನಗೆ ಗೊತ್ತಿದೆ. ಅವರು ಯಾವ ಸಾಧನೆ ಮಾಡಿದ್ದಾರೆ ಎಂದು ಜನರು ಮತ ನೀಡುತ್ತಾರೆ? ಲೂಟಿ ಮಾಡಿದ ಹಣದಲ್ಲಿ ಜನರನ್ನು ಕೊಳ್ಳಬಹುದು ಎಂಬ ಭಾವನೆಯಲ್ಲಿದ್ದಾರೆ. ಅದು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

‘ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ’

‘ಲೋಕಸಭಾ ಚುನಾವಣೆಗೆ ಬಿಜೆಪಿ–ಜೆಡಿಎಸ್‌ ಮೈತ್ರಿ ಆಗಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮೈತ್ರಿ ಬಗ್ಗೆ ನಂತರ ಮಾತನಾಡುವೆ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳುತ್ತಿದ್ದಾರೆ. ಏನು ನಡೆಯುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ’ ಎಂದು ಬಿಜೆಪಿ ಮುಖಂಡ ವಿ. ಸೋಮಣ್ಣ ಹೇಳಿದರು. ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ಮೈತ್ರಿ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಅಕಾಲಿಕ ಅನಿಸುತ್ತದೆ. ಬಿಜೆಪಿ ರಾಜ್ಯ ನಾಯಕರು ಕೇಂದ್ರದ ವರಿಷ್ಠರ ಜತೆ ಮಾತನಾಡಬೇಕು. ಆ ಬಳಿಕವೇ ಸ್ಪಷ್ಟತೆ ಸಿಗುತ್ತದೆ. ಈ ಬಗ್ಗೆ ನಾನೂ ವರಿಷ್ಠರ ಜತೆ ಚರ್ಚಿಸುತ್ತೇನೆ’ ಎಂದರು.

‘ಅಧಿಕೃತ ಘೋಷಣೆಯಾಗಿಲ್ಲ’

‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಕುರಿತು ಚರ್ಚೆ ನಡೆಯುತ್ತಿದೆ. ಜೆಡಿಎಸ್‌ ನಾಯಕರು ಮೈತ್ರಿ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು. ‘ಕಳೆದ ಚುನಾವಣೆಯಲ್ಲಿ ನಾವು ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿದ್ದೇವೆ. ಅಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕಿದೆ. ಒಗ್ಗಟ್ಟಾಗಿ ಕೆಲಸ ಮಾಡಬಹುದು. ಅಧಿಕೃತವಾಗಿ ಮೈತ್ರಿಯ ಘೋಷಣೆಯಾದ ಬಳಿಕ ಎಲ್ಲವೂ ಗೊತ್ತಾಗಲಿದೆ’ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ– ಜೆಡಿಎಸ್‌ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಸೀಟು ಹಂಚಿಕೆ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಎರಡೂ ಪಕ್ಷಗಳ ವರಿಷ್ಠರ ಹಂತದಲ್ಲೇ ಮೈತ್ರಿಯ ನಿರ್ಧಾರ ಅಂತಿಮಗೊಂಡಿದೆ.

ಜೆಡಿಎಸ್‌ ನಾಯಕರು ಮೈತ್ರಿ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ಕೆಲವು ಮುಖಂಡರು ಜೆಡಿಎಸ್‌ ಜತೆಗಿನ ಮೈತ್ರಿಯನ್ನು ಖಚಿತಪಡಿಸಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಉಭಯ ಪಕ್ಷಗಳ ಮಧ್ಯೆ ಮೈತ್ರಿಯ ಕುರಿತು ಚರ್ಚೆ ಆರಂಭವಾಗಿತ್ತು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರ ಜತೆ ಚರ್ಚಿಸಿದ್ದರು.

ಇವನ್ನೂ ಓದಿ...

ಲೋಕಸಭೆ ಚುನಾವಣೆ | ಜೆಡಿಎಸ್ ಜತೆ ಮೈತ್ರಿ ಖಚಿತ, ಈಗಾಗಲೇ 4 ಕ್ಷೇತ್ರ ಅಂತಿಮ: ಯಡಿಯೂರಪ್ಪ

ಸಂಘರ್ಷವೇ ಆಗಲಿ, ಮಹಿಷ ದಸರೆಗೆ ಅವಕಾಶ ಕೊಡುವುದಿಲ್ಲ: ಸಂಸದ ಪ್ರತಾಪ ಸಿಂಹ

Lok Sabha Election 2024 | ಜೆಡಿಎಸ್‌ – ಬಿಜೆಪಿ ಮೈತ್ರಿಗೆ ಸಹಮತ: ಪ್ರತಾಪ ಸಿಂಹ

ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಅನಿವಾರ್ಯ: ಜಿ.ಟಿ. ದೇವೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT