ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿಯರಿಗೆ ‘ಮೈತ್ರಿ ಮುಟ್ಟಿನ ಕಪ್’ ವಿತರಣೆಗೆ ಚಾಲನೆ

Published 11 ಸೆಪ್ಟೆಂಬರ್ 2023, 9:24 IST
Last Updated 11 ಸೆಪ್ಟೆಂಬರ್ 2023, 9:24 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದ ವಿವಿಧ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಯುತ್ತಿರುವ 40 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಇಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಋತುಚಕ್ರದ ವೇಳೆ ಹೆಣ್ಣುಮಕ್ಕಳು ಬಹಳ ಅನನುಕೂಲಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಶಾಲಾ ಕಾಲೇಜಿಗೆ ಹೋಗುವುದಕ್ಕೇ ಹಿಂದೇಟು ಹಾಕುತ್ತಾರೆ. ಇದನ್ನು ತಪ್ಪಿಸಲು 2013–14ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ ಒದಗಿಸುವ ಯೋಜನೆ ಆರಂಭಿಸಿತ್ತು. ಮಹಿಳಾ ಸಬಲೀಕರಣದ ಉದ್ದೇಶದಿಂದ ಕೈಗೊಂಡ ಈ ಯೋಜನೆಯಿಂದ ಲಕ್ಷಾಂತರ ವಿದ್ಯಾರ್ಥಿನಿಯರಿಗೆ ಪ್ರಯೋಜನವಾಗಿತ್ತು. ಮೂರು ವರ್ಷಗಳಿಂದ ಇದನ್ನು ಸ್ಥಗಿತಗೊಳಿಸಲಾಗಿತ್ತು. ಈ ಕಾರ್ಯಕ್ರಮದಡಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಪುನರಾರಂಭಿಸದ್ದೇವೆ. ಇದಕ್ಕೆ ರಾಜ್ಯದ ನಾಲ್ಕು ವಿಭಾಗಳಲ್ಲಿ ಪ್ರತ್ಯೇಕವಾಗಿ ಟೆಂಡರ್‌ ಕರೆದಿದ್ದೇವೆ’ ಎಂದರು.

‘ಸರ್ಕಾರ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, 17 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಮುಟ್ಟಿನ ಕಪ್‌ಗಳನ್ನು ಉಚಿತವಾಗಿ ವಿತರಿಸಲು ‘ಶುಚಿ ನನ್ನ ಮೈತ್ರಿ’ ಯೋಜನೆಯನ್ನು ಆರಂಭಿಸಿದೆ. ಮುಟ್ಟಿನ ಕಪ್ ಧರಿಸುವ ಮೂಲಕ ವಿದ್ಯಾರ್ಥಿನಿಯರು ಋತುಚಕ್ರದ ದಿನಗಳನ್ನು ನಿರಾತಂಕವಾಗಿ ಕಳೆಯಬಹುದು. ಇದು ಪರಿಸರ ಸ್ನೇಹಿಯೂ ಆಗಿದೆ’ ಎಂದರು.

‘ಒಂದು ಮುಟ್ಟಿನ ಕಪ್ ಅನ್ನು ಐದರಿಂದ ಎಂಟು ವರ್ಷ ಮರುಬಳಕೆ ಮಾಡಬಹುದು. ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಆರಂಭಿಸಿದಾಗ ವಿದ್ಯಾರ್ಥಿನಿಯರ ತಾಯಂದಿರಿಂದಲೇ ವಿರೋಧ ವ್ಯಕ್ತವಾಗಿತ್ತು. ಜಾಗೃತಿ ಮೂಡಿಸಿದ ಬಳಿಕ ಅವರಿಗೂ ಇದರ ಪ್ರಯೋಜನಗಳು ಮನದಟ್ಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ 15 ಸಾವಿರ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ. ಕ್ರಮೇಣ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಿದ್ದೇವೆ’ ಎಂದರು.

‘ಮುಟ್ಟಿನ ದಿನಗಳು ಅಪವಿತ್ರ, ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಬಾರದು, ದೇವತಾ ಕಾರ್ಯಗಳಲ್ಲಿ ಭಾಗವಹಿಸಬಾರದು ಎಂಬ ಮೂಢನಂಬಿಕೆಗಳಿಂದ ವಿದ್ಯಾರ್ಥಿನಿಯರು ಹೊರಬರಬೇಕು. ಮುಟ್ಟು ಸಹಜ ಜೈವಿಕ ಕ್ರಿಯೆ. ಅದು ಅಪವಿತ್ರ ಅಲ್ಲ. ಈ ಬಗ್ಗೆಯೂ ಬಹಿರಂಗವಾಗಿ ಚರ್ಚೆ ಆಗಬೇಕು’ ಎಂದರು.

ಯೋಜನೆಯ ರಾಯಭಾರಿ ಸಿನಿಮಾ ನಟಿ ಸಪ್ತಮಿ ಗೌಡ, ‘‘ಶುಚಿ ನನ್ನ ಮೈತ್ರಿ‘ ಯೋಜನೆಯ ರಾಯಭಾರಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಋತುಚಕ್ರದ ಕಾರಣಕ್ಕೆ ಹೆಣ್ಣುಮಕ್ಕಳು ಚಟುವಟಿಕೆಯಿಂದ ಹಿಂದೆ ಸರಿಯುವುದನ್ನು ತಡೆಯಲು ಮುಟ್ಟಿನ ಕಪ್‌ ಸಹಕಾರಿ. ನನ್ನ ವೈಯಕ್ತಿಕ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ’‘ ಎಂದರು.

‘ನಾನು ಹದಿಹರೆಯದಲ್ಲಿದ್ದಾಗ ಮುಟ್ಟಿನ ಕಪ್‌ ಬಳಕೆ ಇರಲಿಲ್ಲ. ಆಗ ಬಳಸುತ್ತಿದ್ದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವುದು ಸವಾಲಾಗಿತ್ತು. ಬಳಸಿದ ಪ್ಯಾಡ್‌ಗಳನ್ನು ಪೇಪರ್‌ಗಳಲ್ಲಿ ಸುತ್ತಿ, ಪ್ರತ್ಯೇಕವಾಗಿ ಎತ್ತಿಟ್ಟು, ಬಿಸಾಡುವುದು ಮುಜುಗರದ ವಿಷಯವಾಗಿತ್ತು. ಆದರೆ ಮುಟ್ಟಿನ ಕಪ್‌ ಈ ಎಲ್ಲ ಮುಜುಗರಗಳಿಂದ ಮುಕ್ತಿ ನೀಡಲಿದೆ’ ಎಂದರು.

‘ಒಬ್ಬ ಮಹಿಳೆ ಎಲ್ಲ ಋತುಚಕ್ರಗಳನ್ನು ಪೂರೈಸುವಾಗ ಸುಮಾರು 200 ಕೆ.ಜಿ.ಗಳಷ್ಟು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಬೇಕಾಗುತ್ತದೆ. ಇದರಿಂದ ಎಷ್ಟೊಂದು ತ್ಯಾಜ್ಯ ಉತ್ಪತ್ತಿಯಾಗುತ್ತದೆ ನೀವೇ ಊಹಿಸಿ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಮುಟ್ಟಿನ ಕಪ್‌ ಬಳಕೆ ಸೂಕ್ತ. ಇದರ ಬಳಕೆಯೂ ಸರಳ. ಶುಚಿತ್ವ ಕಾಪಾಡುವುದಕ್ಕೂ ಇದು ಸಹಕಾರಿ. ಕಪ್‌ ಬಳಸಿದರೆ, ಬಟ್ಟೆಯಲ್ಲಿ ಮುಟ್ಟಿನ ದ್ರವದಿಂದ ಉಂಟಾಗುವ ಕಲೆಗಳ ಬಗ್ಗೆ, ರಕ್ತ ಒಸರುವಿಕೆಯ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಇವುಗಳ ನಿರ್ವಹಣೆಯೂ ಸುಲಭ. ಈ ಕಾರಣಕ್ಕಾಗಿಯೇ ದೇಶದ ಹಾಗೂ ಜಗತ್ತಿನ ಮಹಿಳೆಯರು ಮುಟ್ಟಿನ ಕಪ್‌ ಬಳಕೆಗೆ ಒಲವು ತೋರಿಸುತ್ತಿದ್ದಾರೆ’ ಎಂದರು.

‘ಮದುವೆಯಾಗದ ಹೆಣ್ಣುಮಕ್ಕಳು ಇದನ್ನು ಬಳಸಬಹುದೇ ಎಂಬ ಚಿಂತೆ ಅನೇಕ ತಾಯಂದಿರನ್ನು ಕಾಡುತ್ತಿದೆ. ನನ್ನ ತಾಯಿಗೂ ಇಂತಹದೇ ಚಿಂತೆ ಇತ್ತು. ಇದರ ಮಹತ್ವದ ಬಗ್ಗೆ ಮೊದಲು ತಾಯಂದಿರಲ್ಲಿ ಅರಿವು ಮೂಡಿಸಬೇಕು. ಇದನ್ನು ಬಳಸುವ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಈ ಯೋಜನೆಯ ರಾಯಭಾರಿಗಳಾಗಬೇಕು. ಇದರ ಪ್ರಯೋಜನಗಳ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ ಇತರರೂ ಬಳಸುವಂತೆ ಪ್ರೇರೇಪಿಸಬೇಕು’ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ‌‌ ಮೇಯರ್‌ ಸುಧೀರ್‌ ಶೆಟ್ಟಿ, ಕಣ್ಣೂರು, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಆಯುಕ್ತ ಡಿ. ರಂದೀಪ್, ನಿರ್ದೇಶಕಿ ಡಾ.ಎಂ. ಇಂದುಮತಿ, ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ್ ಜಿ.ಎನ್., ವಿಭಾಗಿಯ ಸಹ ನಿರ್ದೇಶಕಿ ಡಾ.ರಾಜೇಶ್ವರಿ ದೇವಿ ಎಚ್. ಆರ್, ಉಪನಿರ್ದೇಶಕಿ ಡಾ. ವೀಣಾ ವಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT